ಕೋಮುಗಲಭೆ, ಅಸ್ಪಶ್ಯತೆ ನಿವಾರಣೆಗೆ ಗಾಂಧೀ ಚಿಂತನೆ ಅಗತ್ಯ: ವೂಡೇ ಪಿ.ಕೃಷ್ಣ

Update: 2019-02-23 16:40 GMT

ಬೆಂಗಳೂರು, ಫೆ.23: ದೇಶದಲ್ಲಿ ಹೆಚ್ಚುತ್ತಲೆ ಹೋಗುತ್ತಿರುವ ಕೋಮುಗಲಭೆ, ಅಸ್ಪಶ್ಯತೆ ನಿವಾರಣೆಗೆ ಗಾಂಧೀಜಿಯ ಚಿಂತನೆಗಳು ತೀರಾ ಅಗತ್ಯವಿದೆ. ಪ್ರತಿಯೊಬ್ಬರು ಗಾಂಧೀಜಿ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವ ಕಡೆಗೆ ಹೆಜ್ಜೆ ಇಡಬೇಕೆಂದು ಎಂದು ಗಾಂಧಿ ಭವನದ ಅಧ್ಯಕ್ಷ ವೂಡೇ ಪಿ.ಕೃಷ್ಣ ಆಶಿಸಿದರು.

ಶನಿವಾರ ರಾಜಾಜಿನಗರದ ಒರಾಯನ್ ಮಾಲ್‌ನಲ್ಲಿ ಆಯೋಜಿಸಿರುವ 11ನೆ ಬೆಂಗಳೂರು ಅಂತರ್‌ರಾಷ್ಟ್ರೀಯ ಸಿನೆಮೋತ್ಸವದಲ್ಲಿ ಆಯೋಜಿಸಿದ್ದ ಗಾಂಧಿ-150 ಚಿಂತನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನೂರಾರು ವರ್ಷಗಳಿಂದ ದೇಶಕ್ಕೆ ಕೋಮು ದ್ವೇಷ, ಅಸ್ಪಶ್ಯತೆ, ಮದ್ಯಪಾನ ದೊಡ್ಡ ಪಿಡುಗುಗಳೆಂದು ಭಾವಿಸಿ, ಅವುಗಳ ನಿರ್ಮೂಲನೆಗಾಗಿ ಕಾಯಾ, ವಾಚಾ, ಮನಸಾ ಶ್ರಮಿಸಿದರು. ಹಾಗೂ ದೇಶವನ್ನು ಅಹಿಂಸೆ, ಸತ್ಯಾಗ್ರಹ, ಸರ್ವೋದಯ ಹಾಗೂ ಸ್ವದೇಶಿ ಕಲ್ಪನೆಯಡಿಯಲ್ಲಿ ಕಟ್ಟಲು ಬಯಸಿದ್ದರು ಎಂದು ಅವರು ಹೇಳಿದರು

ಇವತ್ತು ಯುವಜನತೆ ಮೆಕಾಲೆ ಶಿಕ್ಷಣ ಪದ್ಧತಿಯಿಂದ ಕೀಳರಿಮೆಯಿಂದ ಬಳಲುವಂತಾಗಿದೆ. ತಾಂತ್ರಿಕತೆಯಿಂದ ಎಡಬಿಡಂಗಿತನ ಶುರುವಾಗಿದೆ. ಹಾಗೂ ಜಾಗತೀಕರಣದಿಂದ ಹಳ್ಳಿಗಳ ಸಂರಚನೆ ನಾಶವಾಗುತ್ತಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಗಾಂಧೀಜಿಯ ತತ್ವಾದರ್ಶಗಳು ನಮಗೆ ಪ್ರಸ್ತುತವಾಗುತ್ತದೆ ಎಂದು ಅವರು ಹೇಳಿದರು.

ಮಹಾತ್ಮ ಗಾಂಧೀಜಿ ತ್ಯಾಗ ಹಾಗೂ ಅಹಿಂಸೆಗೆ ಮಾದರಿಯಾದವರು. ಭವಿಷ್ಯದ ಭಾರತವನ್ನು ಸರ್ವೋದಯದ ಕಲ್ಪನೆಯಲ್ಲಿ ರೂಪಿಸಲು ಬಯಸಿದ್ದರು. ಇದರ ಸಲುವಾಗಿ ಬ್ರಿಟಿಷರ ದುರಾಡಳಿತದ ವಿರುದ್ಧ 142ದಿನ ಉಪವಾಸ ಸತ್ಯಾಗ್ರಹ ಹಾಗೂ 2329 ದಿನ ಸೆರೆಮನೆವಾಸ ಅನುಭವಿಸಿದ್ದರು. ಕೇವಲ ಅವರು ಒಂದು ದೇಶಕ್ಕೆ ಚಿಂತಿಸಿದವರಲ್ಲ. ಇಡೀ ಮನುಕುಲದ ಶಾಂತಿಗಾಗಿ ಶ್ರಮಿಸಿದರು ಎಂದು ಅವರು ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News