ಎಚ್‌ಎಎಲ್ ನಷ್ಟದಲ್ಲಿ ಇಲ್ಲ: ಎಚ್‌ಎಎಲ್ ಅಧ್ಯಕ್ಷ ಮಾಧವನ್

Update: 2019-02-21 15:40 GMT

ಬೆಂಗಳೂರು, ಫೆ.21: ಸರಕಾರಿ ಸ್ವಾಮ್ಯದ ಎಚ್‌ಎಎಲ್ ನಷ್ಟದಲ್ಲಿದೆ ಎನ್ನುವುದು ಸುಳ್ಳು ಮಾಹಿತಿ. ಆರ್ಥಿಕವಾಗಿ ಸದೃಢವಾಗಿದ್ದು, ಕಳೆದ ಡಿಸೆಂಬರ್‌ನ ಮಾಹಿತಿ ಪ್ರಕಾರ ಆರ್ಥಿಕತೆ ಹೆಚ್ಚಳವಾಗಿದೆ ಎಂದು ಎಚ್‌ಎಎಲ್ ಅಧ್ಯಕ್ಷ ಮಾಧವನ್ ಹೇಳಿದ್ದಾರೆ.

ನಗರದ ಯಲಹಂಕ ವಾಯುನೆಲೆಯಲ್ಲಿ ಅಂತರ್‌ರಾಷ್ಟ್ರೀಯ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಎಎಲ್‌ನಲ್ಲಿನ ನೌಕರರಿಗೆ ಸಂಬಳ ಸಿಗದಿರಲು ಬೇರೆ ಬೇರೆ ಕಾರಣಗಳಿವೆ. ಅದಕ್ಕೂ ಆರ್ಥಿಕವಾಗಿ ದುರ್ಬಲವಾಗಿದೆ ಎನ್ನುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಎಚ್‌ಎಎಲ್ ನೇತೃತ್ವದಲ್ಲಿ ಪ್ರದರ್ಶನ ನಡೆಸಲಾಗುತ್ತಿದೆ. ಎರಡು ರೀತಿಯ ಎಂಜಿನ್ ಡಿಸ್‌ಪ್ಲೇ ಹಾಕಲಾಗಿದೆ. ಹೊಸದಾಗಿ ಹೆಲಿಕಾಪ್ಟರ್ ತಯಾರಿಸಲಾಗಿದ್ದು, ನೌಕಾಸೇನೆಗೆ ಸಾಕಷ್ಟು ಉಪಯೋಗವಾಗಲಿದೆ. ಕಡಿಮೆ ತೂಕದ ಹೆಲಿಕಾಪ್ಟರ್‌ಗಳ ತಯಾರಿಕೆ ಮಾಡಲಾಗಿದೆ ಎಂದರು.
ಎಚ್‌ಎಎಲ್‌ನಲ್ಲಿ ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಮಾಡಲು ನಾವು ಮುಂದಾಗುತ್ತಿದ್ದೇವೆ. ಎಚ್‌ಎಎಲ್ ನಿರ್ಮಿತ ಮಿರಾಜ್ 2000 ವಿಮಾನ ಪತನವಾಗಿದ್ದು, ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಮಿರಾಜ್ ಅಪಘಾತದ ಹೊಣೆಯನ್ನ ನಾವೇ ಹೊರುತ್ತೇವೆ. ಏರ್‌ಫೋರ್ಸ್‌ಗೆ ಎಲ್ಲ ರೀತಿಯಲ್ಲೂ ನಾವು ಸಹಕಾರ ನೀಡುತ್ತೇವೆ. ಎಲ್‌ಸಿಎ ಹೆಲಿಕಾಪ್ಟರ್‌ಗೆ ದೇಶ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದನ್ನು ಎಚ್‌ಎಎಲ್‌ನಿಂದ ರಫ್ತು ಮಾಡಲಾಗ್ತಿದೆ. ಐಎಎಫ್‌ನಿಂದ ಹೊಸ 83 ಮಾಕ್-1 ವಿಮಾನಕ್ಕೆ ಬೇಡಿಕೆ ಇಟ್ಟಿದ್ದಾರೆ. 2022ಕ್ಕೆ 83 ಮಾಕ್-1 ಸಿದ್ಧವಾಗಲಿದೆ ಎಂದು ತಿಳಿಸಿದರು.

ಗುಣಮಟ್ಟ ಕಡಿಮೆಯಾಗಿದೆ ಎಂಬುದು ಸುಳ್ಳು. ನಾವು ಎಂದಿಗೂ ಗುಣಮಟ್ಟದೊಂದಿಗೆ ರಾಜೀ ಮಾಡಿಕೊಂಡಿಲ್ಲ.ನಾವು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಮಾಡುತ್ತಿದ್ದೇವೆ ಎಂದ ಅವರು, ರಫೇಲ್ ಯುದ್ಧ ವಿಮಾನದಲ್ಲಿ ಫ್ರಾನ್ಸ್ ಜತೆಗಿನ ಒಪ್ಪಂದದ ಕುರಿತು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು. ರಫೇಲ್ ವಿಚಾರವನ್ನಿಟ್ಟುಕೊಂಡು ಎಚ್‌ಎಎಲ್ ಸಾಮರ್ಥ್ಯದ ಬಗ್ಗೆ ಟೀಕೆ ಮಾಡಿದರಿಂದ ಸಹಜವಾಗಿ ಬೇಸರವಾಗಿದೆ. ಆದರೆ ನಾವು ಈ ವಿಚಾರದಲ್ಲಿ ಸ್ಥೈರ್ಯ ಕಳೆದುಕೊಂಡಿಲ್ಲ ಎಂದು ಮಾಧವನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News