'ಸ್ವರ್ಗದಲ್ಲಿ ಸುರಕ್ಷಿತ ಮಗು' ಯೋಜನೆಯಡಿ ಮಮತೆಯ ತೊಟ್ಟಿಲು ಆರಂಭ

Update: 2019-02-22 16:43 GMT

ಬೆಂಗಳೂರು, ಫೆ.22: ಪಾಲಕರಿಂದ ಕೈ ಬಿಟ್ಟ ಮಗುವಿಗೆ ಸುರಕ್ಷಿತ ಆಶ್ರಯ ಒದಗಿಸಲು ಮಮತಾ ಕಾ ಜೋಲಾ ಎಂಬ ಸಂಸ್ಥೆ ‘ಸ್ವರ್ಗದಲ್ಲಿ ಸುರಕ್ಷಿತ ಮಗು’ ಎಂಬ ಯೋಜನೆಯಡಿ ಮಮತೆಯ ತೊಟ್ಟಿಲು ಎಂಬ ವಿನೂತನ ಕಾರ್ಯಕ್ರಮವನ್ನು ಪರಿಚಯಿಸುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸರಸ ವಸುದೇವನ್, ಹುಟ್ಟಿದ ಮಗುವನ್ನು ಸ್ವಾಗತಿಸುವ ಬದಲು ಅನಾಥವಾಗಿ ಬಿಟ್ಟು ಬಿಡುವ ಸಂಪ್ರದಾಯ ಒಳ್ಳೆಯದಲ್ಲ. ಪ್ರತಿ ಮಗುವಿಗೂ ಬದುಕುವ ಹಕ್ಕು ಇದೆ. ಜೀವ ರಕ್ಷಣೆ ಎಲ್ಲರ ಹೊಣೆ. ಕೇವಲ ಪಾಲಕರು ಕೈಬಿಟ್ಟಿದ್ದರಿಂದ ಆ ಮಗುವಿನ ಬದುಕು ಹಾಳಾಗಬಾರದು ಎನ್ನುವ ಆಶಯದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮ ಅನಾಥ ಮಗುವಿನ ದುರ್ಬಳಕೆ ಹಾಗೂ ಮಗುವಿಗೆ ಕಳ್ಳತನ ತಪ್ಪಿಸುವ ಕಾರ್ಯ ಮಾಡಲಿದೆ. ಮಹಿಳೆಯರು ಅನಾಮಧೇಯತೆ ವ್ಯಕ್ತಪಡಿಸಲು ಬಯಸಿ ಅಜ್ಞಾತ ಸ್ಥಳದಲ್ಲಿ ನವಜಾತ ಶಿಶುಗಳನ್ನು ಬಿಟ್ಟು ತೆರಳುತ್ತಾರೆ. ಮನೆ ಆಸ್ಪತ್ರೆ ಬಾಗಿಲಲ್ಲಿ ಬೇಡದ ಮಗುವನ್ನು ಬಿಟ್ಟು ತೆರಳುವುದಕ್ಕಿಂತ ಕೆಟ್ಟ ಸನ್ನಿವೇಶ ಇಲ್ಲ. ಅಂತಹ ಮಕ್ಕಳ ಸುರಕ್ಷತೆಗಾಗಿ ಮಮತೆಯ ತೊಟ್ಟಿಲು ಆರಂಭಿಸಿದ್ದೇವೆ ಎಂದು ಹೇಳಿದರು.

ಸಂಸ್ಥೆಯ ಕೇಂದ್ರಗಳು ಹಾಗೂ ಪಿಎಚ್‌ಸಿ ಆಸ್ಪತ್ರೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತೊಟ್ಟಿಲುಗಳನ್ನು ಒದಗಿಸಲಾಗಿದ್ದು, ಅನಾಥ ಮಗುವನ್ನು ತಾಯಂದಿರು ಎಲ್ಲಿಯೋ ಎಸೆಯುವ ಬದಲು ಇಲ್ಲಿ ಬಿಟ್ಟು ತೆರಳಬಹುದು. ಅಲ್ಲದೆ, ಕೇಂದ್ರಗಳು ಉತ್ತಮ ಸೌಕರ್ಯ ಹೊಂದಿದ್ದು, ವಿಶ್ರಾಂತಿ ಇರಿಸುವ ತೊಟ್ಟಿಲು ವಿಶಾಲವಾಗಿದೆ ಹಾಗೂ ಗಾಳಿ ಬೆಳಕಿನ ಉತ್ತಮ ಸಂಪರ್ಕ ಹೊಂದಿದೆ. ತೊಟ್ಟಿಲಲ್ಲಿ ಮಗು ಕಾಣಸಿಕ್ಕರೆ 30 ಸೆಕೆಂಡ್ ಒಳಗೆ ವಿಶ್ರಾಂತಿ ಸಿಬ್ಬಂದಿಗೆ ತಿಳಿಯುತ್ತದೆ ಎಂದರು.

ಮೂರು-ನಾಲ್ಕು ನಿಮಿಷದಲ್ಲಿ ಮಗುವನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗುತ್ತದೆ. ಪ್ರಸ್ತುತ ಮಾಲೂರು ತಾಲೂಕಿನ ಯಶವಂತಪುರ ಹಾಗೂ ಕೋಲಾರದ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ತೊಟ್ಟಿಲು ಇರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 99808 55587 ಅನ್ನು ಸಂಪರ್ಕಿಸಲು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News