ಬಾಂಗ್ಲಾ ವಲಸಿಗರ ಕುಟುಂಬಗಳ ತೆರವಿಗೆ ಹೈಕೋರ್ಟ್ ತಾತ್ಕಾಲಿಕ ತಡೆ

Update: 2019-02-22 17:10 GMT

ಬೆಂಗಳೂರು, ಫೆ.22: ನಗರದ ವರ್ತೂರು ಹೋಬಳಿ ತುಬರಹಳ್ಳಿ ಗ್ರಾಮದ ಕುಂದಲಹಳ್ಳಿ ಗೇಟ್ ಹಿಂಭಾಗ ವಿವಿಧ ಸರ್ವೆ ನಂಬರ್‌ಗಳ ಖಾಸಗಿ ಜಮೀನಿನಲ್ಲಿ ತಾತ್ಕಾಲಿಕ ಜೋಪಡಿಗಳಲ್ಲಿ ವಾಸ ಮಾಡುತ್ತಿರುವ ಪಶ್ಚಿಮ ಬಂಗಾಳ, ಅಸ್ಸಾಂ, ಪಂಜಾಬ್, ಹರಿಯಾಣ ಹಾಗೂ ಬಾಂಗ್ಲಾ ದೇಶದ ಸುಮಾರು 260 ಕುಟುಂಬಗಳನ್ನು ತೆರವುಗೊಳಿಸುವ ಸಂಬಂಧ ಇದೇ ಫೆ.19ರಂದು ಬಿಬಿಎಂಪಿ ಜಾರಿಗೊಳಿಸಿದ ನೋಟಿಸ್‌ಗೆ ಶುಕ್ರವಾರ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಈ ಕುರಿತು ಜಮೀನು ಮಾಲಕರಾದ ಎಂ.ನಾರಾಯಣರೆಡ್ಡಿ, ಬಿ. ಮುನಿಯಪ್ಪ ಹಾಗೂ ತಾತ್ಕಾಲಿಕ ಜೋಪಡಿಗಳಲ್ಲಿ ವಾಸ ಮಾಡುತ್ತಿರುವ ಪಶ್ಚಿಮ ಬಂಗಾಳ ಮೂಲದ ಲೈತು ಹಾಗೂ ಮಾಸೂದ ಬೀಬಿ ಸೇರಿದಂತೆ 83 ಜನ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಬಿಬಿಎಂಪಿ ನೋಟಿಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿ, ಅರ್ಜಿ ಸಂಬಂಧ ಬಿಬಿಎಂಪಿಗೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿತು.

ಅದೇ ರೀತಿ ಅರ್ಜಿಯಲ್ಲಿ ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯನ್ನು ಪ್ರತಿವಾದಿಗಳನ್ನಾಗಿಸಿದ ನ್ಯಾಯಪೀಠ, ತಾತ್ಕಾಲಿಕ ಜೋಪಡಿಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆ ಸೇರಿ ಒಂದು ಕ್ರೀಯಾ ಯೋಜನೆ ಸಿದ್ದಪಡಿಸಿ ಅದನ್ನು ಮೂರು ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ಈ ಕುಟುಂಬಗಳು ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ಅವರು ವಾಸವಿರುವ ಪ್ರದೇಶದಲ್ಲಿ ಸ್ವಚ್ಛತೆ ಕಾಯ್ದುಕೊಂಡಿಲ್ಲ ಎಂಬ ಕಾರಣ ನೀಡಿ 2019ರ ಫೆ.19 ರಂದು ಬಿಬಿಎಂಪಿ ಹೂಡಿ ಉಪ ವಲಯದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನೋಟಿಸ್ ಜಾರಿಗೊಳಿಸಿ, ಮೂರು ದಿನಗಳಲ್ಲಿ ಜಾಗ ತೆರವುಗೊಳಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು ಮತ್ತು ಜಮೀನು ಮಾಲಕರ ಪರ ವಕೀಲರು, ಅರ್ಜಿದಾರರು ಕಳೆದ 10-20 ವರ್ಷಗಳಿಂದ ಇದೇ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ಅವರೆಲ್ಲರ ಬಳಿ ಮತದಾರರ ಗುರುತಿನ ಚೀಟಿ ಸೇರಿದಂತೆ ಅಧಿಕೃತ ಗುರುತಿನ ದಾಖಲೆಗಳಿವೆ. ಹೀಗಾಗಿ, ಬಿಬಿಎಂಪಿಯ ಈ ಕ್ರಮ ಕಾನೂನು ಬಾಹಿರವಾಗಿದೆ. ಹೀಗಾಗಿ, ಬಿಬಿಎಂಪಿ ಜಾರಿಗೊಳಿಸಿರುವ ನೋಟಿಸ್ ರದ್ದುಗೊಳಿಸಬೇಕು ಮತ್ತು ಅರ್ಜಿ ಇತ್ಯರ್ಥಗೊಳ್ಳುವವರೆಗೆ ತೆರವು ಕಾರ್ಯಾಚರಣೆ ನಡೆಸದಂತೆ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಜಮೀನು ಮಾಲಕರು ಹಾಗೂ ತಾತ್ಕಾಲಿಕ ಜೋಪಡಿಗಳಲ್ಲಿ ವಾಸ ಮಾಡುತ್ತಿರುವ ನಿವಾಸಿಗಳು ಅರ್ಜಿಯಲ್ಲಿ ಕೋರಿದ್ದಾರೆ.

ಅರ್ಜಿದಾರರು ನಗರದ ವರ್ತೂರು ಹೋಬಳಿ ತುಬರಹಳ್ಳಿ ಗ್ರಾಮದ ಕುಂದಲಹಳ್ಳಿ ಗೇಟ್ ಹಿಂಭಾಗದ ಸರ್ವೆ ನಂಬರ್ 42/3, 42/4ರ 0.34.08 ಗುಂಟೆ ಹಾಗೂ ಸರ್ವೆ ನಂಬರ್ 55/1ರ 2.20 ಎಕರೆ ಪ್ರದೇಶದಲ್ಲಿ ಕಳೆದ 10-20 ವರ್ಷಗಳಿಂದ ಸದರಿ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ಇದಕ್ಕಾಗಿ ಜಾಗದ ಮಾಲಕರಿಗೆ ಅರ್ಜಿದಾರರು ಬಾಡಿಗೆ ಪಾವತಿ ಮಾಡುತ್ತಿದ್ದಾರೆ. ಅಲ್ಲದೇ 2018ರಲ್ಲಿ ಈ ಕುಟುಂಬಗಳನ್ನು ತೆರವುಗೊಳಿಸಲು ಬಿಬಿಎಂಪಿ ಮುಂದಾದಾಗ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ 2018ರ ಡಿ.4ರಂದು ಹೈಕೋರ್ಟ್ ಆದೇಶ ನೀಡಿತ್ತು. ಅದೇ ರೀತಿ ತೆರವುಗೊಳಿಸುವ ಬಗ್ಗೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸರಕಾರ ಮತ್ತು ಬಿಬಿಎಂಪಿಗೆ ಆದೇಶ ನೀಡಲಾಗಿತ್ತು. ಅದಾಗ್ಯೂ ಬಿಬಿಎಂಪಿ ನೋಟಿಸ್ ಜಾರಿಗೊಳಿಸಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅರ್ಜಿದಾರರ ಪರ ಕ್ಲಿಫ್ಟನ್ ಡಿ. ರೊಜಾರಿಯೋ ಹಾಗೂ ಜಮೀನು ಮಾಲಕರ ಪರ ಬಿ.ವಿ. ನಿಧೀಶ್ರಿ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News