ಚಾಲಕರಿಗೆ ನೆಮ್ಮದಿ ಬದುಕು ಕಲ್ಪಿಸುವುದು ನಮ್ಮ ಧ್ಯೇಯ: ಸಿಎಂ ಕುಮಾರಸ್ವಾಮಿ

Update: 2019-02-21 18:17 GMT

ಬೆಂಗಳೂರು, ಫೆ. 21: ಅಸಂಘಟಿತರಾಗಿರುವ ಆಟೋರಿಕ್ಷಾ, ಟ್ಯಾಕ್ಸಿ, ಲಾರಿ ಚಾಲಕರು ಸೇರಿದಂತೆ ಎಲ್ಲ ಚಾಲಕರಿಗೆ ನೆಮ್ಮದಿಯ ಬದುಕು ಕಲ್ಪಿಸುವುದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಧ್ಯೇಯ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಪೂರ್ವದ್ವಾರದಲ್ಲಿನ ವೈಭವೋಪೇತ ಮೆಟ್ಟಿಲುಗಳ ಮೇಲೆ ಪ್ರವಾಸೋದ್ಯಮ ಇಲಾಖೆಯಿಂದ ಏರ್ಪಡಿಸಿದ್ದ ಎಸ್ಸಿ-ಎಸ್ಟಿ, ಓಬಿಸಿ, ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ಪ್ರವಾಸಿ ಟ್ಯಾಕ್ಸಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರಮಿಕ ವರ್ಗದ ಜನರು ಸ್ವಾಭಿಮಾನದಿಂದ ಬದುಕಬೇಕು ಎಂಬುದು ನಮ್ಮ ಆಶಯ ಎಂದರು.

ಕಿರುಕುಳ ತಪ್ಪಿಸಬೇಕು: ಟ್ಯಾಕ್ಸಿ ಚಾಲಕರಿಗೆ ಓಲಾ-ಉಬರ್ ಕಂಪೆನಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಪ್ರವಾಸಿ ಟ್ಯಾಕ್ಸಿ ವಿತರಣೆ ಮೂಲಕ ಎಸ್ಸಿ-ಎಸ್ಟಿ ನಿರುದ್ಯೋಗಿಗಳನ್ನು ವಾಹನದ ಒಡೆಯರನ್ನಾಗಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ನುಡಿದರು.

ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ 2019-20ನೆ ಸಾಲಿನ ಆಯವ್ಯಯದಲ್ಲಿ ‘ಸಾರಥಿ ಸೂರು’ ಯೋಜನೆಯನ್ನು ಪ್ರಕಟಿಸಿದ್ದು, ಚಾಲಕರಿಗೆ ಕಡಿಮೆ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದ ಅವರು, ಚಾಲಕ ವೃತ್ತಿಯಲ್ಲಿರುವವರು ಕೊನೆಗಾಲದ ವರೆಗೂ ನೆಮ್ಮದಿಯಿಂದ ಬದುಕಬೇಕು ಎಂದು ಹೇಳಿದರು.

2018-19ನೆ ಸಾಲಿನ ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಎಸ್ಸಿ-ಎಸ್ಟಿ ವರ್ಗದ 557 ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ತಲಾ 3 ಲಕ್ಷ ರೂ.ಸಹಾಯಧನದ ಪ್ರವಾಸಿ ಟ್ಯಾಕ್ಸಿ ವಿತರಿಸಲು 16.71 ಕೋಟಿ ರೂ.ಒದಗಿಸಲಾಗಿದೆ. ಅದೇ ರೀತಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ 300 ಮಂದಿ ತಲಾ 3ಲಕ್ಷ ರೂ.ನಂತೆ 9 ಕೋಟಿ ರೂ.ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರಾದ ಬಾಲಕೃಷ್ಣ, ನಾರಾಯಣಗೌಡ, ಶರವಣ, ರಮೇಶ್‌ಗೌಡ, ಸಂಸದ ಪ್ರಕಾಶ್ ಹುಕ್ಕೇರಿ, ಇಲಾಖೆ ಕಾರ್ಯದರ್ಶಿ ಅನಿಲ್‌ಕುಮಾರ್, ನಿರ್ದೇಶಕಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೇರಿದಂತೆ ಇನ್ನಿತರರು ಹಾಜರಿದ್ದರು.

‘ಪ್ರವಾಸಿ ಟ್ಯಾಕ್ಸಿ ಮಾಲಕತ್ವ ಪಡೆದಿರುವ ಟ್ಯಾಕ್ಸಿ ಚಾಲಕರು ಯಾವುದೇ ಕಾರಣಕ್ಕೆ ಮೈಮರೆಯದೆ ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಬದುಕು ಕಟ್ಟಿಕೊಳ್ಳಬೇಕು. ಒಂದು ಕಾರಿನ ಜೊತೆಗೆ ಮತ್ತೊಂದು ಕಾರಿನ ಒಡೆಯರಾಗುವ ದಿಕ್ಕಿನಲ್ಲಿ ನಿಮ್ಮ ಆಲೋಚನೆ ಇರಲಿ’
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News