ಬೆಂಗಳೂರು: ಅಂತರ್‌ರಾಷ್ಟ್ರೀಯ ಚಿತ್ರೋತ್ಸವಕ್ಕೆ ಹರಿದು ಬಂದ ಸಿನಿ ಪ್ರಿಯರು

Update: 2019-02-22 16:32 GMT

ಬೆಂಗಳೂರು, ಫೆ.22: ನಗರದ ಒರಾಯನ್ ಮಾಲ್‌ನಲ್ಲಿ ನಡೆಯುತ್ತಿರುವ 11ನೆ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದ ಮೊದಲ ದಿನ ಸಿನೆಮಾಸಕ್ತರ ದಂಡೆ ನೆರೆದಿತ್ತು. ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಲಗುಬಗೆಯಿಂದ ಸಿನೆಮಾ ಮಂದಿರಗಳ ಸುತ್ತಾ ಓಡಾಡುತ್ತಾ, ಸಿನೆಮಾ ವೀಕ್ಷಿಸುತ್ತಾ, ತಮ್ಮ ಗೆಳೆಯರೊಂದಿಗೆ ಸಿನೆಮಾ ಕುರಿತು ಚರ್ಚಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಒಟ್ಟು 11ಸ್ಕ್ರೀನ್‌ಗಳಲ್ಲಿ ಏಕಕಾಲದಲ್ಲಿ ವಿವಿಧ ದೇಶಗಳ 11 ಸಿನೆಮಾಗಳು ಪ್ರದರ್ಶನಗೊಳ್ಳುತ್ತವೆ. ಈ ಹನ್ನೊಂದು ಸಿನೆಮಾಗಳಲ್ಲಿ ಒಂದು ಸಿನೆಮಾವನ್ನು ಆಯ್ಕೆ ಮಾಡಿಕೊಂಡು ನೋಡಬೇಕಷ್ಟೆ. ಹೀಗಾಗಿ ಸಿನೆಮೋತ್ಸವಕ್ಕೆ ಬಂದಿರುವ ಎಲ್ಲ ಸಿನೆಮಾಗಳು ಉತ್ತಮ ಸಿನೆಮಾಗಳೆ ಆಗಿರುವುದರಿಂದ, ಸಿನಿಪ್ರಿಯರು ಯಾವುದನ್ನು ನೋಡುವುದು, ಯಾವುದನ್ನು ಬಿಡುವುದು ಎಂಬ ಗೊಂದಲದಲ್ಲಿದ್ದುದು ಕಂಡು ಬಂದಿತು.

ಕೆಲವರು ಸಿನೆಮೋತ್ಸವದಲ್ಲಿ ಪ್ರದರ್ಶನಗೊಳ್ಳುವ ಸಿನೆಮಾಗಳ ವಿವರಗಳನ್ನೊಳಗೊಂಡ ಪುಸ್ತಕವನ್ನು ಹಿಡಿದು, ಸಿನೆಮಾದ ಹೆಸರು, ಭಾಷೆ, ದೇಶ, ನಿರ್ದೇಶಕನ ಹೆಸರು ಹಾಗೂ ಕಥಾಸಾರಂಶವನ್ನು ಓದಿ ಹಾಗೂ ಸಿನೆಮೋತ್ಸವಕ್ಕೆ ಬಂದಿದ್ದ ಹಿರಿಯ ನಿರ್ದೇಶಕರ ಸಲಹೆ ಪಡೆದು ಸಿನೆಮಾ ಆಯ್ಕೆ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶುಕ್ರವಾರ ಫ್ರೆಂಚ್‌ನ ‘ದಿ ಟೀಚರ್’, ಚೀಲಿ ದೇಶದ ‘ಟೂ ಲೇಟ್ ಟು ಡೈ ಯಂಗ್’, ಉಕ್ರೇನ್ ದೇಶದ ವಾಲ್ಕೆನೋ, ಜರ್ಮನಿಯ ‘ಶೀಪ್ಲೆ’, ಚೀನಾದ ‘ದಿ ರಿಬ್’, ರಶ್ಯಾದ ‘ನೆವರ್ ಲೀವ್ ಮಿ’ ಸೇರಿದಂತೆ ಅಮೆರಿಕಾ, ಇಂಗ್ಲೆಂಡ್, ಚೀನಾ, ಇರಾನ್, ಸ್ಪೈನ್, ಪೆರು, ಬ್ರೆಝಿಲ್, ಆಸ್ಟ್ರೇಲಿಯಾ ದೇಶಗಳ ಸಿನೆಮಾಗಳು ಪ್ರದರ್ಶನಗೊಂಡವು.

ಅಂಬಿ ನೆನಪಿಗಾಗಿ 'ಅಂತ': ಇತ್ತೀಚೆಗಷ್ಟೆ ನಿಧನರಾದ ಹಿರಿಯ ನಟ ಅಂಬರೀಶ್‌ಗೆ ಅಂತರ್‌ರಾಷ್ಟ್ರೀಯ ಸಿನೆಮೋತ್ಸವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದ್ದು, ಅದರ ಸ್ಮರಣಾರ್ಥ ಅವರ ಅಭಿನಯದ ಐದು ಸಿನೆಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಇಂದು ಎಸ್.ವಿ.ರಾಜೇಂದ್ರಬಾಬು ನಿರ್ದೇಶನದ ‘ಅಂತ’ ಸಿನೆಮಾ ಪ್ರದರ್ಶನವಾಯಿತು.

ಕಳೆದ ಐದು ವರ್ಷಗಳಿಂದ ಬೆಂಗಳೂರು ಅಂತರ್‌ರಾಷ್ಟ್ರೀಯ ಸಿನೆಮೋತ್ಸವದಲ್ಲಿ ಭಾಗವಹಿಸುತ್ತಿದ್ದೇನೆ. ನಾನು ಸ್ವಂತ ಉದ್ಯೋಗ ಮಾಡುತ್ತಿರುವುರಿಂದ ಸಿನೆಮೋತ್ಸವ ಮುಗಿಯುವವರೆಗೆ ಉದ್ಯೋಗವನ್ನು ನಿಲ್ಲಿಸಿ, ಸಿನೆಮೋತ್ಸವದಲ್ಲಿ ಭಾಗವಹಿಸುತ್ತೇನೆ. ಈಗ ನೋಡುವ ಸಿನೆಮಾಗಳ ನೆನಪು ಮುಂದಿನ ಸಿನೆಮೋತ್ಸವ ಬರುವವರೆಗೆ ನನ್ನ ಮನಸಿನಲ್ಲಿ ಗಾಢವಾದ ಪ್ರಭಾವ ಬೀರುತ್ತಿರುತ್ತವೆ.

-ವೆಂಕಟೇಶ್ ಗಾಂಧಿನಗರ

ನಾನೊಬ್ಬ ಛಾಯಾಗ್ರಾಹಕ ಹಾಗೂ ಸಿನೆಮಾ ರಂಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕಳೆದ ಹಲವು ವರ್ಷಗಳಿಂದ ಸಿನೆಮೋತ್ಸವದಲ್ಲಿ ಛಾಯಾಗ್ರಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ಪಾಲಿಗೆ ಬೆಂಗಳೂರು ಅಂತರ್‌ರಾಷ್ಟ್ರೀಯ ಸಿನೆಮೋತ್ಸವ ಎಂಬುದು ಹಬ್ಬವಿದ್ದಂತೆ. ಹತ್ತಾರು ದೇಶಗಳ ನೂರಾರು ಸಿನೆಮಾಗಳು, ದೇಶ, ವಿದೇಶದ ಹಿರಿಯ ಸಿನೆಮಾ ನಿರ್ದೇಶಕರನ್ನು ಹತ್ತಿರದಿಂದ ನೋಡುವ ಅವಕಾಶ ಹಾಗೂ ಸಿನೆಮಾ ಕುರಿತು ಕೆಲವೊಂದು ಸಲಹೆಗಳನ್ನು ಪಡೆಯಲು ಸಿಗುವಂತಹ ಸುವರ್ಣಾವಕಾಶ ಇದಾಗಿದೆ.

-ಲೋಕೇಶ್ ಛಾಯಾಗ್ರಾಹಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News