ಮೊದಲ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯ ಮುಖಾಮುಖಿ

Update: 2019-02-23 19:05 GMT

ವಿಶಾಖಪಟ್ಟಣ, ಫೆ.23: ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವಕಪ್‌ಗೆ ಮೊದಲು ನಡೆಯಲಿರುವ ಕೆಲವೇ ಪಂದ್ಯಗಳಲ್ಲಿ ಉತ್ತಮ ತಯಾರಿಯ ಗುರಿ ಹಾಕಿಕೊಂಡಿರುವ ಭಾರತ ಕ್ರಿಕೆಟ್ ತಂಡ ರವಿವಾರ ನಡೆಯಲಿರುವ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಮುಖಾಮುಖಿಯಾಗಲಿದೆ.

ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಮೇ 30 ರಿಂದ ಆರಂಭವಾಗಲಿರುವ ವಿಶ್ವಕಪ್‌ಗಿಂತ ಮೊದಲು ಭಾರತ ತಂಡ ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ಎರಡು ಟಿ-20 ಅಂತರ್‌ರಾಷ್ಟ್ರೀಯ ಹಾಗೂ ಐದು ಏಕದಿನ ಸಹಿತ ಒಟ್ಟು 7 ಪಂದ್ಯಗಳನ್ನು ಆಡಲಿದೆ.

ನ್ಯೂಝಿಲೆಂಡ್ ವಿರುದ್ಧ ಸರಣಿಯಿಂದ ಹೊರಗುಳಿದಿದ್ದ ಪ್ರಮುಖ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಜಸ್‌ಪ್ರೀತ್ ಬುಮ್ರಾ ತಂಡಕ್ಕೆ ವಾಪಸಾಗುತ್ತಿದ್ದಾರೆ. ಯುವ ಆಟಗಾರರಾದ ರಿಷಭ್ ಪಂತ್ ಹಾಗೂ ವಿಜಯ್ ಶಂಕರ್ ಪ್ರದರ್ಶನದ ಮೇಲೆ ಎಲ್ಲರ ಚಿತ್ತವಿದೆ.

ದಿನೇಶ್ ಕಾರ್ತಿಕ್‌ರನ್ನು ಏಕದಿನ ತಂಡದಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಪಂತ್ ವಿಶ್ವಕಪ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ. ಬೆನ್ನುನೋವಿನಿಂದಾಗಿ ತಂಡದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಶಂಕರ್‌ಗೆ ಮತ್ತೊಂದು ಉತ್ತಮ ಅವಕಾಶ ಲಭಿಸಿದೆ.

ಶಂಕರ್ ಸ್ಫೋಟಕ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದರೂ ಬೌಲಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಈಗಾಗಲೇ ಆಸೀಸ್ ವಿರುದ್ಧ ಏಕದಿನ ಪಂದ್ಯದಿಂದ ಕೈಬಿಡಲ್ಪಟ್ಟಿದ್ದ ಕಾರ್ತಿಕ್‌ಗೆ ಎರಡು ಟಿ-20 ಪಂದ್ಯಗಳು ತನ್ನ ಸಾಮರ್ಥ್ಯ ತೋರಿಸಲು ಇರುವ ಉತ್ತಮ ಅವಕಾಶವಾಗಿದೆ.

ತಮಿಳುನಾಡಿನ ಹಿರಿಯ ಆಟಗಾರ ಕಾರ್ತಿಕ್ ನ್ಯೂಝಿಲೆಂಡ್ ವಿರುದ್ಧದ ಕೊನೆಯ ಟ್ವೆಂಟಿ-20 ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯಗೆ ರನ್ ಗಳಿಸಲು ಅವಕಾಶ ನೀಡದೇ ಟೀಕೆಗೆ ಗುರಿಯಾಗಿದ್ದರು. ಆ ಪಂದ್ಯದಲ್ಲಿ ಭಾರತ 4 ರನ್‌ನಿಂದ ಸೋತಿತ್ತು. ಕಾರ್ತಿಕ್ ಅಂತಿಮ-11ರ ಬಳಗದಲ್ಲಿ ಸ್ಥಾನ ಪಡೆಯಲು ರಾಹುಲ್‌ರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ. ರಾಹುಲ್ ದೇಶಿಯ ಕ್ರಿಕೆಟ್‌ನಲ್ಲಿ ಭಾರತ ‘ಎ’ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು.

ನ್ಯೂಝಿಲೆಂಡ್ ಸರಣಿಯಲ್ಲಿ ಸೊರಗಿದಂತೆ ಕಾಣುತ್ತಿದ್ದ ಭಾರತದ ಬೌಲಿಂಗ್ ವಿಭಾಗ ವಿಶ್ವದ ನಂ.1 ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಮರಳಿಕೆಯಿಂದಾಗಿ ಬಲಿಷ್ಠವಾಗಿದೆ. ಬುಮ್ರಾಗೆ ಟಿ-20 ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರೈಸಲು ಇನ್ನು ಎರಡು ವಿಕೆಟ್ ಅಗತ್ಯವಿದೆ. ಹೊಸ ಮುಖ, ಲೆಗ್ ಸ್ಪಿನ್ನರ್ ಮಾಯಾಂಕ್ ಮರ್ಕಂಡೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಸ್ವದೇಶದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಯಜುವೇಂದ್ರ ಚಹಾಲ್ ಹಾಗೂ ಕೃನಾಲ್ ಪಾಂಡ್ಯ ಮತ್ತೊಮ್ಮೆ ಅವಕಾಶ ಪಡೆಯುವ ಸಾಧ್ಯತೆಯಿದೆ. ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ಭಾರತ ಸ್ಥಿರ ಪ್ರದರ್ಶನ ನೀಡಲು ಸಂಪೂರ್ಣ ಸಫಲವಾಗಿಲ್ಲ. ಇತ್ತೀಚೆಗೆ ನ್ಯೂಝಿಲೆಂಡ್ ವಿರುದ್ಧ 1-2 ಅಂತರದಿಂದ ಟಿ-20 ಸರಣಿಯಲ್ಲಿ ಸೋತಿತ್ತು. ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಟಿ-20 ಕ್ರಿಕೆಟ್‌ನಲ್ಲಿ ಹೆಡ್-ಟು-ಹೆಡ್ ದಾಖಲೆಯಲ್ಲಿ 11-6 ಮುನ್ನಡೆಯಲ್ಲಿದೆ. ಮಳೆಯಿಂದಾಗಿ ಆಸೀಸ್ ವಿರುದ್ಧ ಸ್ವದೇಶದಲ್ಲಿ 2017ರಲ್ಲಿ ಹಾಗೂ ವಿದೇಶದಲ್ಲಿ 2018ರಲ್ಲಿ ನಡೆದ ಟಿ-20 ಸರಣಿಯಲ್ಲಿ 1-1 ರಿಂದ ಡ್ರಾ ಸಾಧಿಸಿತ್ತು. ಭಾರತ 2016ರಲ್ಲಿ ಎಂ.ಎಸ್. ಧೋನಿ ನಾಯಕತ್ವದಲ್ಲಿ ಆಸ್ಟ್ರೇಲಿಯ ವಿರುದ್ಧ ಅದರದೇ ನೆಲದಲ್ಲಿ 3-0 ಅಂತರದಿಂದ ಭರ್ಜರಿ ಜಯ ದಾಖಲಿಸಿತ್ತು. ಈ ಬಾರಿ ಕೊಹ್ಲಿ ಪಡೆ 2-0 ಅಂತರದಿಂದ ಜಯ ಸಾಧಿಸಲು ಎದುರು ನೋಡುತ್ತಿದೆ. 2018ರಲ್ಲಿ ಎಲ್ಲ ಮೂರು ಮಾದರಿ ಕ್ರಿಕೆಟ್‌ನಲ್ಲಿ ಆಡಿದ 38 ಪಂದ್ಯಗಳಲ್ಲಿ ಒಟ್ಟು 2,735 ರನ್ ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕೊಹ್ಲಿ ಇದೀಗ ಮೂರು ವಾರಗಳ ವಿಶ್ರಾಂತಿ ಪಡೆದು ಹೊಸ ವರ್ಷವನ್ನು ಆಸೀಸ್ ವಿರುದ್ಧ ಆಡುವ ಮೂಲಕ ಆರಂಭಿಸಲಿದ್ದಾರೆ. ‘ರನ್ ಯಂತ್ರ’ ಖ್ಯಾತಿಯ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 14 ಇನಿಂಗ್ಸ್‌ಗಳಲ್ಲಿ 133.55ರ ಸರಾಸರಿಯಲ್ಲಿ 1,202 ರನ್ ಗಳಿಸಿದ್ದರು. ಆರು ಶತಕ ಹಾಗೂ 3 ಅರ್ಧಶತಕಗಳನ್ನು ಗಳಿಸಿದ್ದಾರೆ. ಆಸೀಸ್ ವಿರುದ್ಧ 13 ಟಿ-20 ಪಂದ್ಯಗಳಲ್ಲಿ 61ರ ಸರಾಸರಿಯಲ್ಲಿ ಆಡಿರುವ ಕೊಹ್ಲಿ ಐದು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆ್ಯರೊನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯ ಮೂರು ತಿಂಗಳ ಹಿಂದೆ ಭಾರತ ವಿರುದ್ಧ ಆಡಿದ ಬಳಿಕ ಯಾವುದೇ ಟಿ-20 ಪಂದ್ಯವನ್ನು ಆಡಿಲ್ಲ. ಫೆ.17 ರಂದು ಕೊನೆಗೊಂಡ ಬಿಗ್ ಬ್ಯಾಶ್ ಲೀಗ್‌ನಲ್ಲಿ ನಾಯಕ ಫಿಂಚ್ ಸಹಿತ ಆರು ಆಟಗಾರರು ಆಡಿದ್ದಾರೆ.

   ಬಿಬಿಎಲ್ ಟಿ-20 ಲೀಗ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿರುವ ಡಿಆರ್ಕಿ ಶಾರ್ಟ್ 15 ಪಂದ್ಯಗಳಲ್ಲಿ 53.08ರ ಸರಾಸರಿಯಲ್ಲಿ 637 ರನ್ ಗಳಿಸಿದ್ದಾರೆ. ಕೇನ್ ರಿಚರ್ಡ್‌ಸನ್ ಟೂರ್ನಿಯಲ್ಲಿ 7.75 ಇಕಾನಮಿ ರೇಟ್‌ನಲ್ಲಿ 24 ವಿಕೆಟ್‌ಗಳನ್ನು ಪಡೆದಿದ್ದಾರೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ಕೆ.ಎಲ್.ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಎಂ.ಎಸ್.ಧೋನಿ(ವಿಕೆಟ್‌ಕೀಪರ್), ಕೃನಾಲ್ ಪಾಂಡ್ಯ, ವಿಜಯ ಶಂಕರ್, ಯಜುವೇಂದ್ರ ಚಹಾಲ್, ಜಸ್‌ಪ್ರಿತ್ ಬುಮ್ರಾ, ಉಮೇಶ್ ಯಾದವ್, ಸಿದ್ದಾರ್ಥ್ ಕೌಲ್, ಮಾಯಾಂಕ್ ಮರ್ಕಂಡೆ.

ಆಸ್ಟ್ರೇಲಿಯ: ಆ್ಯರೊನ್ ಫಿಂಚ್(ನಾಯಕ), ಡಿ’ಆರ್ಕಿ ಶಾರ್ಟ್, ಪ್ಯಾಟ್ ಕಮಿನ್ಸ್, ಅಲೆಕ್ಸ್ ಕಾರೆ, ಜೇಸನ್ ಬೆಹ್ರೆನ್‌ಡಾರ್ಫ್, ನಥಾನ್ ಕೌಲ್ಟರ್ ನೀಲ್, ಪೀಟರ್ ಹ್ಯಾಂಡ್ಸ್‌ಕಾಂಬ್, ಉಸ್ಮಾನ್ ಖ್ವಾಜಾ, ನಥಾನ್ ಲಿಯೊನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೆ.ರಿಚರ್ಡ್‌ಸನ್, ಕೇನ್ ರಿಚರ್ಡ್‌ಸನ್, ಮಾರ್ಕಸ್ ಸ್ಟೋನಿಸ್, ಅಶ್ಟೋನ್ ಟರ್ನರ್, ಆಡಮ್ ಝಾಂಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News