ಏರ್ ಶೋ ವೇಳೆ ಅಗ್ನಿ ಅವಘಡ: ವಿಮಾ ಹಕ್ಕು ಪರಿಶೀಲನೆಗೆ ವಿಶೇಷ ತಂಡ- ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್

Update: 2019-02-23 17:32 GMT

ಬೆಂಗಳೂರು, ಫೆ. 23: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ವಾಹನಗಳನ್ನು ಕಳೆದುಕೊಂಡ ಸಂಬಂಧಪಟ್ಟವರಿಗೆ ವಿಮಾ ಹಕ್ಕುಗಳನ್ನು ಪರಿಶೀಲಿಸಲು ಒಂದು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ತಿಳಿಸಿದ್ದಾರೆ.

ಸದರಿ ಪ್ರದರ್ಶನದಲ್ಲಿ ಹಾನಿಗೊಳಗಾದ ವಾಹನಗಳಿಗೆ ನಕಲು ಆರ್.ಸಿ. ಮತ್ತು ಚಾಲನಾ ಪರವಾನಗಿಗಳನ್ನು ನೀಡಲು ಸಾರಿಗೆ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸೂಚಿಸಿದೆ. ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ವಾಹನಗಳ ವಿಮಾ ಹಕ್ಕುಗಳನ್ನು ಸಹಾನುಭೂತಿ ದೃಷ್ಟಿಕೋನದಿಂದ ಪರಿಹರಿಸಿಕೊಡಲು ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ.

ಏರೋ ಇಂಡಿಯಾ -2019ರ ರವಿವಾರದ ಪ್ರದರ್ಶನಕ್ಕೆ ಆಗಮಿಸುವ ವೀಕ್ಷಕರಿಗೆ ಪರ್ಯಾಯ ವಾಹನ ನಿಲುಗಡೆ ಪ್ರದೇಶವನ್ನು ಗುರುತಿಸಲಾಗಿದೆ. ಈ ದುರ್ಘಟನೆಗೆ ಕಾರಣವೇನು ಎಂಬುದರ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

25 ಅಗ್ನಿ ಶಾಮಕ ವಾಹನಗಳು ಮತ್ತು 150 ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾಲ ಹರಸಾಹಸ ನಡೆಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಆದರೆ, 300ಕ್ಕೂ ಹೆಚ್ಚು ವಾಹನಗಳು ಸುಟ್ಟು ಹೋಗಿರುತ್ತವೆ. ಅದೃಷ್ಟಾವಶಾತ್ ಯಾವುದೇ ಮಾನವ ಹಾನಿ ಸಂಭವಿಸಿಲ್ಲ. ಸದರಿ ಪ್ರದರ್ಶನಕ್ಕೆ ಆಗಮಿಸಿದ್ದ ವೀಕ್ಷಕರನ್ನು ವಾಹನ ನಿಲುಗಡೆ ಸ್ಥಳದಿಂದ ಹೆಚ್ಚುವರಿ ಬಿಎಂಟಿಸಿ ಬಸ್ಸುಗಳ ಮೂಲಕ ಸ್ಥಳದಿಂದ ತೆರವುಗೊಳಿಸಲಾಗಿರುತ್ತದೆ ಎಂದು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News