ಕಡಿಮೆ ವೆಚ್ಚದ ವಿಮಾನ ಪ್ರಯಾಣಕ್ಕೆ ಚಿಂತನೆ: ಜಿತೇಂದ್ರ ಜಾಧವ್

Update: 2019-02-23 17:49 GMT

ಬೆಂಗಳೂರು, ಫೆ.23: ಸಾಮಾನ್ಯ ಜನರೂ ಕಡಿಮೆ ವೆಚ್ಚದಲ್ಲಿ ವಿಮಾನದಲ್ಲಿ ಸಂಚರಿಸಲು ಅನುಕೂಲವಾಗುವಂತೆ ಉಡಾನ್ ಯೋಜನೆಗೆ ಪೂರಕವಾಗಿ ಪ್ರಾದೇಶಿಕ ಸಾರಿಗೆ ವಿಮಾನ(ಆರ್‌ಟಿಎ) ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಏರೋ ಇಂಡಿಯಾ ಪ್ರದರ್ಶನದಲ್ಲಿ ಸಿಎಸ್‌ಐಆರ್-ಎನ್‌ಎಎಲ್ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ಜೆ.ಜಾಧವ್ ತಿಳಿಸಿದರು.

ನಗರದ ಯಲಹಂಕದಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದ ವೇಳೆ ಮಾತನಾಡಿದ ಅವರು, ದೇಶದ ಸಣ್ಣ ನಗರ ಮತ್ತು ಪಟ್ಟಣಗಳ ಮಧ್ಯೆ ವಿಮಾನಯಾನಕ್ಕಾಗಿ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ(ಎನ್‌ಎಎಲ್) ಮತ್ತು ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಪರಿಷತ್ ಜಂಟಿಯಾಗಿ 70ರಿಂದ 90ಆಸನಗಳ ಸಾಮರ್ಥ್ಯದ ಸಣ್ಣ ವಿಮಾನಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಕೈಗೆತ್ತಿಕೊಳ್ಳಲಿದೆ ಎಂದರು.

ಆರ್‌ಟಿಎ ಯೋಜನೆಗಾಗಿ 6ಸಾವಿರ ಕೋಟಿ ಅಗತ್ಯವಿದ್ದು, ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಯತ್ನದಲ್ಲಿ ಎಚ್‌ಎಎಲ್, ಟಾಟಾ ಮತ್ತು ಇತರ ರಾಷ್ಟ್ರೀಯ ಪಾಲುದಾರರ ಸಹಭಾಗಿತ್ವವನ್ನು ಪಡೆಯಲಾಗುವುದು. ಎನ್‌ಎಎಲ್ ಈ ಯೋಜನೆಯ ನಾಯಕತ್ವ ಹೊಣೆಗಾರಿಕೆ ನಿಭಾಯಿಸಲಿದೆ ಎಂದು ಅವರು ಹೇಳಿದರು.

ದೇಶ-ವಿದೇಶಗಳಲ್ಲಿ ಪ್ರಾದೇಶಿಕ ಸಾರಿಗೆ ಉದ್ದೇಶದ ವಿಮಾನಗಳಿಗೆ ಉತ್ತಮ ಬೇಡಿಕೆ ಇದೆ. ಅದನ್ನು ಪೂರೈಸಲು ಕಾರ್ಯ ಸಾಧ್ಯತೆ ವರದಿ ಸಿದ್ಧಪಡಿಸಿದ್ದೇವೆ. ಅದರ ಪ್ರಕಾರ ಮುಂದಿನ 20 ವರ್ಷಗಳಲ್ಲಿ ದೇಶದಲ್ಲಿ 250 ರಿಂದ 300 ಸಣ್ಣ ವಿಮಾನಗಳಿಗೆ ಬೇಡಿಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News