ಶಾಹೀನ್ ಶಿಕ್ಷಣ ಸಂಸ್ಥೆ ವತಿಯಿಂದ ಹುತಾತ್ಮ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುಗೆ

Update: 2019-02-21 16:10 GMT

ಬೆಂಗಳೂರು, ಫೆ.21: ಶಾಹೀನ್ ಶಿಕ್ಷಣ ಸಂಸ್ಥೆ ಪುಲ್ವಾಮ ದುರಂತದಲ್ಲಿ ಮಡಿದ ಸೈನಿಕರ ಕುಟುಂಬಕ್ಕೆ ಸಂತಾಪ ಸೂಚಿಸುತ್ತದೆ, ಪುಲ್ವಾಮಾದಲ್ಲಿ ಭಯೋತ್ಪಾದಕರು ನಡೆಸಿದ ಇತ್ತೀಚಿನ ಹತ್ಯಾಕಾಂಡದಲ್ಲಿ ನಮ್ಮ ಸುಮಾರು 40 ಸೈನಿಕರು ಮಡಿದಿರುವುದು ಬಹಳ ಖೇದಕರ ಸಂಗತಿ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದ್ದಾರೆ.

ಶಾಹೀನ್ ಶಿಕ್ಷಣ ಸಂಸ್ಥೆಯ ನಿರ್ವಹಣಾ ವಿಭಾಗ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ದುಃಖತಪ್ತವಾಗಿರುವ ಇಡೀ ರಾಷ್ಟ್ರಕ್ಕೆ ಸಾಂತ್ವನ ಹೇಳಬಯಸುತ್ತೇವೆ. ರಾಷ್ಟ್ರಕ್ಕಾಗಿ ಮಡಿದ ಸೈನಿಕರು ಸದಾ ನಮ್ಮ ಪ್ರಾರ್ಥನೆಗಳಲ್ಲಿ ಮತ್ತು ಹೃದಯದಲ್ಲಿರುತ್ತಾರೆ ಎಂದು ಅವರು ಹೇಳಿದ್ದಾರೆ.

ನಮ್ಮ ದೇಶವನ್ನು ರಕ್ಷಿಸುವ ಈ ಸೈನಿಕರ ಸೇವೆ ಮತ್ತು ತ್ಯಾಗವಿಲ್ಲದೆ ದೇಶ ಅಸ್ತಿತ್ವದಲ್ಲಿರುತ್ತಿರಲಿಲ್ಲ. ಶಾಹೀನ್ ಶಿಕ್ಷಣ ಸಂಸ್ಥೆ ಈ ಘಟನೆಯಲ್ಲಿ ಮಡಿದ ಕುಟುಂಬಗಳು ಮತ್ತು ಅವರ ಮಕ್ಕಳ ಶೈಕ್ಷಣಿಕ ಅನುಕೂಲಗಳನ್ನು ಪೂರೈಸಲು ರಕ್ಷಣಾ ಸಚಿವಾಲಯದೊಂದಿಗೆ ಪಾಲುದಾರಿಕೆಗೆ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಕೇಂದ್ರ ರಕ್ಷಣಾ ಸಚಿವರಿಗೆ ಪತ್ರ ಬರೆಯಲಾಗಿದ್ದು, ಪ್ರಾಥಮಿಕ ಶಿಕ್ಷಣದಿಂದ 12ನೇ ತರಗತಿಯ ವರೆಗಿನ ಶಿಕ್ಷಣವನ್ನು ಸೈನಿಕರ ಮಕ್ಕಳಿಗೆ ಉಚಿತವಾಗಿ ನೀಡಲು ತೀರ್ಮಾನಿಸಿದೆ ಎಂದು ಅಬ್ದುಲ್ ಖದೀರ್ ಹೇಳಿದ್ದಾರೆ.

ಶಾಹೀನ್ ಶಿಕ್ಷಣ ಸಂಸ್ಥೆಯನ್ನು 1989 ರಲ್ಲಿ ಸ್ಥಾಪಿಸಲಾಯಿತು, ಇದು ಈಗ ಭಾರತದಾದ್ಯಂತ 32 ಶಾಖೆಗಳೊಂದಿಗೆ ಹೆಮ್ಮರವಾಗಿ ಬೆಳೆದಿದೆ. 2008 ರಿಂದ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸುಗಳಲ್ಲಿ ಸುಮಾರು 1200 ಉಚಿತ ಸರಕಾರಿ ಸೀಟುಗಳನ್ನು ಪಡೆದು ಶಾಹೀನ್ ಸಂಸ್ಥೆ ದಾಖಲೆ ನಿರ್ಮಿಸಿದೆ ಎಂದು ಅವರು ತಿಳಿಸಿದ್ದಾರೆ.

ಶೈಕ್ಷಣಿಕ ರಂಗಕ್ಕೆ ನೀಡಿದ ಕೊಡುಗೆಗೆ ಶಾಹೀನ್ ಸಂಸ್ಥೆ ಕರ್ನಾಟಕ ಸರಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದೆ. ಸೈನಿಕರ ಕುಟುಂಬಗಳ ಶೈಕ್ಷಣಿಕ ಹೊರೆಯನ್ನು ನಿವಾರಿಸಲು ಶಾಹೀನ್ ಸಂಸ್ಥೆ ಬದ್ಧವಾಗಿದೆಯೆಂದು ಅಬ್ದುಲ್ ಖದೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News