ಸಿನೆಮಾದ ಗೆಲುವಿಗೆ ಕತೆ ಮುಖ್ಯವೇ ಹೊರತು ಸ್ಟಾರ್‌ಗಿರಿಯಲ್ಲ: ಚಿತ್ರ ನಿರ್ದೇಶಕ ರಾಹುಲ್ ರವೈಲ್

Update: 2019-02-22 16:27 GMT

ಬೆಂಗಳೂರು, ಫೆ.22: ಸಿನೆಮಾದ ಗೆಲುವಿಗೆ ಕತೆಯೆ ಜೀವಾಳ. ನಂತರವಷ್ಟೆ ಸ್ಟಾರ್‌ಗಿರಿ, ಬಜೆಟ್ ಸೇರಿದಂತೆ ಎಲ್ಲವೂ ಸೇರ್ಪಡೆಯಾಗುತ್ತದೆ ಎಂದು ಬಾಲಿವುಡ್ ನಿರ್ದೇಶಕ ರಾಹುಲ್ ರವೈಲ್ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ನಗರದ ಒರಾಯನ್ ಮಾಲ್‌ನಲ್ಲಿ ನಡೆಯುತ್ತಿರುವ 11ನೆ ಬೆಂಗಳೂರು ಅಂತರ್‌ರಾಷ್ಟ್ರೀಯ ಸಿನೆಮೋತ್ಸವದಲ್ಲಿ ಸಿನೆಮಾ ನಿರ್ಮಾಣ ಕುರಿತು ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಿರ್ದೇಶಕನೊಬ್ಬನಿಗೆ ಸಿನೆಮಾದ ಎಲ್ಲ ನಿಯಮಗಳನ್ನು ಮುರಿಯುವ ಹಕ್ಕಿದೆ. ಹಾಗೆಂದು ಜನರ ಅಭಿರುಚಿಗೆ ವಿರುದ್ಧ ನಡೆಯುವುದು ಸರಿಯಲ್ಲ. ತನ್ನ ಕಲ್ಪನೆಗಳನ್ನು, ಆಲೋಚನೆಗಳನ್ನು ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ದೃಶ್ಯರೂಪಕ್ಕಿಳಿಸಬೇಕು. ತೆರೆಯ ಮೇಲೆ ಒಳ್ಳೊಳ್ಳೆಯ ದೃಶ್ಯಗಳಿದ್ದರೆ ಮಾತ್ರ ನೋಡುಗರ ಮನಸ್ಸನ್ನು ಸೆಳೆಯಲು ಸಾಧ್ಯವೆಂದು ಅವರು ತಿಳಿಸಿದರು.

ಎಂಬತ್ತರ ದಶಕದಲ್ಲಿ ಈಗಿರುವಷ್ಟು ಸೌಕರ್ಯ ಇರಲಿಲ್ಲ. ಈಗಿರುವಷ್ಟು ತಂತ್ರಜ್ಞಾನ ಇರಲಿಲ್ಲ. ಈಗ ಸಿನೆಮಾವನ್ನು ಚಿಕ್ಕ ಪೆನ್‌ಡ್ರೈವ್‌ನಲ್ಲಿ ಜಗತ್ತಿನ ಯಾವುದೆ ಮೂಲೆಗೆ ತೆಗೆದುಕೊಂಡು ಹೋಗಿ ಪ್ರದರ್ಶಿಸಬಹುದಾಗಿದೆ. ಇವೆಲ್ಲ ಆಧುನಿಕ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮೌಲ್ಯಯುತವಾದ, ಗುಣಾತ್ಮಕವಾದ ಸಿನೆಮಾವನ್ನು ನೀಡಬೇಕಿದೆ ಎಂದು ಅವರು ಆಶಿಸಿದರು.

ನಾನು ಸಿನೆಮಾ ಜಗತ್ತನ್ನು ಕನ್ನಡ, ತಮಿಳು, ತೆಲಗು, ಹಿಂದಿ ಹೀಗೆ ಭಾಷಾವಾರು ವರ್ಗೀಕರಿಸಲು ಹೋಗುವುದಿಲ್ಲ. ಸ್ಥಳೀಯ ಭಾಷೆಗಳಲ್ಲೂ ಉತ್ಕೃಷ್ಟವಾದ ಸಿನೆಮಾಗಳು ನಿರ್ಮಾಣಗೊಳ್ಳುತ್ತಿವೆ. ಕನ್ನಡದ ಕೆಜಿಎಫ್ ಇದಕ್ಕೊಂದು ಉದಾಹರಣೆಯಾಗಿದೆ. ಈಗ ನನಗೆ ಸಿನೆಮಾ ನಿರ್ದೇಶಿಸಬೇಕೆಂದು ಆಸೆ ಹೋಗಿದೆ. ಆದರೆ, ವೆಬ್ ಸಿರೀಸ್ ಮಾಡಬೇಕೆಂಬ ಆಸೆಯಿದೆ. ಆ ಬಗ್ಗೆ ಕಾರ್ಯಪ್ರವೃತ್ತನಾಗಿದ್ದೇನೆಂದು ಅವರು ಹೇಳಿದರು.

ಹದಿನಾರನೇ ವಯಸ್ಸಿಗೆ ಹಿರಿಯ ನಿರ್ದೇಶಕ ರಾಜ್‌ಕಪೂರ್ ಜೊತೆ ಕೆಲಸ ಆರಂಭಿಸಿದ್ದು ನನ್ನ ಅದೃಷ್ಟವೆಂದೆ ಭಾವಿಸುತ್ತೇನೆ. ನನ್ನ ಸಿನೆಮಾ ಬದುಕಿನಲ್ಲಿ ಅವರ ಪಾಲು ದೊಡ್ಡದಿದೆ. ನಾನು ನಿರ್ದೇಶಿಸಿದ ಲವ್‌ಸ್ಟೋರಿ ಸಿನೆಮಾ ದೊಡ್ಡ ಹೆಸರು ತಂದು ಕೊಟ್ಟಿತು. ಆ ಸಿನೆಮಾದಲ್ಲಿ ನನ್ನ ಹೆಸರನ್ನು ದಾಖಲಿಸಿರಲಿಲ್ಲ. ನಿರ್ದೇಶಕನ ಹೆಸರಿಲ್ಲದೆ ಬಿಡುಗಡೆಗೊಂಡ ವಿಶ್ವದ ಏಕೈಕ ಸಿನೆಮಾ ಇದಾಗಿದೆ ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News