ಅನ್ನ ವ್ಯರ್ಥವಾಗದಂತೆ ಜಾಗೃತಿ ಮೂಡಿಸಲು ಕಾರ್ಯಕ್ರಮ: ಪಿ.ಜಿ.ಆರ್.ಸಿಂಧ್ಯ

Update: 2019-02-22 15:12 GMT

ಬೆಂಗಳೂರು, ಫೆ.22: ರಾಜ್ಯಾದ್ಯಂತ ಅನ್ನ ವ್ಯರ್ಥವಾಗದಂತೆ ನೋಡಿಕೊಳ್ಳಲು ಹೊಸ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಹೇಳಿದ್ದಾರೆ.

ನಗರದ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಸೈಡ್ಸ್‌ನ ಸಂಸ್ಥಾಪಕರ ಹುಟ್ಟಿದ ದಿನಾಚರಣೆ ಹಾಗೂ ವಿಶ್ವ ಭ್ರಾತೃತ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ ಸಂದೇಶದಂತೆ ಅನ್ನ ವ್ಯರ್ಥವಾಗದಂತೆ ನೋಡಿಕೊಳ್ಳಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು. ತುತ್ತು ಅನ್ನಕ್ಕೂ ಹಲವಾರು ಮಂದಿ ತುಂಬಾ ಕಷ್ಟಪಡ್ತಾರೆ. ಆದರೆ, ಮದುವೆ ಸಮಾರಂಭ ಸೇರಿದಂತೆ ಇನ್ನಿತರೆ ಸಾಮೂಹಿಕ ಕಾರ್ಯಕ್ರಗಳಲ್ಲಿ ತಟ್ಟೆಗೆ ಅನ್ನ ಹಾಕಿಸಿಕೊಂಡು, ಉಳಿಸುತ್ತಾರೆ. ಇದರಿಂದ ಅನ್ನ ವ್ಯರ್ಥವಾಗುತ್ತದೆ. ಹೀಗಾಗಿ, ಸ್ಕೌಟ್ಸ್ ಅಂಡ್ ಗೈಡ್ಸ್ ರೋವರ್ಸ್-ರೇಂಜರ್ಸ್‌ಗಳಿಂದ ರಾಜ್ಯಾದ್ಯಂತ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ನುಡಿದರು.

ರಾಜ್ಯ ಸರಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಕಾರ್ಯ ಚಟುವಟಿಕೆಗಳಿಗೆ 7 ಕೋಟಿ ರೂ. ಅನುದಾನ ಬಿಡುಗಡೆ ನೀಡಿದ್ದು, ಮಂದಿನ ದಿನಗಳಲ್ಲಿ ಹಂತ ಹಂತವಾಗಿ, ಹೊಸ ಕಾರ್ಯಕ್ರಮ ರೂಪಿಸುವುದಾಗಿ ಅವರು ತಿಳಿಸಿದರು.

ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಅರವಿಂದ್ ವರ್ಮ ಮಾತನಾಡಿ, ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳಲ್ಲಿ ಶಿಸ್ತು, ಸಹಬಾಳ್ವೆ, ಸಮಾನತೆ ಮತ್ತು ಭ್ರಾತೃತ್ವದ ಗುಣಗಳನ್ನು ಬೆಳೆಸುವ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.

ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ.ಚೆನ್ನಣ್ಣನವರ್ ಮಾತನಾಡಿ, ಯಾವುದೇ ಒಂದು ಗುಂಪು ಮುನ್ನಡೆಯಬೇಕಾದರೆ ಒಬ್ಬ ಸಮರ್ಥ ನಾಯಕನ ಅವಶ್ಯಕತೆ ಇದೆ. ನಾಯಕತ್ವ ಗುಣಗಳನ್ನು ಬೆಳೆಸುವ ತರಬೇತಿ ಕಾರ್ಯಕ್ರಮಗಳು ಅತ್ಯವಶ್ಯಕ. ನಾಯಕರಾದವರು ಅಹೋ ರಾತ್ರಿ ಉದ್ಭವವಾಗುವುದಿಲ್ಲ ಬದಲಿಗೆ ಅವಿರತ ಶ್ರಮ, ಉತ್ತಮ ವ್ಯಕ್ತಿತ್ವ ಮತ್ತು ಗುಣ ಮೈಗೂಡಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರದ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚೆನ್ನಣ್ಣನವರ್, ರಾಜ್ಯ ಆಯುಕ್ತ (ಸ್ಕೌ) ಎಂ.ಎ.ಖಾಲೀದ್, ರಾಜ್ಯ ಸಂಘಟನಾ ಆಯುಕ್ತ ಎಂ.ಪ್ರಭಾಕರ್ ಭಟ್, ಗೈಡ್ಸ್ ರಾಜ್ಯ ಆಯುಕ್ತೆ ಗೀತಾ ನಟರಾಜ್, ತರಬೇತಿ ಆಯುಕ್ತ ಕೆ.ವಿ. ಶಾಮಲಾ, ಕಾರ್ಯದರ್ಶಿ ಗಂಗಪ್ಪಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News