ಭಾರತದ ವನಿತೆಯರಿಗೆ ಮಣಿದ ಇಂಗ್ಲೆಂಡ್

Update: 2019-02-22 18:48 GMT

ಮುಂಬೈ, ಫೆ.22: ಎಡಗೈ ಸ್ಪಿನ್ನರ್ ಏಕ್ತಾ ಬಿಸ್ತ್ ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಇಂಗ್ಲೆಂಡ್ ವನಿತಾ ತಂಡ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ಭಾರತ ವಿರುದ್ಧದ ತನ್ನ ಮೊದಲ ಏಕದಿನ ಪಂದ್ಯದಲ್ಲಿ 66 ರನ್‌ಗಳ ಹೀನಾಯ ಸೋಲು ಕಂಡಿದೆ. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಸಾಧಿಸಿದೆ.

ಇಲ್ಲಿಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಸ್ತ್ (25ಕ್ಕೆ 4) ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ 203 ರನ್‌ಗಳ ಸಾಧಾರಣ ಗುರಿಯನ್ನು ಸಮರ್ಥಿಸಿಕೊಂಡ ಭಾರತದ ವನಿತೆಯರು ಇಂಗ್ಲೆಂಡ್ ತಂಡವನ್ನು 41 ಓವರ್‌ಗಳಲ್ಲಿ 136 ರನ್‌ಗೆ ನಿಯಂತ್ರಿಸಿದರು.

ಬಿಸ್ತ್ ಅವರಿಗೆ ಬೌಲಿಂಗ್‌ನಲ್ಲಿ ಉತ್ತಮ ಸಾಥ್ ನೀಡಿದ ಶಿಖಾ ಪಾಂಡೆ (21ಕ್ಕೆ 2), ದೀಪ್ತಿ ಶರ್ಮಾ(33ಕ್ಕೆ 2) ಹಾಗೂ ಜುಲನ್ ಗೋಸ್ವಾಮಿ(19ಕ್ಕೆ 1) ಭಾರತ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ 2 ಅಂಕಗಳನ್ನು ಗಳಿಸಲು ನೆರವಾದರು.

ಪ್ರವಾಸಿ ತಂಡದ ಪರ ಬ್ಯಾಟಿಂಗ್‌ನಲ್ಲಿ ನತಾಲಿ ಸ್ಕಿವರ್ (44 , 66 ಎಸೆತ) ಹಾಗೂ ನಾಯಕಿ ಹೀದರ್ ನೈಟ್(ಅಜೇಯ 39) ಮಿಂಚಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಯಲ್ಪಟ್ಟ ಭಾರತದ ವನಿತೆಯರು ಉತ್ತಮ ಆರಂಭವನ್ನೇ ಪಡೆದರು. ಸ್ಮತಿ ಮಂಧಾನಾ(24) ಹಾಗೂ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದ ಜೆಮಿಮಾ ರೋಡ್ರಿಗಸ್(48) ಮೊದಲ ವಿಕೆಟ್ ಜೊತೆಯಾಟದಲ್ಲಿ 69 ರನ್ ಸೇರಿಸಿದರು. ನಾಯಕಿ ಮಿಥಾಲಿ ರಾಜ್(44, 74 ಎಸೆತ)ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಬಲ ತುಂಬಿದರು. ದೀಪ್ತಿ ಶರ್ಮಾ(7), ಹರ್ಲಿನ್ ಡಿಯೋಲ್(2) ಹಾಗೂ ಮೋನಾ ಮೆಶ್ರಾಮ್(0) ಭಾರೀ ವೈಫಲ್ಯ ಅನುಭವಿಸಿದರು. ಕೆಳ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ತಾನಿಯಾ ಭಾಟಿಯಾ(25) ಹಾಗೂ ಬೌಲರ್ ಗೋಸ್ವಾಮಿ(30) ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಸಫಲರಾದರು.

ಇಂಗ್ಲೆಂಡ್ ಪರ ಜಾರ್ಜಿಯಾ ಎಲ್ವಿಸ್(45ಕ್ಕೆ 2), ನತಾಲಿ ಸ್ಕಿವರ್(29ಕ್ಕೆ 2) ಹಾಗೂ ಸೋಫಿ ಎಕ್ಲೆಸ್ಟೋನ್ (27ಕ್ಕೆ 2) ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದರು.

ಏಕ್ತಾ ಬಿಸ್ತ್‌ಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

24 ರನ್ ಅಂತರದಲ್ಲಿ 7 ವಿಕೆಟ್!

ಸಾಧಾರಣ ಗುರಿ ಬೆಂಬತ್ತಿದ್ದ ಇಂಗ್ಲೆಂಡ್ ಒಂದು ಹಂತದಲ್ಲಿ 30 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 111 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಕೊನೆಯ ಏಳು ಮಂದಿ ಬ್ಯಾಟ್ಸ್‌ವುಮನ್‌ಗಳನ್ನು ಕೇವಲ 24 ರನ್‌ಗಳ ಅಂತರದಲ್ಲಿ ಕಳೆದುಕೊಂಡು ಭಾರತಕ್ಕೆ ಸಂಪೂರ್ಣ ಪಂದ್ಯವನ್ನು ಒಪ್ಪಿಸಿತು. 41ನೇ ಓವರ್ ಬೌಲಿಂಗ್ ಮಾಡಿದ ಏಕ್ತಾ 5 ಎಸೆತಗಳಲ್ಲಿ 3 ವಿಕೆಟ್ ಪಡೆದು ಇಂಗ್ಲೆಂಡ್‌ನ ದಿಢೀರ್ ಪತನಕ್ಕೆ ಕಾರಣವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News