ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದು ಸರಕಾರಗಳ ಹೇಯ ಕೃತ್ಯ: ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಉಮಾ.ಕೆ

Update: 2019-02-22 17:24 GMT

ಬೆಂಗಳೂರು, ಫೆ.22: ಸುಮಾರು 11ಲಕ್ಷಕ್ಕೂ ಹೆಚ್ಚು ಆದಿವಾಸಿಗಳು ಮತ್ತು ಇತರೆ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುತ್ತಿರುವ ಸರಕಾರಗಳ ಕ್ರಮವು ಹೇಯ ಕೃತ್ಯವಾಗಿದೆ ಎಂದು ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಉಮಾ.ಕೆ ಖಂಡಿಸಿದ್ದಾರೆ. 

ಶತ, ಶತಮಾನಗಳಿಂದ ಅರಣ್ಯದಲ್ಲೆ ಬಾಳಿ ಬದುಕುತ್ತಿರುವ 16ರಾಜ್ಯಗಳ 11ಲಕ್ಷಕ್ಕೂ ಅಧಿಕ ಆದಿವಾಸಿಗಳು ಮತ್ತು ಇತರೆ ಅರಣ್ಯವಾಸಿಗಳಿಗೆ ಬೆದರಿಕೆ ಹಾಕಿ, ಅರಣ್ಯದಿಂದ ಹೊರ ಹೋಗುವಂತೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಇದು ಮಾನವ ಹಕ್ಕು ಉಲ್ಲಂಘನೆಯಾಗಿದ್ದು, ಸಂವಿಧಾನ ಬಾಹಿರ ಕೃತ್ಯವಾಗಿದೆ.

ಆದಿವಾಸಿಗಳು ಅಗತ್ಯ ದಾಖಲೆಗಳನ್ನು ನೀಡಿಲ್ಲ ಎಂಬ ನೆಪವೊಡ್ಡಿ ರಾಜ್ಯ ಸರಕಾರಗಳು ಅವರ ಕರಾರು ಒಪ್ಪಂದವನ್ನು ನವೀಕರಿಸಲಾಗದು ಎಂದು ಹೇಳುತ್ತಿವೆ. ಎಲ್ಲರಿಗೂ ತಿಳಿದಿರುವಂತೆ ಆದಿವಾಸಿಗಳಿಗೆ ಅರಣ್ಯ ವಾಸಬಿಟ್ಟರೆ ಬೇರೆ ಬದುಕು ಗೊತ್ತಿಲ್ಲ. ಈಗ ಈ ತೆರವು ಆದೇಶದಿಂದಾಗಿ ಇವರು ಬದುಕುವ ಹಕ್ಕನ್ನು ಕಳೆದುಕೊಂಡು ಬೀದಿ ಬಿಕಾರಿಗಳಾಗಿ ನಾಯಿ, ಬೆಕ್ಕುಗಳಂತೆ ಜೀವನ ನಡೆಸಬೇಕಾಗುತ್ತದೆ. ಇದು ಈ ದೇಶದ ಸರಕಾರಗಳಿಗೆ ಸರಿ ಎನಿಸುತ್ತದೆಯೆ ಎಂದು ಅವರು ಪ್ರಶ್ನಿಸಿದರು.

ಬಡ ಜನತೆಯ ಭೂಮಿಯ ಮೇಲಿನ ಈ ಪರಂಪರಾಗತ ಹಕ್ಕನ್ನು ಅನೂರ್ಜಿತಗೊಳಿಸುತ್ತಿರುವ ರಾಜ್ಯ ಸರಕಾರಗಳ ಈ ತೀರ್ಮಾನದ ಹಿಂದೆ ಅರಣ್ಯ ಭೂಮಿಯಿಂದ ಅವರನ್ನು ಒಕ್ಕಲೆಬ್ಬಿಸಿ, ಅಲ್ಲಿನ ಭೂಮಿಯನ್ನು ವಾಣಿಜ್ಯ ಹಿತಾಸಕ್ತಿಗಾಗಿ ಉದ್ಯಮಿಗಳಿಗೆ ಮಾರಾಟ ಮಾಡುವ ಹುನ್ನಾರ ಅಡಗಿದೆ. ಸರಕಾರಗಳ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News