ನರೇಗಾ ಹಣ ಬಿಡುಗಡೆಗೆ ಹಿಂದೇಟು ಯಾಕೆ..?

Update: 2019-02-22 18:13 GMT

ಮಾನ್ಯರೇ,

ಕೇಂದ್ರ ಸರಕಾರ ನಾವು ’ಬಡವರ ಪರ’ ಎಂದು ಹೇಳಿಕೊಳ್ಳುತ್ತದೆ. ಆದರೆ ನರೇಗಾ ಯೋಜನೆಯ ವಿಚಾರದಲ್ಲಿ ಎನ್‌ಡಿಎ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಯಾಕೆಂದರೆ ಈವರೆಗೂ ಕೇಂದ್ರ ಸರಕಾರ ನರೇಗಾ ಯೋಜನೆಯ ಹಣವನ್ನು ಬಿಡುಗಡೆ ಮಾಡಿಲ್ಲ. ದೇಶದಲ್ಲಿ ಉದ್ಯೋಗದ ಸಮಸ್ಯೆ ಇದೆ ಎಂಬ ವರದಿ ಬಹಿರಂಗಗೊಂಡ ಬೆನ್ನಲ್ಲೇ ನರೇಗಾ ಯೋಜನೆಯ ಫಲಾನುಭವಿಗಳಿಗೆ ಇನ್ನೂ ಹಣ ಸಿಕ್ಕಿಲ್ಲ ಎಂಬ ವಿಚಾರ ಮತ್ತಷ್ಟು ಆತಂಕ ಸೃಷ್ಟಿಸಿದೆ. ಈ ಕುರಿತು ಮೊನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಹೇಳಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದರು.
ನರೇಗಾ ಯೋಜನೆಯ ಹಣ ಬಾರದಿರುವುದರಿಂದ ಕೂಲಿ ಕಾರ್ಮಿಕರು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಇವರಿಗೆ ದುಡ್ಡಿಲ್ಲದೆ ಜೀವನ ನಡೆಸಬೇಕಾದ ಪರಿಸ್ಥಿತಿಯಿದೆ. ಹಣ ಬಿಡುಗಡೆ ಮಾಡಿ ಎಂದು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಆದರೆ ಕೇಂದ್ರ ಸರಕಾರ ಇದಕ್ಕೆ ಯಾವುದೇ ಕಾರಣ ನೀಡಿಲ್ಲ. ಜೊತೆಗೆ ಇದುವರೆಗೂ ಹಣ ಕೊಡದೆ ಸತಾಯಿಸುತ್ತಿದೆ. ಈ ಯೋಜನೆಯ ಹಣವನ್ನು ಬೇರೆ ಯೋಜನೆಗೆ ಬಳಸಲಾಗುತ್ತಿದೆ ಎಂಬ ಆರೋಪವನ್ನು ಕೂಡಾ ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಇಂತಹ ತಪ್ಪನ್ನು ಯಾರೇ ಮಾಡಿದರೂ ಒಪ್ಪುವಂತಹದ್ದಲ್ಲ. ಉತ್ತರ ಕರ್ನಾಟಕದ ಜನರು ಗುಳೆ ಹೋಗಲು ಇದುವೇ ಕಾರಣ.
ಇದರ ಜೊತೆಗೆ ಬರ ಪರಿಹಾರದ 900 ಕೋಟಿ ಹಣ ಕೂಡಾ ರಾಜ್ಯಕ್ಕೆ ಸಿಕ್ಕಿಲ್ಲ. ಆದ್ದರಿಂದ ಕೂಡಲೇ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಬಿಡುಗಡೆ ಮಾಡಿ ಕೂಲಿ ಕಾರ್ಮಿಕರ ಬದುಕನ್ನು ಕಾಪಾಡಬೇಕಾಗಿದೆ. ಈ ಮೂಲಕ ರಾಜ್ಯದ ಹಿತವನ್ನು ಕೇಂದ್ರ ಸರಕಾರ ಕಾಪಾಡಬೇಕಾಗಿದೆ.

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News