ಉಗ್ರರ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳದಿರಲಿ: ವಾಟಾಳ್

Update: 2019-02-22 16:37 GMT

ಬೆಂಗಳೂರು, ಫೆ.22: ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಪುಲ್ವಾಮಾದ ಉಗ್ರರ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಹಾಗೂ ಉಗ್ರರಿಗೆ ತಕ್ಕ ಪ್ರತ್ಯುತ್ತರವನ್ನು ನೀಡಬೇಕೆಂದು ಆಗ್ರಹಿಸಿ ಫೆ.28 ರಂದು ಬೆಳಗ್ಗೆ 11 ಗಂಟೆಗೆ ರಾಜಭವನವನ್ನು ಮುತ್ತಿಗೆ ಹಾಕುವುದಾಗಿ ಕನ್ನಡ ಒಕ್ಕೂಟ ನಿರ್ಧರಿಸಿವೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಪುಲ್ವಾಮಾದಲ್ಲಿ ಉಗ್ರರಿಂದ ದಾಳಿಗೊಳಗಾದ ಸೈನಿಕರಿಗೆ ಗೌರವ ಸೂಚಿಸಬೇಕಾದರೆ, ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರವನ್ನು ಕೊಡಬೇಕು ಮತ್ತು ದಾಳಿಯಲ್ಲಿ ಬಲಿಯಾದ 40 ಯೋಧರಿಗೆ ತಲಾ 1 ಕೋಟಿ ನೀಡುವಂತೆ ಒತ್ತಾಯಿಸಿದರು.

ಪ್ರತ್ಯುತ್ತರ ನೀಡುವುದ್ದಕ್ಕಾಗಿ ವಿಶೇಷ ಪಾರ್ಲಿಮೆಂಟ್ ಅಧಿವೇಶನ ಕರೆದು ಅಧಿವೇಶನದಲ್ಲಿ ಪ್ರತಿಯೊಬ್ಬರ ಮಾತನ್ನು ಗಣನೆಗೆ ತೆಗೆದುಕೊಂಡು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವುದರ ಬಗ್ಗೆ ಪ್ರಧಾನಿಯವರು ಗಂಭೀರ ಚಿಂತನೆ ಮಾಡಬೇಕು. ಅಲ್ಲದೆ, ಅದರೊಂದಿಗೆ ವ್ಯವಹಾರವನ್ನು ಸ್ಥಗಿತಗೊಳಿಸುತ್ತೇವೆ ಹಾಗೂ ನೀರು ನಿಲ್ಲಿಸುತ್ತೇವೆ ಎನ್ನುವ ಸಣ್ಣ ವಿಚಾರಗಳನ್ನು ಬಿಟ್ಟು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ವಿಶ್ವ ಸಮುದಾಯದ ಕೊಂಡಿಯೊಂದಿಗಿನ ಪಾಕಿಸ್ತಾನದ ಸಂಬಂಧವನ್ನು ಒಂಟಿಯಾಗಿಸಬೇಕೆಂದು ತಿಳಿಸಿದರು.

ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡುವವರೆಗೂ ವಿವಿಧ ಹಂತಗಳಲ್ಲಿ ಮುತ್ತಿಗೆ ಹಮ್ಮಿಕೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಗಿರೀಶ್ ಗೌಡ, ಮುಬಾರಕ್ ಪಾಷ, ಸೇರಿದಂತೆ ಮತ್ತಿತರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News