3ನೇ ದಿನವೂ ಮುಗಿಲು ಮುಟ್ಟಿದ ಲೋಹದ ಹಕ್ಕಿಗಳ ಕಲರವ

Update: 2019-02-22 17:15 GMT

ಬೆಂಗಳೂರು, ಫೆ.22: ಏರ್ ಶೋ ಮೂರನೇ ದಿನವು ಲೋಹದ ಹಕ್ಕಿಗಳ ಕಲರವ ಮುಗಿಲು ಮುಟ್ಟಿತ್ತು. ಜತೆಗೆ, ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತೀಯ ಸೇನಾ ಪಡೆಗಳು ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನ ಪ್ರಾತ್ಯಕ್ಷಿಕೆ ವಿಶೇಷವಾಗಿತ್ತು.

ಶುಕ್ರವಾರ ಯಲಹಂಕದ ವೈಮಾನಿಕ ವಾಯುನೆಲೆಯಲ್ಲಿ 12ನೇ ಏರೋ ಶೋ ಮೂರನೇ ದಿನ ಭಾರೀ ನಿರೀಕ್ಷೆ ಮೂಡಿಸಿತ್ತು. ಬೆಳಗ್ಗೆ 11ಗಂಟೆ ಸುಮಾರಿಗೆ ಯುದ್ಧ ವಿಮಾನಗಳ ಹಾರಾಟದ ಜೊತೆಗೆ, ಭಾರತೀಯ ಯೋಧರು ಮತ್ತು ವಾಯು ಸೇನಾಧಿಕಾರಿಗಳು, ಭಯೋತ್ಪದಕರಿಗೆ ಸಂಹಾರ ಮಾಡಿ ಪಾಕ್‌ಗೆ ಮರ್ಮಾಘಾತ ನೀಡಿದ ಸರ್ಜಿಕಲ್ ಸ್ಟ್ರೈಕ್ ದಾಳಿಯ ಅಣುಕು ಪ್ರದರ್ಶಿಸಲಾಯಿತು. ಕ್ಷಣ ಮಾತ್ರದಲ್ಲಿ ನಡೆದ ದಿಢೀರ್ ದಾಳಿಯಿಂದ ಹೇಗೆ ನಮ್ಮ ಸೈನಿಕರು ಪಾರಾದರು ಎಂಬುವುದನ್ನು ಯಥಾವತ್ತಾಗಿ ಮತ್ತೊಮ್ಮೆ ನೋಡಲು ಅವಕಾಶ ಸಿಕ್ಕಿದಂತೆ ಆಯಿತು.

ಎರಡು ವರ್ಷಗಳ ಹಿಂದೆ ನಸುಕಿನ ಮುನ್ನವೇ ಸೇನೆಯ ಕಮಾಂಡೋಗಳು ಭಯೋತ್ಪಾದಕರ ಏಳು ಶಿಬಿರಗಳನ್ನು ಧ್ವಂಸಗೊಳಿಸಿದರು. ಈ ಸೀಮಿತ ದಾಳಿಯಲ್ಲಿ 50ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು. ಜೊತೆಗೆ ಭಯೋತ್ಪಾದಕ ಚಟುವಟಿಕೆಗಳಿಗೆ ಇಟ್ಟಿದ್ದ ಶಸ್ತ್ರಾಸ್ತ್ರಗಳು ಮದ್ದುಗುಂಡುಗಳನ್ನು ಯೋಧರು ನಿರ್ನಾಮ ಮಾಡಿದ್ದರು.

ಅತ್ಯಂತ ಗೌಪ್ಯವಾಗಿ ಮತ್ತು ವ್ಯವಸ್ಥಿತವಾಗಿ ನಡೆದ ಭಾರತೀಯ ಕಮಾಂಡೋಗಳ ಮಿಂಚಿನ ದಾಳಿ ಮತ್ತು ಶಕ್ತಿ ಸಾಮರ್ಥ್ಯಕ್ಕೆ ಇಡೀ ಜಗತ್ತೇ ನಿಬ್ಬೆರಗಾಗಿತ್ತು. ಇದನ್ನೆಲ್ಲಾ, ಏರ್ ಶೋನಲ್ಲಿ ಪ್ರಾತ್ಯಕ್ಷಕೆ ತೋರಿಸಿದ್ದು, ವಿಶೇಷವಾಗಿತ್ತು.

3ನೇ ದಿನ ಹಾರಾಟ: ಶುಕ್ರವಾರ ಹತ್ತಕ್ಕೂ ಹೆಚ್ಚು ದೇಶಗಳ ಯುದ್ದ ವಿಮಾನಗಳು ಹಾರಾಟ ನಡೆಸಿದ್ದು, ಅದೇ ರೀತಿ, ದೇಶಿಯ ತೇಜಸ್, ರಫೇಲ್, ಎಫ್ 16 ಸೇರಿದಂತೆ ಹಲವು ಯುದ್ದ ವಿಮಾನಗಳು ಹಾರಾಟ ನಡೆಸಿದವು.

ಕಳೆದ ಎರಡು ದಿನದಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆಗುಂದಿದ್ದ ಏರ್ ಶೋ ಶುಕ್ರವಾರ ಇನ್ನಷ್ಟು ಮೆರುಗು ಪಡೆದಿತ್ತು. ಸಾವಿರಾರು ಪ್ರೇಕ್ಷಕರು ವೈಮಾನಿಕ ಪ್ರದರ್ಶನ ವೀಕ್ಷಿಸಲು ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೆ, ವಿಮಾನಯಾನ ಕುರಿತು ವಸ್ತು ಪ್ರದರ್ಶನ, ವಿಚಾರಸಂಕಿರಣ ನಡೆದವು.

‘ಯುವಕರಿಗೆ ಧನ್ಯವಾದ ಎಂದ ಪೈಲಟ್’

ಏರ್ ಶೋ ತಾಲೀಮು ವೇಳೆ ಸೂರ್ಯ ಕಿರಣ್ ಜೆಟ್‌ಗಳ ಢಿಕ್ಕಿ ಸಂಭವಿಸಿ, ಗಂಭೀರವಾಗಿ ಗಾಯಗೊಂಡಿದ್ದ ವೇಳೆ ವೇಳೆ ತಮಗೆ ಸಹಾಯ ಮಾಡಿದ ಸ್ಥಳೀಯ ಯುವಕರನ್ನು ಆಸ್ಪತ್ರೆಗೆ ಕರೆಸಿ ಗಾಯಾಳು ಪೈಲಟ್ ಧನ್ಯವಾದ ಅರ್ಪಿಸಿದರು.

ಪೈಲಟ್ ವಿಜಯ್ ಕೆಳಗೆ ಬಿದ್ದು ಸಾವು ಬದುಕಿನ ಹೋರಾಟ ನಡೆಸುತ್ತಿದ್ದರು. ಆಗ ಸ್ಥಳಿಯ ಯುವಕ ಚೇತನ್ ಮತ್ತು ಸ್ನೇಹಿತರು ಪೈಲಟ್‌ಗೆ ನೀರು ನೀಡಿ ಆರೈಕೆ ಮಾಡಿದ್ದರು. ಹೀಗಾಗಿ, ಶುಕ್ರವಾರ ಕಮಾಂಡೋ ಆಸ್ಪತ್ರೆಗೆ ಯುವಕರನ್ನು ಕರೆದು ಕೃತಜ್ಞತೆ ಸಲ್ಲಿಸಲಾಯಿತು.

ಏನಿದು ಘಟನೆ: ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಫೆ.19 ರಂದು ಯಲಹಂಕ ವಾಯುನೆಲೆ ಪ್ರದೇಶದಲ್ಲಿ ಆಗಸದಲ್ಲಿ ಹಾರಾಡುತ್ತಿದ್ದ ಸೂರ್ಯಕಿರಣ ವಿಮಾನಗಳ ನಡುವೆ ಢಿಕ್ಕಿ ಸಂಭವಿಸಿ ದುರಂತ ಸಂಭವಿಸಿತ್ತು. ಈ ವೇಳೆ ಪೈಲೆಟ್ ಸಾಹಿಲ್ ಗಾಂಧಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News