ಇನ್ಫೋಸಿಸ್ ಫೌಂಡೇಷನ್ ಹೆಸರು ದುರುಪಯೋಗ: ಫೌಂಡೇಷನ್ ಆರೋಪ

Update: 2019-02-23 17:39 GMT

ಬೆಂಗಳೂರು, ಫೆ.23: ಇನ್ಫೋಸಿಸ್ ಫೌಂಡೇಷನ್ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ವ್ಯಕ್ತಿಗಳು ಅಥವಾ ಗುಂಪುಗಳು, ಸಾರ್ವಜನಿಕರು, ವ್ಯಾಪಾರಿಗಳು ಮತ್ತು ಉದ್ಯಮ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಫೌಂಡೇಷನ್ ಆರೋಪ ಮಾಡಿದೆ.

ದುಷ್ಕರ್ಮಿಗಳೂ ಸಂಗ್ರಹ ಮಾಡಿದ ಹಣವನ್ನು ಇನ್ಫೋಸಿಸ್ ಫೌಂಡೇಷನ್ ಮಾಡುವ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಬಳಸುತ್ತೇವೆ ಎಂದು ಹೇಳಿ ಮೋಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಇನ್ಫೋಸಿಸ್ ಸಂಸ್ಥೆಯ ಸಮಾಜ ಸೇವಾ ಹಾಗೂ ಸಿಎಸ್‌ಆರ್ ಭಾಗವಾಗಿರುವ ಇನ್ಫೋಸಿಸ್ ಫೌಂಡೇಷನ್ ತಿಳಿಸಿದೆ.

ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷೆ ಸುಧಾಮೂರ್ತಿಯ ನಕಲಿ ಸಹಿಯನ್ನು ಬಳಸಿ ತಯಾರಿಸಲಾದ ಇನ್ಫೋಸಿಸ್ ಫೌಂಡೇಷನ್‌ನ ನಕಲಿ ಲೆಡರ್‌ಹೆಡ್ ಮೂಲಕ ಮೋಸಗಾರರು ಬಿಲ್ ನೀಡಿ ಮೋಸ ಮಾಡಿದ್ದು, ಅದರ ಪ್ರತಿಯೂ ಫೌಂಡೇಷನ್‌ಗೆ ಸಿಕ್ಕಿದೆ ಎಂದು ಫೌಂಡೇಷನ್ ಹೇಳಿದೆ.

ಈ ಕೃತ್ಯವು ಇನ್ಫೋಸಿಸ್ ಫೌಂಡೇಷನ್‌ಗೆ ಆಘಾತ ಉಂಟು ಮಾಡಿದೆ. ಅಲ್ಲದೆ, ಇನ್ಫೋಸಿಸ್ ಫೌಂಡೇಷನ್ ತಾನು ನಡೆಸುವ ಯಾವುದೇ ಚಟುವಟಿಕೆಗಳಿಗೆ ದೇಣಿಗೆ ಸಂಗ್ರಹ ಮಾಡುವುದು ಅಥವಾ ಹಣ ನೀಡುವಂತೆ ಮನವಿ ಮಾಡುವುದಿಲ್ಲ ಹಾಗೂ ಫೌಂಡೇಷನ್ ತನ್ನೆಲ್ಲ ಕಾರ್ಯ ಚಟುವಟಿಕೆಗಳಿಗೆ ತನ್ನದೇ ನಿಧಿಯನ್ನು ಬಳಸಿಕೊಳ್ಳುತ್ತಿದೆ ಎಂದು ಫೌಂಡೇಷನ್ ಸ್ಪಷ್ಟಪಡಿಸಿದ್ದು, ಫೌಂಡೇಷನ್‌ನ ಕಾರ್ಯ ಚಟುವಟಿಕೆಗಳ ಪೂರ್ಣ ಮಾಹಿತಿಯನ್ನು ವೆಬ್ ಸೈಟ್ https://ww w.infosys.com/infosys-foundation/ ನಲ್ಲಿ ಕಾಣಬಹುದು.

ಫೌಂಡೇಷನ್ ಹೆಸರಲ್ಲಿ ಯಾರಾದರೂ ನಿಮ್ಮನ್ನು ಹಣಕ್ಕಾಗಿ ಸಂಪರ್ಕಿಸಿದರೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯವರ ದೂ.ಸಂ: 080-2663 5199 ಅನ್ನು ಸಂಪರ್ಕಿಸಿ ಮಾಹಿತಿ ನೀಡಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸುವ ಮೂಲಕ ದುಷ್ಕರ್ಮಿಗಳ ಪತ್ತೆಗೆ ನೆರವಾಗಿ ಸಮಾಜಕ್ಕೆ ಸಹಾಯ ಮಾಡಲು ಇನ್ಫೋಸಿಸ್ ಫೌಂಡೇಷನ್ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News