ಪೊಲೀಸರ ಸಮಗ್ರ ಅಭಿವೃದ್ಧಿಗಾಗಿ ಔರಾದ್ಕರ್ ವರದಿ ಜಾರಿಗೆ ಬದ್ಧ: ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-02-23 15:52 GMT

ಕಲಬುರಗಿ, ಫೆ.23: ಪೊಲೀಸರು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಸಾರ್ವಜನಿಕರ ಕೆಲಸ ಮಾಡುತ್ತಿದ್ದಾರೆ. ಅವರ ಸಮಗ್ರ ಅಭಿವೃದ್ದಿಗಾಗಿ ಔರಾದ್ಕರ್ ವರದಿಯನ್ನು ಜಾರಿಗೆ ತರಲು ಸರಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಶನಿವಾರ ನಗರದಲ್ಲಿ ನೂತನವಾಗಿ ಸ್ಥಾಪಿಸಲಾದ ಕಮೀಷನರೇಟ್ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ನಡೆದ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಔರಾದ್ಕರ್ ವರದಿಯನ್ನು ಜಾರಿ ಮಾಡಲು ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಲಾಗಿದೆ, ಮುಖ್ಯಮಂತ್ರಿಯೊಂದಿಗೆ ಈ ಸಂಬಂಧ ಒಂದೆರಡು ಸಭೆ ನಡೆಸಿ ವರದಿಯನ್ನು ಜಾರಿಗೊಳಿಸಲಾಗುವುದು. ಅಲ್ಲದೇ, ಸಬ್ ಇನ್ಸ್‌ಪೆಕ್ಟರ್ ಹಾಗೂ ಇನ್ಸ್‌ಪೆಕ್ಟರ್ ಅವರ ಒಂದು ಸ್ಥಾನದ ಸೇವಾ ಅವಧಿಯನ್ನು ಒಂದು ವರ್ಷದ ಬದಲು ಎರಡು ವರ್ಷಕ್ಕೆ ವಿಸ್ತರಿಸಲು ಚಿಂತನೆ ನಡೆದಿದೆ ಎಂದು ಅವರು ಹೇಳಿದರು.

ನಗರದ ಜನರ ಬಹುದಿನಗಳ ಕನಸು ಈಗ ನನಸಾಗಿದೆ. ಪೊಲೀಸ್ ಇನ್ಸ್‌ಟಿಟ್ಯೂಟ್ ಬಲವರ್ಧನೆಗೆ ಈಗಾಗಲೇ ಉದ್ದೇಶಿಸಿದ್ದು ಡಿಜಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ, ಅವರ ವರದಿಯಂತೆ ಅಗತ್ಯ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಜೊತೆಗೆ, ನೆರೆಹೊರೆ ರಾಜ್ಯಗಳಲ್ಲಿನ ಪೊಲೀಸ್ ಇಲಾಖೆಯ ಸುಧಾರಣೆಯನ್ನು ಅಧ್ಯಯನ ಮಾಡಿ ನಮ್ಮ ರಾಜ್ಯದಲ್ಲಿಯೂ ಅಂತಹ ಸುಧಾರಣೆಗಳನ್ನು ಜಾರಿಗೆ ತರಲಾಗುವುದು ಎಂದು ಪಾಟೀಲ್ ಹೇಳಿದರು.

ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬೇಡಿಕೆಯಂತೆ ಕಲಬುರಗಿ ನಗರದಲ್ಲಿ ಸೈಬರ್ ಸ್ಪೆಷಲ್ ಸೆಲ್ ಸ್ಥಾಪಿಸಲಾಗುವುದು. ವ್ಯಕ್ತಿಗಳು ಯಾವ ರೀತಿ ಅಪರಾಧಗಳಿಂದ ದೂರವಿರಬೇಕು ಎನ್ನುವುದನ್ನು 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ತಮ್ಮ ವಚನದಲ್ಲಿ ಹೇಳಿದ್ದಾರೆ. ಅಂತಹ ವಚನಗಳ ಪಾಲನೆಯಿಂದ ಅಪರಾಧ ಕಡಿಮೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಬಸವಣ್ಣನವರು ಸಾರಿದಂತೆ ಕಾಯಕ ತತ್ವವನ್ನು ಪೊಲೀಸರು ಅಕ್ಷರಶಃ ಪಾಲಿಸುತ್ತಾರೆ. ಹಾಗಾಗಿ ಅವರ ಸೇವೆ ಶ್ಲಾಘನೀಯ. ಪ್ರಸ್ತುತ ಸನ್ನಿವೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ಕಷ್ಟದ ಕೆಲಸವಾಗಿದೆ ಎಂದರು.

ಹಲವಾರು ಕಷ್ಟಗಳ ನಡುವೆಯೂ ಪೊಲೀಸರು ನಿರಂತರವಾಗಿ ಸಾರ್ವಜನಿಕರ ಸೇವೆ ಮಾಡುತ್ತಿದ್ದಾರೆ. ಹಾಗಾಗಿ ಸಮಾಜದಲ್ಲಿ ಶಾಂತಿ ನೆಲಸಲು ಸಹಕಾರಿಯಾಗಿದೆ. ನಗರದಲ್ಲಿ ಕಮೀಷನರೇಟ್ ಕಚೇರಿ ಉದ್ಘಾಟನೆಯಾಗಿದೆ. ಅದಕ್ಕೆ ತಕ್ಕಂತೆ ಇಲಾಖೆಯಲ್ಲಿ ಕೆಲವೊಂದು ಸುಧಾರಣೆಗಳು ಆಗಬೇಕಿದೆ ಎಂದು ಅವರು ಹೇಳಿದರು.

ಅಪರಾಧಗಳು ತನ್ನ ಸ್ವರೂಪ ಬದಲಾಯಿಸಿಕೊಂಡಿದ್ದು ಈಗೀಗ ಸೈಬರ್ ಸೌಲಭ್ಯ ಬಳಸಿಕೊಂಡು ಅಪರಾಧ ಪ್ರಕರಣಗಳು ನಡೆಯುತ್ತಿವೆ. ಹಾಗಾಗಿ ಸೈಬರ್ ಸೆಕ್ಯೂರಿಟಿ ಸೆಲ್, ಸೈಬರ್ ಫಾರೆನ್ಸಿಕ್ ಲ್ಯಾಬ್ ಸೇರಿದಂತೆ ಸೈಬರ್ ಅಪರಾಧಗಳ ಕುರಿತು ಕ್ರಮ ತೆಗೆದುಕೊಳ್ಳಲು ಅನುಕೂಲವಾಗುವಂತಹ ಘಟಕವೊಂದನ್ನು ಕಲಬುರಗಿಯಲ್ಲಿ ಸ್ಥಾಪಿಸಬೇಕು ಎಂದು ಅವರು ಗೃಹ ಸಚಿವರಿಗೆ ಮನವಿ ಮಾಡಿದರು.

ಸಮಾರಂಭದಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರು, ಎಂ.ವೈ. ಪಾಟೀಲ್, ರಾಜಕುಮಾರ ಪಾಟೀಲ್ ತೇಲ್ಕೂರು, ಬಸವರಾಜ ಮತ್ತಿಮೂಡ, ಕನೀಝ್ ಫಾತಿಮಾ, ಮಲ್ಲಮ್ಮ ವಳಕೇರಿ, ಐಜಿ ಮನೀಷ್ ಕರ್ಬೇಕರ್, ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪೊಲೀಸ್ ತರಬೇತಿ ಸಂದರ್ಭದಲ್ಲಿ ಅಕಾಲಿಕ ಮರಣವನ್ನಪ್ಪಿದ ಪಿಎಸ್ಸೈ ಅವರಿಗೆ ಇತರೆ ತರಬೇತಿ ಪಡೆದುಕೊಳ್ಳುತ್ತಿದ್ದ ಅಭ್ಯರ್ಥಿಗಳು ತಲಾ ಹತ್ತು ಸಾವಿರ ರೂ.ಗಳಂತೆ ನೀಡಿದ ಒಟ್ಟು 50 ಲಕ್ಷ ರೂ.ಗಳ ಚೆಕ್ ಅನ್ನು ಈ ಸಂದರ್ಭದಲ್ಲಿ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಪ್ರಿಯಾಂಕ್ ಖರ್ಗೆ, ಮೃತರ ಪೋಷಕರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ವೈಯಕ್ತಿಕವಾಗಿ 50 ಸಾವಿರ ರೂ., ಹಾಗೂ ಎಂ.ಬಿ.ಪಾಟೀಲ್ ಒಂದು ಲಕ್ಷ ರೂ.ಸಹಾಯ ಧನ ನೀಡುವುದಾಗಿ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News