‘ಚಂಬಲ್’ ಚಿತ್ರ ಬಿಡುಗಡೆ ತಡೆಗೆ ಹೈಕೋರ್ಟ್ ನಕಾರ

Update: 2019-02-21 16:28 GMT

ಬೆಂಗಳೂರು, ಫೆ.21: ನೀನಾಸಂ ಸತೀಶ್ ನಟನೆಯ ‘ಚಂಬಲ್’ ಚಿತ್ರದ ಬಿಡುಗಡೆ ಮತ್ತು ಪ್ರದರ್ಶನಕ್ಕೆ ತಡೆ ನೀಡಲು ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ಈ ಸಂಬಂಧ ಮೃತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಹೆತ್ತವರು ‘ಚಂಬಲ್’ ಚಿತ್ರದ ಬಿಡುಗಡೆ ಮತ್ತು ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿತು. ಅಲ್ಲದೆ, ಫೆ.25ರಂದು ಚಂಬಲ್ ಸಿನಿಮಾದ ಸಿಡಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಲು ತಿಳಿಸಿದರು.

ಅರ್ಜಿದಾರರ ಪರ ವಾದಿಸಿದ ವಕೀಲ ಅಮೃತೇಶ್ ಅವರು, ಫೆ.22ರಂದು ಬಿಡುಗಡೆಗೊಳ್ಳಲು ಸಿದ್ಧವಾಗಿರುವ ‘ಚಂಬಲ್’ ಚಿತ್ರದಲ್ಲಿ ಡಿ.ಕೆ.ರವಿ ಅವರ ವ್ಯಕ್ತಿತ್ವ ಹಾಗೂ ಚಾರಿತ್ರಕ್ಕೆ ಧಕ್ಕೆ ಬರುವ ರೀತಿಯಲ್ಲಿ ತೋರಿಸಲಾಗಿದೆ. ಹೀಗಾಗಿ, ಈ ಚಿತ್ರದ ಬಿಡುಗಡೆ ಮತ್ತು ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಚಿತ್ರ ನಿರ್ದೇಶಕರು, ನಿರ್ಮಾಪಕರು ರವಿ ತಂದೆ ತಾಯಿ ಅವರ ಅನುಮತಿ ಪಡೆದಿಲ್ಲ. ಓರ್ವ ವ್ಯಕ್ತಿ ಸಮಾಜದಲ್ಲಿ ಘನತೆಯಿಂದ ಬದುಕಲು ಕಾನೂನಿನಡಿ ಅವಕಾಶ ಇದೆ. ಆದರೆ, ಚಿತ್ರರಂಗದಲ್ಲಿ ಕಾಲ್ಪನಿಕ ಕಥೆ ಅಂತಾ ಹೇಳಿ, ನೈಜ ಘಟನೆಗಳನ್ನು ಜನರಿಗೆ ತೋರಿಸುತ್ತಾರೆ. ಈಗಾಗಲೇ ಈ ರೀತಿ ಅನೇಕ ಸಿನಿಮಾಗೆ ಕೋರ್ಟ್ ತಡೆ ನೀಡಿದೆ ಎಂದು ಪೀಠಕ್ಕೆ ತಿಳಿಸಿದರು.

ಡಿ.ಕೆ.ರವಿ ಅವರ ಹೆತ್ತವರಿಗೆ ‘ಚಂಬಲ್’ ಚಿತ್ರದಲ್ಲಿ ತಮ್ಮ ಮಗನ ವ್ಯಕ್ತಿತ್ವ ಹಾಗೂ ಚಾರಿತ್ರಕ್ಕೆ ಧಕ್ಕೆ ಬರುವ ರೀತಿಯಲ್ಲಿ ತೋರಿಸಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಬಂದಿದ್ದಾರೆ. ಹೀಗಾಗಿ, ಈ ಚಿತ್ರದ ಬಿಡುಗಡೆ ಹಾಗೂ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ‘ಚಂಬಲ್’ ಚಿತ್ರದ ಬಿಡುಗಡೆ ಹಾಗೂ ಪ್ರದರ್ಶನಕ್ಕೆ ತಡೆ ನೀಡಲು ನಿರಾಕರಿಸಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News