ಅನವಶ್ಯಕವಾಗಿ ಬಿಡಿ ಭಾಗಗಳ ಖರೀದಿ: ಕೆಎಸ್ಸಾರ್ಟಿಸಿಯ 11 ಮಂದಿ ಅಮಾನತು- ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

Update: 2019-02-23 17:26 GMT

ಬೆಂಗಳೂರು, ಫೆ.23: ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಲ್ಲಿ ಅನವಶ್ಯಕವಾಗಿ ಬಸ್ಸುಗಳ ಬಿಡಿ ಭಾಗಗಳನ್ನು ಖರೀದಿ ಮಾಡಿ, ದಾಸ್ತಾನು ಮಾಡಿರುವ ಕುರಿತು, ಜಾಗೃತ ದಳ ನೀಡಿರುವ ವರದಿಯನ್ನು ಆಧರಿಸಿ 11 ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಟುಗಳ ಕವರ್ ಮೇಲೆ ಹಾಕುವ ರೆಝ್ಸಿನ್ ಖರೀದಿ ವಿಚಾರದಲ್ಲಿ ನಾಲ್ವರನ್ನು ಅಮಾನತು ಮಾಡಲಾಗಿದೆ. ವಾಹನದ ಬಿಡಿ ಭಾಗಗಳ ಖರೀದಿ ಪ್ರಕರಣದಲ್ಲಿ 7 ಮಂದಿಯನ್ನು ಅಮಾನತು ಮಾಡಲಾಗಿದೆ ಎಂದರು.

ಸಾರಿಗೆ ಇಲಾಖೆಯಲ್ಲಿ ಅಪಾರ ಪ್ರಮಾಣದ ಬಿಡಿ ಭಾಗಗಳು ಹಾಗೂ ಇತರ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಆದರೆ, ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಅನಗತ್ಯ ವಸ್ತುಗಳನ್ನು ಖರೀದಿ ಮಾಡಿ, ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದೆ. ಈ ಸಂಬಂಧ ಜಾಗೃತ ದಳ ನೀಡಿರುವ ವರದಿಯನ್ನು ಆಧರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಬಿಡಿ ಭಾಗಗಳ ಖರೀದಿಯಲ್ಲಿ ಆಗುತ್ತಿರುವ ಅಕ್ರಮಗಳನ್ನು ತಡೆಗಟ್ಟಲು, ಇನ್ನು ಮುಂದೆ ರಾಜ್ಯ ರಸ್ತೆ ಸಾರಿಗೆ ನಿಗಮದ ಆವರಣದಲ್ಲಿಯೇ ಬಿಡಿ ಭಾಗಗಳ ತಯಾರಿಕ ಕಂಪೆನಿಗಳು ತಮ್ಮ ಘಟಕವನ್ನು ಸ್ಥಾಪಿಸಿ, ಅಲ್ಲಿಂದಲೇ ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಮ್ಮಣ್ಣ ತಿಳಿಸಿದರು.

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಸಹಿಯನ್ನು ನಕಲು ಮಾಡಿ, 141 ಮಂದಿಯನ್ನು ವರ್ಗಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯನ್ನು ಅಮಾನತು ಮಾಡಿ ತನಿಖೆಗೆ ಆದೇಶ ಮಾಡಲಾಗಿದೆ ಎಂದು ಅವರು ಹೇಳಿದರು.

ಪ್ರಯಾಣ ದರ ಪರಿಷ್ಕರಣೆ: ಪೆಟ್ರೋಲ್, ಡೀಸೆಲ್ ದರಗಳನ್ನು ಪ್ರತಿ ದಿನ ಪರಿಷ್ಕರಿಸಲು ಅನುಮತಿ ನೀಡಿರುವ ಮಾದರಿಯಲ್ಲಿ, ರಾಜ್ಯ ರಸ್ತೆ ಸಾರಿಗೆ ಪ್ರಯಾಣ ದರವನ್ನು ಪರಿಷ್ಕರಿಸುವ ಅಧಿಕಾರವನ್ನು ನೀಡುವಂತೆ ಸಾರಿಗೆ ಇಲಾಖೆಯು ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ತಮ್ಮಣ್ಣ ತಿಳಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ದರದಂತೆ ಮೂರು ತಿಂಗಳಿಗೊಮ್ಮೆ ಬಸ್ ಪ್ರಯಾಣ ದರವನ್ನು ಪರಿಷ್ಕರಣೆ ಮಾಡುವ ಅಧಿಕಾರವನ್ನು ನೀಡುವಂತೆ ಸಲ್ಲಿಸಲಾಗಿರುವ ಪ್ರಸ್ತಾವನೆ ಸಂಬಂಧ ಶೀಘ್ರದಲ್ಲೆ ತೀರ್ಮಾನ ಪ್ರಕಟವಾಗುವ ನಿರೀಕ್ಷೆಯಿದೆ ಎಂದರು.

2013-14ರಲ್ಲಿ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಲಾಗಿತ್ತು. ಆನಂತರ ಹಲವಾರು ಬಾರಿ ತೈಲ ಬೆಲೆಗಳು ಗಣನೀಯವಾಗಿ ಹೆಚ್ಚಳವಾಗಿದೆ. ಆದುದರಿಂದ, ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಸಮಾಲೋಚನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಿಗೆ 3 ಸಾವಿರ ಹೈಟೆಕ್ ಬಸ್ಸುಗಳನ್ನು ಶೀಘ್ರದಲ್ಲೆ ಸೇರ್ಪಡೆ ಮಾಡಲಾಗುವುದು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 7 ಲಕ್ಷ ಕಿ.ಮೀ. ಸಂಚರಿಸಿದ ಬಸ್ಸುಗಳನ್ನು ಗುಜರಿಗೆ ಹಾಕಲಾಗಿದೆ ಎಂದು ತಮ್ಮಣ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News