ವೈದ್ಯಕೀಯ ಶುಲ್ಕ ಶೇ.15 ರಷ್ಟು ಹೆಚ್ಚಳಕ್ಕೆ ನಿರ್ಧಾರ: ಕಾಮೆಡ್-ಕೆ ಅಧ್ಯಕ್ಷ ಎಂ.ಆರ್.ಜಯರಾಂ

Update: 2019-02-23 17:28 GMT

ಬೆಂಗಳೂರು, ಫೆ.23: ರಾಜ್ಯ ಸರಕಾರವು 2019-20ನೇ ಸಾಲಿನಿಂದ ಸ್ನಾತಕೋತ್ತರ ಪದವಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನು ಶೇ.15ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರಕಾರಿ ಹಾಗೂ ಖಾಸಗಿ ಕೋಟಾಗಳಿಗೆ ನೂತನ ಶುಲ್ಕ ಅನ್ವಯವಾಗಲಿದೆ ಎಂದು ಕಾಮೆಡ್-ಕೆ ಅಧ್ಯಕ್ಷ ಎಂ.ಆರ್.ಜಯರಾಂ ತಿಳಿಸಿದ್ದಾರೆ.

ನಗರದ ಕಾಮೆಡ್-ಕೆ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ (ಕೆಪಿಸಿಎಫ್) ಹಾಗೂ ರಾಜ್ಯ ಸರಕಾರದ ನಡುವೆ ನಡೆದ ಸಭೆಯಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

2019 ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾಗುತ್ತದೆ. ಆದುದರಿಂದಾಗಿ ಮೊದಲೇ ಸ್ನಾತಕೋತ್ತರ ಪದವಿ ಸೀಟುಗಳು ಶುಲ್ಕ ಹೆಚ್ಚಳ ಮಾಡಲಾಗಿದೆ. ಕಾಮೆಡ್- ಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಸರಕಾರಿ ಹಾಗೂ ಖಾಸಗಿ ಕೋಟಾ ಸೀಟುಗಳಿಗೆ ಶೇ.15 ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದರು.

ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆಯು ಮಾರ್ಚ್ ಅಂತ್ಯಕ್ಕೆ ಆರಂಭವಾಗಲಿದೆ. ವೈದ್ಯ ಮತ್ತು ದಂತ ವೈದ್ಯಕೀಯ ಪದವಿ ತರಗತಿಗಳ ಶುಲ್ಕ ಹೆಚ್ಚಳ ಕುರಿತ ಸಭೆಯು ಲೋಕಸಭಾ ಚುನಾವಣೆ ನಂತರ ನಡೆಯಲಿದೆ. ಕಾಲೇಜುಗಳನ್ನು ನಡೆಸಲು ಅವಶ್ಯವಿರುವ ವಾರ್ಷಿಕ ವೆಚ್ಚ, ಶಿಕ್ಷಣ ಮತ್ತು ಮೂಲ ಸೌಕರ್ಯ, ಗುಣಮಟ್ಟದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನ ಅನುಸಾರವಾಗಿ ಸರ್ಕಾರಕ್ಕೆ ಶುಲ್ಕ ಹೆಚ್ಚಳವನ್ನು ವಿವರಿಸಲಾಗಿದೆ. ವಾಸ್ತವಾಂಶವನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

2018-19ನೇ ಸಾಲಿನ ದರ: ವೈದ್ಯಕೀಯ ಶಿಕ್ಷಣದಲ್ಲಿ ಪ್ಯಾರಾ ಕ್ಲಿನಿಕಲ್ ಕೋರ್ಸ್‌ಗೆ ಸರಕಾರಿ ಕಾಲೇಜು 1.26 ಲಕ್ಷ ರೂ., ಕಾಮೆಡ್-ಕೆ 1.89 ಲಕ್ಷ ರೂ., ಕ್ಲಿನಿಕಲ್ ಕೋರ್ಸ್‌ಗೆ ಸರಕಾರಿ ಕಾಲೇಜುಗಳಲ್ಲಿ 5.06 ಲಕ್ಷ ರೂ., ಕಾಮೆಡ್-ಕೆ 7.59 ಲಕ್ಷ ರೂ., ಪ್ರಿ ಕ್ಲಿನಿಕಲ್ ಕೋರ್ಸ್‌ಗೆ ಸರಕಾರಿ 63.250 ಲಕ್ಷ ರೂ., ಹಾಗೂ ಕಾಮೆಡ್-ಕೆ 95.450 ಲಕ್ಷ ರೂ.ಗಳನ್ನು ಹೊಂದಿದೆ.

ದಂತ ವೈದ್ಯಕೀಯ ಶಿಕ್ಷಣದಲ್ಲಿ ಸರಕಾರಿ ಕಾಲೇಜುಗಳಲ್ಲಿ 2.58 ಲಕ್ಷ ರೂ. ಹಾಗೂ ಕಾಮೆಡ್-ಕೆ ನಲ್ಲಿ 4.04 ಲಕ್ಷ ರೂ.ಗಳನ್ನು ಹೊಂದಿದೆ. ಇದಕ್ಕೆ 2019-20ನೇ ಸಾಲಿನಿಂದ ಶೇ.15ರಷ್ಟು ಹೆಚ್ಚಳವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News