ಈಶಾನ್ಯ ರಾಜ್ಯಗಳು ಸಿನೆಮಾ ಚಿತ್ರೀಕರಣಕ್ಕೆ ಸೂಕ್ತ ಸ್ಥಳ: ನಟಿ ಸುಲಕ್ಯಾನಾ ಬರುಹಾ

Update: 2019-02-23 17:42 GMT

ಬೆಂಗಳೂರು, ಫೆ.23: ಸಿನೆಮಾಗಳ ಚಿತ್ರೀಕರಣಕ್ಕೆ ಈಶಾನ್ಯ ರಾಜ್ಯಗಳ ಪರಿಸರ ಸೂಕ್ತವಾಗಿದೆ. ಆದರೆ, ಮಾಧ್ಯಮಗಳು ಈಶಾನ್ಯ ರಾಜ್ಯಗಳ ಕುರಿತು ಜನರಲ್ಲಿ ಇಲ್ಲಸಲ್ಲದ ಭೀತಿ ಉಂಟು ಮಾಡುತ್ತಿವೆ ಎಂದು ಸಿನೆಮಾ ನಟಿ ಸುಲಕ್ಯಾನಾ ಬರುಹಾ ವಿಷಾದಿಸಿದರು.

ಶನಿವಾರ ನಗರದ ಒರಾಯನ್ ಮಾಲ್‌ನಲ್ಲಿ ನಡೆಯುತ್ತಿರುವ 11ನೆ ಬೆಂಗಳೂರು ಅಂತರ್‌ರಾಷ್ಟ್ರೀಯ ಸಿನೆಮೋತ್ಸವದಲ್ಲಿ ಆಯೋಜಿಸಿದ್ದ ಸಂವಾದಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶಾನ್ಯ ರಾಜ್ಯಗಳಲ್ಲಿ ಆತಂಕವಾದ ಹೆಚ್ಚಾಗಿದೆ. ಯಾವಾಗಲೂ ಭಯಭೀತ ವಾತಾವರಣವಿದೆ ಎಂಬ ಸುಳ್ಳು ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಹಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಈಶಾನ್ಯ ರಾಜ್ಯಗಳಲ್ಲಿ ಹಚ್ಚ ಹಸುರಿನ ಸ್ವಚ್ಛಂದ ವಾತಾವರಣವಿದೆ. ಬೆಟ್ಟ ಗುಡ್ಡಗಳಿಂದ ಆವೃತವಾದ ಈ ಪ್ರದೇಶವು ಹಾಗೂ ಇಲ್ಲಿನ ವೇಷ-ಭೂಷಣ ಸಿನೆಮಾ ಚಿತ್ರೀಕರಣಕ್ಕೆ ಸೂಕ್ತವಾಗಿದೆ. ಆದರೆ, ಈಶಾನ್ಯ ರಾಜ್ಯಗಳ ಕುರಿತು ಇತರೆ ಭಾಷೆಗಳಲ್ಲಿ ತಯಾರಾಗುವ ಸಿನೆಮಾಗಳಲ್ಲಿ ಕೇವಲ ಉಗ್ರರು, ಪೊಲೀಸರು, ಬಾಂಬು ಇವುಗಳನ್ನಷ್ಟೆ ತೋರಿಸಲಾಗುತ್ತಿದೆ. ಇದು ಬದಲಾಗಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಹಿಂದಿ ಹೇರಿಕೆ: ಈಶಾನ್ಯ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಹೆಚ್ಚಾಗುತ್ತಿದೆ. ಇದರಿಂದ ಸಿನೆಮಾ ಕ್ಷೇತ್ರಗಳ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಮಣಿಪುರ, ಮಂಗೋಲಿಯಾ ಸೇರಿದಂತೆ ಹಲವಾರು ಭಾಷೆಗಳ ವೈವಿಧ್ಯವಿದೆ. ಇವು ಮುಖ್ಯಧಾರೆಗೆ ಬರಬೇಕಾದರೆ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಅವರು ಹೇಳಿದರು.

ಬಿಹಾರಿ ಸಿನೆಮಾ ನಿರ್ದೇಶಕ ನಾರಾಯಣ ಸಿಂಗ್ ಮಾತನಾಡಿ, ಬಿಹಾರದಲ್ಲಿ ಮುಶಾಹಾರ್ ಎಂಬ ಅಸ್ಪಶ್ಯ ಜಾತಿಯಿದೆ. ಇದು ಬಿಹಾರದಲ್ಲಿ ಶೇ.6ರಷ್ಟು ಸಂಖ್ಯೆಯನ್ನು ಹೊಂದಿದೆ. ಇಂದಿಗೂ ಶೇ.80ರಷ್ಟು ಅನಕ್ಷರಸ್ಥರಾಗಿಯೆ ಉಳಿದುಕೊಂಡಿದ್ದಾರೆ. ಇವತ್ತಿನ ಆಧುನಿಕ, ತಂತ್ರಜ್ಞಾನ ಯುಗದ ಯಾವುದೆ ಸೌಕರ್ಯಗಳು ಇವರಿಗೆ ತಲುಪಿಲ್ಲ. ಹೀಗಾಗಿ ಇವರ ಕುರಿತು ಭೋರ್ ಎಂಬ ಸಿನೆಮಾವನ್ನು ನಿರ್ದೇಶಿಸಿದ್ದೇನೆ ಎಂದರು.

ಮುಶಾಹಾರ್ ಸಮುದಾಯದ ಕುರಿತು ಸಿನೆಮಾ ತಯಾರಿಸುವುದಷ್ಟೆ ನಮ್ಮ ಕೆಲಸವಲ್ಲ. ಆ ಸಿನೆಮಾವನ್ನು ಜನಪ್ರತಿನಿಧಿಗಳು ಹಾಗೂ ಆಡಳಿತಾಧಿಕಾರಿಗಳು ವೀಕ್ಷಿಸಬೇಕು. ಆ ಮೂಲಕ ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಬೇಕೆಂಬುದು ನನ್ನ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಈ ವೇಳೆ ಸಿನೆಮೋತ್ಸವದ ಕಲಾ ನಿರ್ದೇಶಕ ವಿದ್ಯಾಶಂಕರ್ ಉಪಸ್ಥಿತರಿದ್ದರು.

ಪಾಕ್ ಕಲಾವಿದರಿಗೆ ಬಹಿಷ್ಕಾರ ಅನಿವಾರ್ಯ

ಕಲೆಗಳಿಗೆ ಯಾವುದೇ ದೇಶ, ಭಾಷೆಯ ಗಡಿಯಿಲ್ಲ. ಆದರೂ ದೇಶದ ಭದ್ರತೆಯ ಹಿತದೃಷ್ಟಿಯಿಂದ ಪಾಕಿಸ್ತಾನದ ಕಲಾವಿದರಿಗೆ ಬಹಿಷ್ಕಾರ ಹೇರುವುದು ಅನಿವಾರ್ಯ. ಕಲಾವಿದರಿಂದ ದೇಶಕ್ಕೆ ಯಾವುದೇ ಹಾನಿಯಾಗದಿದ್ದರೂ ಪಾಕಿಸ್ತಾನ ನಡೆಸುತ್ತಿರುವ ದಾಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಮಾಡಲೇಬೇಕಿದೆ. ಹೀಗಾಗಿ ಪಾಕ್ ಕಲಾವಿದರನ್ನು ಸಂಪೂರ್ಣವಾಗಿ ಭಾರತಿಯ ಚಿತ್ರಗಳಲ್ಲಿ ಬಹಿಷ್ಕರಿಸುವ ಮೂಲಕ ಉಗ್ರರ ದಾಳಿ ಖಂಡಿಸಲಿದ್ದೇವೆ. ನಮಗೆ ದೇಶ ಮೊದಲು. ಆಮೇಲೆ ಕಲೆ ಹಾಗೂ ಕಲಾವಿದರು.

-ರಾಹುಲ್ ರವೈಲ್ ಬಾಲಿವುಡ್ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News