ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪ ನಿಧನಕ್ಕೆ ಗಣ್ಯರ ಸಂತಾಪ

Update: 2019-02-23 13:14 GMT

ಬೆಂಗಳೂರು, ಫೆ.23: ಹಿರಿಯ ಸಾಹಿತಿ, ಸ್ವಾತಂತ್ರ ಹೋರಾಟಗಾರ, ನ್ಯಾಯಮೂರ್ತಿ, ನಾಡೋಜ ಕೋ.ಚನ್ನಬಸಪ್ಪ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕೋ.ಚನ್ನಬಸಪ್ಪಅವರು ವೃತ್ತಿಯಿಂದ ವಕೀಲ, ನ್ಯಾಯಾಧೀಶರಾದರೂ ಪ್ರವೃತ್ತಿಯಿಂದ ಸಾಹಿತಿಯಾಗಿ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಕುವೆಂಪು ಅವರಿಗೆ ಅತಿ ಆಪ್ತರಾಗಿದ್ದ ಕೋ.ಚೆ. ಶ್ರೀ ರಾಮಾಯಣ ದರ್ಶನಂ ಮಹಾ ಕಾವ್ಯ ಸಮೀಕ್ಷೆ ಹಾಗೂ ಹಲವಾರು ಮಹತ್ವದ ಕತಿಗಳನ್ನು ರಚಿಸಿದ್ದಾರೆ. ಇವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಏಕೀಕರಣದ ಹೋರಾಟಗಾರ, ಕನ್ನಡ ಪ್ರಜ್ಞೆಯನ್ನು ಉಸಿರಾಗಿಸಿಕೊಂಡ ಹಿರಿಯ ಜೀವ, ಕುವೆಂಪು ಅವರ ಪರಮಾಪ್ತ ಶಿಷ್ಯ, ವೈಯಕ್ತಿಕವಾಗಿ ಸದಾ ನನಗೆ ಮಾರ್ಗದರ್ಶನ ನೀಡುತ್ತಿದ್ದ ಹಿತೈಷಿ. ಕೋ.ಚೆನ್ನಬಸಪ್ಪ ಅಗಲಿಕೆಯ ಸುದ್ದಿ, ಆಘಾತವನ್ನುಂಟು ಮಾಡಿದೆ. ಆ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.

ಸ್ವತಃ ಅನೇಕ ಕಥಾ ಸಂಕಲನಗಳನ್ನು ಕನ್ನಡ ಸಾರಸತ್ವ ಲೋಕಕ್ಕೆ ಕೊಡುಗೆಯಾಗಿ ನೀಡಿದ ಚೆನ್ನಬಸಪ್ಪ ವಕೀಲರಾಗಿ, ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿರುವುದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ. ಹಲವು ವಿಮರ್ಶಾ ಗ್ರಂಥಗಳನ್ನು ನೀಡಿರುವ ಚೆನ್ನಬಸಪ್ಪ ನಿಧನವು, ಕನ್ನಡ ನಾಡಿಗೆ, ಸಾಹಿತ್ಯಾಭಿಮಾನಿಗಳಿಗೆ, ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದ್ದಾರೆ.

ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಕೊ.ಚೆ ಅವರ ಕೊಡುಗೆ ಅಪಾರ. ನಾಡು-ನುಡಿಯ ಬಗ್ಗೆ ಅಪಾರವಾದ ಕಾಳಜಿ ಇಟ್ಟುಕೊಂಡಿದ್ದವರು. 90ರ ವಯಸ್ಸಿನಲ್ಲಿಯೂ ರಾಜ್ಯದ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಮ್ಮ ನಿಲುವುಗಳನ್ನು ನೇರವಾಗಿ ಹೇಳುತ್ತಿದ್ದರು. ಸಮಾಜಮುಖಿ ಚಿಂತನೆಗಳಿಗೆ ಬೆಂಬಲ ನೀಡುತ್ತಿದ್ದ ಕೊ.ಚೆ ಅನೇಕ ಮೌಲಿಕ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ ರಕ್ತ ತರ್ಪಣ ನಮಗೆ ಬೇಕಾದ ಸಾಹಿತ್ಯ ಪ್ರಾಣ ಪಕ್ಷಿ ಮುಂತಾದ ಕೃತಿಗಳ ಜೊತೆಗೆ ಜೀವ ಸ್ವಾತಂತ್ರ್ಯ ಮಹೋತ್ಸವ ಮುಂತಾದ ಅತ್ಯುತ್ತಮ ಕವನ ಸಂಕಲನಗಳನ್ನು ರಚಿಸಿದ್ದಾರೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು ಎಂದು ಅವರು ಹೇಳಿದ್ದಾರೆ.

ಕೊ.ಚೆ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಹಿರಿಯ ಚೇತನವನ್ನು ಕಳೆದುಕೊಂಡಿದೆ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬ ವರ್ಗದವರು ಹಾಗೂ ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಶಿವಕುಮಾರ್ ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News