ಮಂಗನ ಕಾಯಿಲೆ ನಿಯಂತ್ರಣಕ್ಕೆ ಕ್ರಮ: ಸಚಿವ ಶಿವಾನಂದ ಪಾಟೀಲ್

Update: 2019-02-22 16:23 GMT

ಬೆಂಗಳೂರು, ಫೆ.22: ಕೆಎಫ್‌ಡಿ/ಮಂಗನ ಜ್ವರ ಕಾಯಿಲೆ ಪ್ರತಿ 5-10 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ. ಪ್ರತಿಬಾರಿ ಕಾಣಿಸಿಕೊಂಡಾಗ ಕಾಯಿಲೆಯ ವೈರಸ್‌ಗಳು ಬದಲಾಗಿರುತ್ತವೆ. ಹೀಗಾಗಿ ಸೂಕ್ತ ಔಷಧಿ ನೀಡುವಷ್ಟರಲ್ಲಿ ಕಾಯಿಲೆ ಉಲ್ಬಣವಾದ ಸ್ಥಿತಿ ಉಂಟಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

ಈವರೆಗೆ ಕೇವಲ ಶಿವಮೊಗ್ಗ ಜಿಲ್ಲೆಯೊಂದರಲ್ಲೆ 70 ಸಾವಿರಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದ್ದು, ಸಮರೋಪಾದಿಯಲ್ಲಿ ರೋಗ ಪ್ರಸರಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇನ್ನೂ 50 ಸಾವಿರಕ್ಕೂ ಹೆಚ್ಚು ಲಸಿಕೆಗಳು ಹಾಗೂ ಸಾಕಷ್ಟು ಪ್ರಮಾಣದಲ್ಲಿ ಡಿಎಂಪಿ ತೈಲ ಸಹ ಲಭ್ಯವಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಪಶುಸಂಗೋಪನೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಆಯಾ ಜಿಲ್ಲೆಗಳಲ್ಲಿ ನಿರಂತರವಾಗಿ ಸಮನ್ವಯ ಸಭೆ ನಡೆಸುತ್ತಿದ್ದಾರೆ. ಮಾಧ್ಯಮಗಳು ಈ ಕಾಯಿಲೆ ಕುರಿತು ಜನರಲ್ಲಿ ಆತಂಕ ಹೆಚ್ಚಿಸುವಂತೆ ನಕಾರಾತ್ಮಕ ವರದಿ ಮಾಡದೆ, ಜನರಿಗೆ ಸರಿಯಾದ ಮುಂಜಾಗ್ರತೆ ನೀಡುವ ವರದಿ ನೀಡುವಂತೆ ಶಿವಾನಂದ ಪಾಟೀಲ್ ಮನವಿ ಮಾಡಿದ್ದಾರೆ.

ಸತ್ಯಕ್ಕೆ ದೂರವಾದ ಸುದ್ದಿ: ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ‘ಚುನಾವಣಾ ಹೊತ್ತಲ್ಲಿ ಮಂಗನ ಜ್ವರ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಸಿಕೆ ನೀಡಲು ಸಾಧ್ಯವಾಗಿಲ್ಲ’ ಎಂದು ನಾನು ಹೇಳಿರುವುದಾಗಿ ವರದಿ ಪ್ರಕಟವಾಗಿದೆ. ನಾನು ಯಾವುದೇ ಮಾಧ್ಯಮ ಪ್ರತಿನಿಧಿಯೊಂದಿಗೂ ಈ ತರಹದ ಹೇಳಿಕೆ ನೀಡಿಲ್ಲ. ಪತ್ರಿಕೆಯಲ್ಲಿ ಬಂದಿರುವ ಈ ಹೇಳಿಕೆಯೂ ಸತ್ಯಕ್ಕೆ ದೂರವಾಗಿದ್ದು, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು, ಸಿಬ್ಬಂದಿಗಳು, ವೈದ್ಯೇತರ ಸಿಬ್ಬಂದಿಗಳು (ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನೀಡುವ ಕರ್ತವ್ಯದಲ್ಲಿ ತೊಡಗಿರುವ ಹೊರತಾಗಿ )ಇನ್ಯಾವ ಕಾರ್ಯದಲ್ಲಿ ತೊಡಗಿರುವುದಿಲ್ಲ. ಮಂಗನ ಜ್ವರ ಕಾಯಿಲೆ ಕಾಣಿಸಿಕೊಂಡ ಸಂದರ್ಭದಲ್ಲಿ ಯಾವುದೇ ಚುನಾವಣೆ ಇರಲಿಲ್ಲವೆಂಬುದು ಗಮನಾರ್ಹ ಎಂದು ಶಿವಾನಂದ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News