ಏರೋ ಇಂಡಿಯಾ ಶೋ: ಲೋಹದ ಹಕ್ಕಿಗಳನ್ನು ಚಲಾಯಿಸಿದ ಮಹಿಳಾ ಪೈಲಟ್ ಗಳು

Update: 2019-02-23 14:13 GMT

ಬೆಂಗಳೂರು, ಫೆ. 23: ಅಂತರ್‌ರಾಷ್ಟ್ರೀಯ ವೈಮಾನಿಕ ಪ್ರದರ್ಶನದಲ್ಲಿ ಶನಿವಾರ ಮಹಿಳಾ ಪೈಲೆಟ್‌ಗಳು ಸಾವಿರಾರು ಅಡಿಗಳಿಂದ ಜಿಗಿಯುವ ಮೂಲಕ ಮಹಿಳೆಯರು ಕಡಿಮೆ ಏನಿಲ್ಲ ಎಂಬುದನ್ನು ಸಾಬೀತುಪಡಿಸಿದರು.

ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋದಲ್ಲಿ ನಾಲ್ಕನೇ ದಿನ ಮಹಿಳಾ ಪೈಲೆಟ್‌ಗಳು ಲೋಹದ ಹಕ್ಕಿಗಳನ್ನು ಚಲಾಯಿಸಿದರು. ಅಲ್ಲದೆ, ಸಾವಿರಾರು ಅಡಿಗಳಿಂದ ಪ್ಯಾರಾಚೂಟ್ ಮೂಲಕ ನೆಲಕ್ಕೆ ಜಿಗಿದು ಅಚ್ಚರಿ ಮೂಡಿಸಿದರು.

ಆರಂಭದಲ್ಲಿಯೇ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಯುದ್ಧ ವಿಮಾನ ತೇಜಸ್‌ನಲ್ಲಿ ಹಾರಾಟ ನಡೆಸಿದರು. ಇಂದಿನ ಏರ್ ಶೋನಲ್ಲಿ ಮಹಿಳೆಯರದ್ದೇ ಅಬ್ಬರ ಹಾಗೂ ಕಾರುಬಾರು ಕಂಡುಬಂತು. ಬೆಳಗ್ಗೆಯೇ ಸೇನಾ ಪಡೆಯ ಪ್ಯಾರಾ ಜಂಪರ್ಸ್‌ ತಂಡದ ಐದು ಮಹಿಳಾ ಸದಸ್ಯರು ಯುದ್ದ ವಿಮಾನವನ್ನೇರಿ ನಾಲ್ಕು ಸಾವಿರ ಅಡಿಗಳ ಅಂತರದಿಂದ ಜಿಗಿದು ಭೂ ಸ್ಪರ್ಶ ಮಾಡಿದರು.

ಭಯ, ಆತಂಕವಿಲ್ಲದೆ ವಿಮಾನದಿಂದ ಜಿಗಿದ ಸೇನಾ ಪಡೆಯ ಮಹಿಳಾ ಪ್ಯಾರಾ ಜಂಪರ್ಸ್‌ ನೀಡಿದ ಪ್ರದರ್ಶನಕ್ಕೆ ಜನರಿಂದ ಭಾರೀ ಪ್ರಮಾಣದಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಸೇನಾ ಪಡೆಯ 12 ಜನರ ಪ್ಯಾರಾ ಜಂಪರ್ಸ್‌ ತಂಡದಲ್ಲಿ ಆರು ಮಹಿಳೆಯರು, ಆರು ಪುರುಷರಿದ್ದು, ಇವರಲ್ಲಿ ಐದು ಮಹಿಳೆಯರು ಇಂದು ಪಾಲ್ಗೊಂಡಿದ್ದರು. ಇಲ್ಲಿ ಬಳಸಿದ್ದ ಪ್ಯಾರಾಚೂಟ್‌ಗಳು ಬಣ್ಣ ಬಣ್ಣದಿಂದ ಕೂಡಿದ್ದು, ಒಂದು ಪ್ಯಾರಾಚೂಟ್ ತ್ರಿವರ್ಣ ಧ್ವಜ ಬಣ್ಣ ಹೊಂದಿದ್ದರೆ, ಎರಡು ಪ್ಯಾರಾಚೂಟ್‌ಗಳು ಪಿಂಕ್ ಬಣ್ಣದ್ದಾಗಿದ್ದು, ಮಹಿಳಾ ದಿನಾಚರಣೆಯನ್ನು ಸಂಕೇತಿಸಿದವು. ಮುಂದಿನ ಮಾ.8 ರಂದು ವಿಶ್ವ ಮಹಿಳಾ ದಿನಾಚರಣೆಯಾಗಿದ್ದು, ಅದಕ್ಕೂ ಮೊದಲೇ ಏರ್ ಶೋನಲ್ಲಿ ತಮ್ಮ ಪ್ರದರ್ಶನ ನೀಡುವ ಮೂಲಕ ಮಹಿಳಾ ದಿನಾಚರಣೆಗೂ ಮೊದಲೇ ಸಾರ್ಥಕತೆ ಪಡೆದುಕೊಂಡರು. ಸೇನಾ ಪ್ಯಾರಾ ಜಂಪರ್ಸ್‌ನಲ್ಲಿ ಬೆಂಗಳೂರು ಮೂಲಕ ಕನ್ನಡದ ಮಹಿಳೆಯೂ ಇದ್ದಾರೆ. ಕಳೆದ 9 ವರ್ಷಗಳಿಂದ ಕರ್ನಾಟಕದ ಸಂಗೀತ ಪಾಲ್‌ರಾಜ್ ಸೇನಾ ಪ್ಯಾರಾ ಜಂಪರ್ಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡತಿ ಸಂಗೀತಾ ಪಾಲ್‌ರಾಜ್, ಭಾರತದ ಸೇನಾಪಡೆಯ ಪ್ಯಾರಾಜಂಪಿಂಗ್ ತಂಡದಲ್ಲಿ ಅವಕಾಶ ಪಡೆದಿರುವುದು ನನಗೆ ಹೆಮ್ಮೆ ಎನಿಸಿದೆ. ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಮಗೆ ಸೇನೆಗೆ ಸೇರಬೇಕು ಎಂಬ ಆಸೆ ಮೊಳಕೆಯೊಡೆದು ಅದರಂತೆ ಸೇನಾಪಡೆಯ ಪ್ಯಾರಾ ಜಂಪಿಂಗ್ ತಂಡ ಸೇರಿಕೊಂಡೆ. 9 ವರ್ಷದಿಂದ ಪ್ಯಾರಾಜಂಪಿಂಗ್ ನಡೆಸುತ್ತಿದ್ದೇನೆ. ಸಾವಿರಾರು ಅಡಿಗಳಿಂದ ಜಿಗಿದು ಪ್ಯಾರಾಚೂಟ್ ಮೂಲಕ ನೆಲವನ್ನು ಸ್ಪರ್ಶಿಸುವುದು ನಿಜಕ್ಕೂ ರೋಮಾಂಚನ ಉಂಟು ಮಾಡುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News