ಬೇಡಿಕೆ ಈಡೇರಿಕೆಗೆ ಸರಕಾರದ ಭರವಸೆ: ರೈತರ ರ್ಯಾಲಿ ರದ್ದು

Update: 2019-02-22 18:40 GMT

ಮುಂಬೈ, ಫೆ.22: ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರೈತರು ನಾಶಿಕ್‌ನಿಂದ ಮುಂಬೈವರೆಗೆ ಹಮ್ಮಿಕೊಂಡಿದ್ದ ಬೃಹತ್ ರ್ಯಾಲಿಯನ್ನು ರದ್ದುಗೊಳಿಸಿರುವುದಾಗಿ ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್)ದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರ ಸರಕಾರದೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬಂದಿರುವುದಾಗಿ ಸಿಪಿಎಂ ಬೆಂಬಲಿತ ರೈತರ ಸಂಘಟನೆ ಎಐಕೆಎಸ್ ತಿಳಿಸಿದೆ. ನಾಶಿಕ್‌ನ ಅಂಬೇಬಹುಳ ಗ್ರಾಮದಲ್ಲಿ ನಡೆದ ಮಾತುಕತೆಯಲ್ಲಿ ಸಚಿವರಾದ ಗಿರೀಶ್ ಮಹಾಜನ್ ಮತ್ತು ಜಯಕುಮಾರ್ ರಾವಲ್ ಹಾಗೂ ಸಿಪಿಎಂ ಶಾಸಕ ಜೆಪಿ ಗಾವಿತ್ ಪಾಲ್ಗೊಂಡಿದ್ದರು ಎಂದು ಎಐಕೆಎಸ್ ಅಧ್ಯಕ್ಷ ಅಶೋಕ್ ಧವಳೆ ತಿಳಿಸಿದ್ದಾರೆ.

ಸರಕಾರ ನೀಡಿದ ಭರವಸೆ ಜಾರಿಯಾಗಿದೆಯೇ ಎಂಬ ಕುರಿತು ಸಚಿವರು ಮತ್ತು ಎಐಕೆಎಸ್ ಪ್ರತಿನಿಧಿಗಳು ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಪರಿಶೀಲನೆ ನಡೆಸಲಿದ್ದಾರೆ ಎಂದು ಸರಕಾರ ಲಿಖಿತ ಭರವಸೆ ನೀಡಿದೆ. ಅಲ್ಲದೆ , ಮಹಾರಾಷ್ಟ್ರದ ನಾರ್, ಪಾರ್, ದಾಮನ್‌ಗಂಗ ಮತ್ತು ಪಿಂಜಲ್ ಮುಂತಾದ ನದಿಗಳ ನೀರನ್ನು ಗೋದಾವರಿ ಜಲಾನಯನ ಪ್ರದೇಶಕ್ಕೆ ಹರಿಸುವುದಾಗಿಯೂ ಸರಕಾರ ಭರವಸೆ ನೀಡಿದೆ. ಸಭೆಯಲ್ಲಿ ಎಐಕೆಎಸ್ ಪ್ರಸ್ತಾವಿಸಿದ ಕೆಲವು ವಿಷಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಧವಳೆ ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರಿಗೆ ದ್ರೋಹ ಎಸಗಿವೆ ಎಂದು ಆರೋಪಿಸಿ ಕಳೆದ ವರ್ಷವೂ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಬಾರಿಯ ಪ್ರತಿಭಟನೆಯಲ್ಲಿ ಸುಮಾರು 50 ಸಾವಿರ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಧವಳೆ ಹೇಳಿದ್ದರು. ಗುರುವಾರ ಸರಕಾರದೊಂದಿಗೆ ನಡೆದ ಸಭೆಯಲ್ಲಿ ರೈತರ ಸಮಸ್ಯೆ ನಿವಾರಣೆಯ ಬಗ್ಗೆ ಭರವಸೆ ದೊರೆತಿದೆ. ಸರಕಾರ ಭರವಸೆ ಈಡೇರಿಸದಿದ್ದರೆ ರೈತರು ಮತ್ತೊಮ್ಮೆ ಪ್ರತಿಭಟನೆ ನಡೆಸುವುದು ನಿಶ್ಚಿತ ಎಂದು ಧವಳೆ ಹೇಳಿದ್ದಾರೆ. ಪ್ರತಿಭಟನೆ ರದ್ದಾದ ಹಿನ್ನೆಲೆಯಲ್ಲಿ ರೈತರು ತಮ್ಮ ಸ್ವಗ್ರಾಮಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News