ಅಪ್ಪನ ಗಂಟು

Update: 2019-02-24 04:25 GMT

ಒಂದಾನೊಂದು ಕಾಲದಲ್ಲಿ ಹೊನ್ನೂರು ಎಂಬ ಹಳ್ಳಿಯಲ್ಲಿ ಸನಾವುಲ್ಲಾಖಾನ್ ಎಂಬ ಬಟ್ಟೆ ಹೊಲಿಯುವ ದರ್ಜಿ ಇದ್ದ. ಹೆಂಡತಿ ಫಾತಿಮಾ ಜೊತೆ ಪುಟ್ಟ ಸಂಸಾರ ಹೊಂದಿದ್ದ ಇವನಿಗೆ ಕಲೀಂ ಎಂಬ ಒಬ್ಬ ಮಗ ಹಾಗೂ ರೇಷ್ಮಾ ಎಂಬ ಒಬ್ಬ ಮಗಳಿದ್ದಳು. ಬಟ್ಟೆಗಳ ಮೇಲೆ ಅಲಂಕಾರಿಕವಾಗಿ ಬಿಡಿಸುವ ಕಸೂತಿ ಕೆಲಸವನ್ನೂ ಕಲಿತಿದ್ದ ಸನಾವುಲ್ಲಾಖಾನ್ ಬಟ್ಟೆ ಹೊಲಿಯುವ ದರ್ಜಿ ಕೆಲಸದ ದುಡಿಮೆಯಿಂದಲೇ ತನ್ನ ಚಿಕ್ಕ ಸಂಸಾರವನ್ನು ಚೊಕ್ಕವಾಗಿ ನಿರ್ವಹಣೆ ಮಾಡುತ್ತಿದ್ದ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆಂಬ ನೀತಿ ಇವನದಾಗಿತ್ತು. ಆದ್ದರಿಂದ ಕಷ್ಟವೆಂದು ಕುಗ್ಗದೆ ಸುಖವೆಂದು ಹಿಗ್ಗದೆ ನಿರ್ಲಿಪ್ತವಾಗಿ ಇತರರಿಗೆ ಮಾದರಿಯಾಗಿ ಇವನು ಜೀವನ ಮಾಡುತ್ತಿದ್ದ.

ಆ ಕಾಲದಲ್ಲೆಲ್ಲ ಹೀಗಿನ ಕಾಲದಂತೆ ಒಟ್ಟೆ ಹೊಲಿಯಲು ಹೊಲಿಗೆಯಂತ್ರಗಳಿರಲಿಲ್ಲ. ಆದ್ದರಿಂದ ಸನಾವುಲ್ಲಾಖಾನ್ ಬಟ್ಟೆಗಳನ್ನೆಲ್ಲಾ ಕೈಗಳಿಂದಲೇ ಹೊಲಿಯುತ್ತಿದ್ದ. ಇದರಲ್ಲಿ ಇವನು ಬಹಳ ಪರಿಣಿತಿಯನ್ನು ಹೊಂದಿದ್ದ. ದರ್ಜಿ ಕೆಲಸದಲ್ಲಿ ಇವನು ಎಷ್ಟೊಂದು ಹೆಸರು ವಾಸಿಯಾಗಿದ್ದನೆಂದರೆ ಸುತ್ತಮುತ್ತಲಿನ ಹತ್ತೂರ ಹಳ್ಳಿಗಳ ಜನರೆಲ್ಲಾ ಬಟ್ಟೆ ಹೊಲಿಸಲು ಇವನನ್ನೇ ಹುಡಿಕಿಕೊಂಡು ಬರುತ್ತಿದ್ದರು. ಹಬ್ಬ ಹರಿದಿನಗಳಲ್ಲಂತೂ ಬಟ್ಟೆಗಳ ರಾಶಿಯೇ ಇವನತ್ತ ಬಂದು ಬೀಳುತ್ತಿತ್ತು. ಅಂತಹ ಸಮಯದಲ್ಲೂ ಸ್ವಲ್ಪವೂ ಬೇಸರಿಸಿಕೊಳ್ಳದೆ ಎಲ್ಲರ ಬಟ್ಟೆಗಳನ್ನೂ ಕಟ್ಟಪಟ್ಟು ಸಕಾಲದಲ್ಲಿ ಸನಾವುಲ್ಲಾಖಾನ್ ಹೊಲಿದು ಕೊಡುತ್ತಿದ್ದ. ಮಗಳು ರೇಷ್ಮಾ, ಹೊಲಿದ ಬಟ್ಟೆಗಳ ಮೇಲೆ ಹೆಣೆಯುವ ಕಸೂತಿ ಕೆಲಸವನ್ನು ಅಪ್ಪನಿಂದ ಚೆನ್ನಾಗಿ ಕಲಿತುಕೊಂಡಿದ್ದರಿಂದ ಅಪ್ಪನಿಗೆ ತಕ್ಕ ಮಗಳಾಗಿ ಇವನ ದರ್ಜಿ ಕೆಲಸಕ್ಕೆ ಸಹಾಯ ಮಾಡುತ್ತಿದ್ದಳು. ಆದರೆ ಮಗ ಕಲೀಂ ಏನನ್ನೂ ಕಲಿಯದೆ ಉಂಡಾಡಿ ಗುಂಡನಂತಾಗಿ ಬಿಟ್ಟಿದ್ದ. ‘‘ನೋಡು ಮಗನೇ, ನಾನು ಮಾಡುತ್ತಿರುವ ದರ್ಜಿ ಕೆಲಸವನ್ನು ಚೆನ್ನಾಗಿ ಕಲಿತುಕೊ. ಬಟ್ಟೆ ಹೊಲಿಯುವ ಈ ವೃತ್ತಿ ನಿನಗೆ ಅನ್ನ ಕೊಡುತ್ತದೆ. ಬಾ ಇಲ್ಲಿ ನನ್ನ ಜೊತೆ ಕುಳಿತು ಕೆಲಸ ನೋಡಿಕೊ’’ ಎಂದು ಸನಾವುಲ್ಲಾಖಾನ್ ಬಲವಂತವಾಗಿ ಮಗ ಕಲೀಂ ನನ್ನ ಕರೆತಂದು ತನ್ನ ಬಳಿ ಕೂರಿಸಿಕೊಂಡು ಅವನಿಗೆ ದರ್ಜಿ ಕೆಲಸ ಕಲಿಸಲು ಶ್ರಮಪಡುತ್ತಿದ್ದ. ಆದರೆ ಮಗ ಅಪ್ಪನ ಮಾತನ್ನು ನಿರ್ಲಕ್ಷಿಸಿ ಸ್ವಲ್ಪ ಹೊತ್ತು ಇದ್ದು ಅರೆ ಬರೆ ಕಲಿತು ಕೊಂಡು ನನಗೆಲ್ಲಾ ಬರುತ್ತದೆಂದು ಹೇಳಿ ಎದ್ದು ಹೋಗುತ್ತಿದ್ದ.

ಕಾಲ ಉರುಳಿದಂತೆ ಸನಾವುಲ್ಲಾಖಾನ್‌ಗೂ ವಯಸ್ಸಾಗುತ್ತಾ ಬಂತು. ಮಗ ಕಲೀಂನನ್ನು ನಂಬಿಕೊಂಡರೆ ಕಷ್ಟವಾಗುತ್ತದೆಂದು ಮೊದಲು ಮಗಳು ರೇಷ್ಮಾಳಿಗೆ ಒಂದು ಒಳ್ಳೆ ವರ ಹುಡುಕಿ ಮದುವೆ ಮಾಡಿದ. ತನ್ನ ಕಾಲ ಮೇಲೆ ತಾನೇ ನಿಲ್ಲುವಂತಹ ಒಳ್ಳೆ ಕೆಲಸಗಾರ್ತಿ ಅವಳಾಗಿದ್ದರಿಂದ ಅವಳ ಮದುವೆ ಹೆಚ್ಚು ಖರ್ಚಿಲ್ಲದೆ ಸಲೀಸಾಗಿ ಆಯಿತು. ಆದರೆ ಮಗ ಕಲೀಂಗೂ ಒಂದು ಮದುವೆ ಮಾಡಿ ಬಿಟ್ಟರೆ ಅವನೂ ಸರಿಹೋಗಬಹುದೆಂದು ಇದಕ್ಕಾಗಿ ಸನಾವುಲ್ಲಾಖಾನ್ ಶತ ಪ್ರಯತ್ನ ಪಟ್ಟ. ಆದರೆ ಸರಿಯಾಗಿ ಒಂದು ಕೆಲಸವಿಲ್ಲದ ಅವನನ್ನು ಮದುವೆಯಾಗಲು ಯಾರೂ ಮುಂದೆ ಬರಲಿಲ್ಲ. ಈ ಕೊರಗಿನಲ್ಲೇ ಇವನ ಹೆಂಡತಿ ಫಾತಿಮಾ ತೀರಿಕೊಂಡಳು.

ಒಂದು ಕಡೆ ಹೆಂಡತಿಯನ್ನು ಕಳೆದು ಕೊಂಡ ಚಿಂತೆ, ಮತ್ತೊಂದು ಕಡೆ ಕೆಲಸ ಕಲಿಯದ ಮಗನ ಮುಂದಿನ ಭವಿಷ್ಯದ ಚಿಂತೆಯಲ್ಲೇ ಸನಾವುಲ್ಲಾಖಾನ್ ಕೊರಗುತ್ತಾ ಹಾಸಿಗೆ ಹಿಡಿದ. ಇವನಿಗೆ ಸಾವು ಸಮೀಪಿಸಿತು. ಮಗ ಕಲೀಂನನ್ನು ಬಳಿಗೆ ಕರೆದು ‘‘ಮಗನೆ, ನನ್ನ ವೃತ್ತಿಯನ್ನು ಮುಂದುವರಿಸು ನಿನಗೆ ಒಳ್ಳೆಯದಾಗುತ್ತದೆ. ಆದರೆ ಎಂದೂ ಕೂಡ ನೀನು ಏನನ್ನು ಮರೆತರೂ ಗಂಟನ್ನು ಮಾತ್ರ ಮರೆಯ ಬೇಡ’’ ಎಂದು ಹೇಳಿ ಪ್ರಾಣ ಬಿಟ್ಟ.

ಮುಂದೆ ತಾನು ಹೇಗೆ ಜೀವನ ಮಾಡುವುದೆಂದು ಯೋಚನೆಗೆ ಬಿದ್ದ ಕಲೀಂ ಅಪ್ಪ ಹೇಳಿದ ಗಂಟು, ಹಣ ಅಥವಾ ಚಿನ್ನ, ಬೆಳ್ಳಿ, ಒಡವೆಗಳ ಗಂಟಿರಬಹುದೆಂದು ಮನೆಯನ್ನೆಲ್ಲಾ ಹುಡುಕಾಡಿದ. ಆದರೆ ಇವನಿಗೆ ಯಾವ ಗಂಟೂ ಸಿಗಲಿಲ್ಲ. ವಿಧಿ ಇಲ್ಲದೆ ಜೀವನಕ್ಕಾಗಿ ಅಪ್ಪನ ಕೆಲಸವನ್ನು ಮುಂದುವರಿಸಲು ನಿರ್ಧರಿಸಿ ದರ್ಜಿ ಅಂಗಡಿಗೆ ಬಂದು ಬಟ್ಟೆ ಹೊಲಿಯಲು ಕುಳಿತ. ಸೂಜಿಗೆ ದಾರ ಪೋಣಿಸಿ ಬಟ್ಟೆ ಹೊಲಿಯಲು ಶುರು ಮಾಡಿದ. ಆದರೆ ಇವನು ಹೊಲಿಯುತ್ತಾ ಹೋದಂತೆಲ್ಲ ಹಿಂದಿನಿಂದ ಹೊಲಿದ ಹೊಲಿಗೆಗಳೆಲ್ಲಾ ಬಿಚ್ಚಿ ಕೊಳ್ಳತೊಡಗಿದವು. ಇವನು ಏನು ಮಾಡಿದರೂ ಹೊಲಿಗೆ ಸರಿ ಹೋಗುತ್ತಲೇ ಇಲ್ಲ. ‘‘ಏನಪ್ಪಾ ಮಾಡುವುದು ಈಗ’’ ಎಂದು ತಲೆ ಮೇಲೆ ಕೈಹೊತ್ತು ಕುಳಿತು ಬಿಟ್ಟ. ಆಗ ತಕ್ಷಣ ‘‘ಏನನ್ನು ಮರೆತರೂ ಗಂಟನ್ನು ಮಾತ್ರ ಮರೆಯ ಬೇಡ’’ ಎಂದು ಅಪ್ಪ ಹೇಳಿದ ಗಂಟು ಇವನಿಗೆ ನೆನಪಾಯಿತು. ಕೂಡಲೇ ಇವನು ದಾರದ ತುದಿಗೆ ಗಂಟು ಹಾಕುವುದನ್ನು ಮರೆತಿದ್ದನ್ನು ಸರಿಪಡಿಸಿಕೊಂಡ. ಹೊಲಿಗೆ ಸರಿ ಹೋಯಿತು.

ಅಪ್ಪ ಹೇಳಿದ ಅನುಭವದ ಗಂಟಿನ ಅರ್ಥವನ್ನು ಅರಿತು ಕೊಂಡ ಇವನು ಬದುಕಿನ ಕಗ್ಗಂಟನ್ನೂ ತಿಳಿದು ಕೊಂಡ. ಅಲ್ಲಿಂದ ಬಟ್ಟೆ ಹೊಲಿಯುವುದನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡ. ಕೆಲವೇ ದಿನಗಳಲ್ಲಿ ಅಪ್ಪನನ್ನು ಮೀರಿಸುವಂತಹ ದರ್ಜಿಯಾದ. ಸಂಪಾದನೆಯೂ ಜೋರಾಯಿತು. ಇವನಿಗೆ ಹೆಣ್ಣು ಕೊಡಲು ನಾ ಮುಂದು, ತಾ ಮುಂದು ಎಂದು ಬಹಳಷ್ಟು ಮಂದಿ ಬಂದರು. ಒಳ್ಳೆ ಹುಡುಗಿಯೊಬ್ಬಳನ್ನು ಮದುವೆಯಾಗಿ ಅಪ್ಪ ಸನಾವುಲ್ಲಾಖಾನ್‌ನಂತೆಯೇ ಮಗ ಕಲೀಂ ಕೂಡ ಚೆನ್ನಾಗಿ ಬಾಳಿ ಬದುಕಿದ. 

Writer - ಬನ್ನೂರು ಕೆ. ರಾಜು

contributor

Editor - ಬನ್ನೂರು ಕೆ. ರಾಜು

contributor

Similar News