ರಕ್ಷಣಾ ಇಲಾಖೆಯಿಂದ ಭದ್ರತೆ ಬಗ್ಗೆ ನಿರ್ಲಕ್ಷ್ಯ: ಆರೋಪ

Update: 2019-02-23 16:57 GMT

ಬೆಂಗಳೂರು, ಫೆ. 23: ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ವೇಳೆ ಸಂಭವಿಸಿದ ಭೀಕರ ಅಗ್ನಿ ಅವಘಡದ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ ಸಾರ್ವಜನಿಕರ ಭದ್ರತೆಯ ಬಗ್ಗೆ ಸಂಪೂರ್ಣ ನಿರ್ಲಕ್ಷ ವಹಿಸಿದೆ ಎಂಬ ಆರೋಪ ಸಾಮಾನ್ಯ ಜನರಿಂದ ಕೇಳಿಬಂದಿದೆ.

ರಕ್ಷಣಾ ಇಲಾಖೆ ಶಕ್ತಿ, ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಎಂದೆ ಬಿಂಬಿಸಲಾಗುವ ಏರ್ ಶೋ ವೇಳೆ ಭೀಕರ ಸ್ವರೂಪದ ಅಗ್ನಿ ಅನಾಹುತ ಸಂಭವಿಸಿದ್ದು, 300 ಕಾರುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಆದರೆ, ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಯ ಅಪಾಯಗಳಿಗೆ ಮಾಲಕರೇ ಜವಾಬ್ದಾರಿ ಎಂದು ರಕ್ಷಣಾ ಇಲಾಖೆ ಕೈತೊಳೆದುಕೊಂಡಿದೆ. ಅಲ್ಲದೆ, ಪಾರ್ಕಿಂಗ್ ಸ್ಥಳದ ಭದ್ರತೆ ಹೊಣೆಯನ್ನು ರಕ್ಷಣಾ ಇಲಾಖೆ ಖಾಸಗಿ ಸಂಸ್ಥೆಗೆ ಹೊರ ಗುತ್ತಿಗೆ ನೀಡಿದ್ದು, ಇಂತಹ ದೊಡ್ಡ ಅವಘಡ ಸಂಭವಿಸಲು ಕಾರಣ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ಕಳೆದ ಹತ್ತು ವರ್ಷಗಳಿಂದ ಯಾವುದೇ ಸಣ್ಣ ಅವಘಡವೂ ಸಂಭವಿಸದ ರೀತಿಯಲ್ಲಿ ಏರ್ ಶೋ ನಡೆಸಲಾಗಿತ್ತು. ಆದರೆ, ಈ ವರ್ಷ ಸೂರ್ಯಕಿರಣ ಯುದ್ಧ ವಿಮಾನ ಪತನ, ಆಕಸ್ಮಿಕ ಅಗ್ನಿ ಅವಘಡವೂ ಸಂಭವಿಸಿದ್ದು, ಗುತ್ತಿಗೆ ಅವ್ಯವಹಾರದ ಆರೋಪವೂ ಕೇಳಿಬಂದಿದೆ.

ಬಿರು ಬೇಸಿಗೆ ಬಿಸಿಲಿನ ಸಂದರ್ಭದಲ್ಲಿ ಸಂಭವಿಸಬಹುದಾದ ಬೆಂಕಿ ಅವಘಡ ನಿಯಂತ್ರಣಕ್ಕೆ ಕನಿಷ್ಟ ಮುನ್ನಚ್ಚರಿಕೆಯನ್ನು ವಹಿಸಿಲ್ಲ. ಪಾರ್ಕಿಂಗ್ ಸ್ಥಳದಲ್ಲೆ ಯಾವುದೇ ಭದ್ರತಾ ವ್ಯವಸ್ಥೆ ಕಲ್ಪಿಸಿಲ್ಲ. ಅಲ್ಲದೆ, ಒಣಹುಲ್ಲಿರುವ ಜಾಗವನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಪ್ರತಿನಿತ್ಯ ಇಡೀ ಜಾಗದಲ್ಲಿ ನೀರು ಚಿಮುಕಿಸಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದ ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News