ಮೆಹಬೂಬ ಮುಫ್ತಿ ಸೈನಿಕರನ್ನು ತಿಹಾರ್ ಜೈಲಿಗೆ ಹಾಕಿದ್ದರೇ ?

Update: 2019-02-21 18:42 GMT

ಹೊಸದಿಲ್ಲಿ, ಫೆ. 21: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿ ನಡೆದು 40 ಸಿಆರ್‌ಪಿಎಫ್ ಯೋಧರು ಜೀವ ಕಳೆದುಕೊಂಡಿರುವ ಬಗ್ಗೆ ಇಡೀ ದೇಶವೇ ಆಘಾತ ವ್ಯಕ್ತಪಡಿಸುತ್ತಿದೆ. ಇದೇ ವೇಳೆ ಈ ದಾಳಿ ನಡೆಯಲು ಭದ್ರತಾ ಲೋಪಗಳ ಬಗ್ಗೆ ತಜ್ಞರು ತನಿಖೆ ನಡೆಸುತ್ತಿದ್ದಾರೆ. 

ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ತೆಗೆದುಕೊಂಡ ಒಂದು ನಿರ್ಧಾರವೇ ಯೋಧರ ಪ್ರಾಣಹಾನಿಗೆ ಕಾರಣವಾಗಿದೆ ಎಂಬ ಸುದ್ದಿ ಕೆಲವು ದಿನಗಳಿಂದ ವ್ಯಾಪಕವಾಗಿ ಹರಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ನಿವೃತ್ತ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಜಿ.ಡಿ. ಭಕ್ಷಿ ಅವರು, ಶ್ರೀನಗರದ ಚೆಕ್‌ಪೋಸ್ಟ್ ಬಳಿ ನಡೆದ ಗುಂಡಿನ ದಾಳಿ ಘಟನೆಯಿಂದಾಗಿ ಸೇನಾ ಜವಾನರು ಕ್ಷಮೆಯನ್ನು ಕೇಳಲು ಒತ್ತಡ ಹೇರಿದ್ದು ಮಾತ್ರವಲ್ಲ ಅಂದಿನ ಮುಖ್ಯಮಂತ್ರಿ ಮೆಹಬೂಬ ಅವರು ಕೆಲವು ಜವಾನರನ್ನು ತಿಹಾರ್ ಜೈಲಿಗೆ ಕಳುಹಿಸಿದ್ದರು ಎಂದು ಹೇಳುತ್ತಿರುವುದು ದಾಖಲಾಗಿದೆ.

ಭಕ್ಷಿಯವರ ಹೇಳಿಕೆಯನ್ನೇ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಕೂಡಾ ಪ್ರತಿಪಾದಿಸಿದ್ದು ಈ ಜವಾನರು ಈಗಲೂ ಜೈಲಿನಲ್ಲೇ ಇದ್ದಾರೆ ಎಂದು ತಿಳಿಸಿದ್ದಾರೆ.

ಆದರೆ ಇಂಡಿಯಾ ಟುಡೆಯ ಸುಳ್ಳು ಸುದ್ದಿ ವಿರೋಧಿ ವಿಭಾಗ ನಡೆಸಿದ ತನಿಖೆಯಲ್ಲಿ ಭಕ್ಷಿಯವರ ಹೇಳಿಕೆಯಲ್ಲಿ ಹಲವು ದೋಷಗಳಿರುವುದು ಕಂಡು ಬಂದಿದೆ. ಭಕ್ಷಿಯವರ ಹೇಳಿಕೆ ಪ್ರಕಾರ, ಮೆಹಬೂಬ ಆಡಳಿತದ ಸಮಯದಲ್ಲಿ ಶ್ರೀನಗರದ ಹೊರಗೆ ಮೂರು ಸೇನಾ ಚೆಕ್‌ ಪೋಸ್ಟ್‌ಗಳಿದ್ದವು. ಒಂದು ದಿನ ಒಬ್ಬ ಕಾಶ್ಮೀರಿ ಈ ಪೈಕಿ ಒಂದು ಚೆಕ್‌ಪೋಸ್ಟ್‌ನಲ್ಲಿ ತನ್ನ ವಾಹನವನ್ನು ನಿಲ್ಲಿಸಿದನ್ನು ಪ್ರಶ್ನಿಸಿ ಮೊದಲ ಬ್ಯಾರಿಕೇಡ್ ಮುರಿದು ಮುಂದೆ ಸಾಗಿ ಎರಡನೇ ಬ್ಯಾರಿಕೇಡನ್ನು ಮುರಿದ. ಮೂರನೇ ಬ್ಯಾರಿಕೇಡನ್ನು ಮುರಿಯುವ ಹಂತದಲ್ಲಿ ಸೇನಾ ಯೋಧರು ಆತನ ವಾಹನದತ್ತ ಗುಂಡು ಹಾರಿಸಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದ.

ಘಟನೆ ಹಿನ್ನೆಲೆಯಲ್ಲಿ ಆರೋಪಿ ಜವಾನರನ್ನು ತಿಹಾರ್ ಜೈಲಿಗೆ ಕಳುಹಿಸಲಾಯಿತು ಮತ್ತು ಈ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಯಿತು ಎಂದು ಭಕ್ಷಿ ವೀಡಿಯೊದಲ್ಲಿ ತಿಳಿಸುತ್ತಾರೆ. ಭಕ್ಷಿ ಮತ್ತು ಸ್ವಾಮಿ ಹೇಳುತ್ತಿರುವ ಘಟನೆ ನಡೆದಿರುವುದು 2014ರ ನವೆಂಬರ್ 3ರಂದು ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಐದು ಯುವಕರು ಚಟ್ಟರ್‌ಗಾಮ್‌ನಿಂದ ನವ್‌ಗಾಮ್‌ಗೆ ತೆರಳುತ್ತಿದ್ದರು. ಈ ವೇಳೆ 53 ರಾಷ್ಟ್ರೀಯ ರೈಫಲ್ಸ್‌ನ ಜವಾನರು ಯುವಕರ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದರು. ಘಟನೆಯಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆಯ ಕುರಿತು ಸಾರ್ವಜನಿಕರು, ಪೊಲೀಸರು ಮತ್ತು ಸೇನೆ ಭಿನ್ನ ಹೇಳಿಕೆಯನ್ನು ನೀಡಿತ್ತು. ಭಕ್ಷಿ ಹೇಳುವಂತೆ ಈ ಸಮಯದಲ್ಲಿ ಮೆಹಬೂಬ ಕಣಿವೆ ರಾಜ್ಯದ ಮುಖ್ಯಮಂತ್ರಿಯಾಗಿರಲಿಲ್ಲ. ಆಗ ಮುಖ್ಯಮಂತ್ರಿಯಾಗಿದ್ದುದು ಉಮರ್ ಅಬ್ದುಲ್ಲಾ. ಮೆಹಬೂಬ ಮುಫ್ತಿ 2016ರಲ್ಲಿ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು.

ಘಟನೆಯ ಹಿನ್ನೆಲೆಯಲ್ಲಿ ಚಡೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ಜವಾನರ ವಿರುದ್ಧ ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಯೋಧರಿಗೆ ಶಿಕ್ಷೆಯಾಗಿರುವ ಬಗ್ಗೆ ಯಾವುದೇ ವರದಿಗಳು ಲಭ್ಯವಾಗಿಲ್ಲ.

ಆನ್‌ಲೈನ್ ಸುದ್ದಿಜಾಲ ದಿ ಕ್ವಿಂಟ್‌ನಲ್ಲಿ ಪ್ರಕಟವಾಗಿರುವ ಸವಿವರವಾದ ವರದಿಯಲ್ಲಿ, ಈ ವೇಳೆ ಸೇನೆಯ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಡಿ.ಎಸ್. ಹೂಡಾ ಅವರು ಜವಾನರನ್ನು ತನಿಖೆಗೊಳಪಡಿಸಲಾಗಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಲು ಭಕ್ಷಿಯವರನ್ನು ಇಂಡಿಯಾ ಟುಡೆ ಸಂಪರ್ಕಿಸಿದಾಗ ಅವರೂ, ಯೋಧರಿಗೆ ಶಿಕ್ಷೆಯಾಗಿದೆ ಎಂಬ ತನ್ನ ಹೇಳಿಕೆ ತಪ್ಪಾಗಿದೆ ಎಂದು ತಿಳಿಸಿದ್ದರು. ಆದರೆ ಕಣಿವೆಯ ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆಯನ್ನು ಸಡಿಲಗೊಳಿಸಲು ಪಿಡಿಪಿ ಸರಕಾರವೇ ಹೊಣೆ ಎಂದು ಪ್ರತಿಪಾದಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News