ಜಾಹೀರಾತು ನೀತಿ ಅಂತಿಮಗೊಳಿಸಲು ಹೈಕೋರ್ಟ್‌ಗೆ ಕಾಲಾವಕಾಶ ಕೋರಿದ ಬಿಬಿಎಂಪಿ

Update: 2019-02-22 16:50 GMT

ಬೆಂಗಳೂರು, ಫೆ.22: ಬೆಂಗಳೂರಿನಲ್ಲಿ ಫ್ಲೆಕ್ಸ್, ಹೋರ್ಡಿಂಗ್ಸ್ ಹಾವಳಿಗೆ ಕಡಿವಾಣ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಜಾಹೀರಾತು ನೀತಿಯನ್ನು ಅಂತಿಮಗೊಳಿಸಲು ಬಿಬಿಎಂಪಿ ಹೈಕೋರ್ಟ್‌ಗೆ 10 ದಿನಗಳ ಕಾಲಾವಕಾಶವನ್ನು ಕೋರಿದೆ.

ಫ್ಲೆಕ್ಸ್, ಹೋರ್ಡಿಂಗ್ಸ್ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ಹಂಗಾಮಿ ನ್ಯಾಯಮೂರ್ತಿ ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಬಿಬಿಎಂಪಿ ಪರ ವಾದಿಸಿದ ಸರಕಾರಿ ವಕೀಲ ಶ್ರೀನಿಧಿ ಅವರು, ಜಾಹೀರಾತು ನೀತಿಯನ್ನು ಜಾರಿಗೆ ತರಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಆದರೆ, ಬಿಬಿಎಂಪಿ ಬಜೆಟ್ ಹಾಗೂ ರಾಜ್ಯ ಸರಕಾರದ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಜಾಹೀರಾತು ನೀತಿಯನ್ನು ಅಂತಿಮಗೊಳಿಸಲು ಆಗಿರಲಿಲ್ಲ. ಜಾಹೀರಾತು ನೀತಿಯನ್ನು ಅಂತಿಮಗೊಳಿಸಲು 10 ದಿನಗಳು ಕಾಲಾವಕಾಶ ಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಈ ಮನವಿಯನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

ಅನಧಿಕೃತವಾಗಿ ಜಾಹೀರಾತು ಹಾಕಿದವರ ವಿರುದ್ಧ ಈಗಾಗಲೇ ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿದೆ. ಅನಧಿಕೃತ ಜಾಹೀರಾತು ಅಳವಡಿಕೆ ತಡೆಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮಾ.8ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News