ಕಾಶ್ಮೀರದ ದುರಂತಕ್ಕೆ ರೂಪಕ ದಾಲ್ ಸರೋವರ

Update: 2019-02-24 05:37 GMT
Editor : ಶಬರಿ

ಕಾಶ್ಮೀರವನ್ನು ಭಾರತದ ಸ್ವರ್ಗವೆಂದು ಕರೆಯುತ್ತಿದ್ದ ದಿನಗಳಿದ್ದವು. ಇದೇ ಸಂದರ್ಭದಲ್ಲಿ ಕಾಶ್ಮೀರವೆನ್ನುವ ಕಿರೀಟದ ರತ್ನವೆಂದು ಅಲ್ಲಿನ ದಾಲ್ ಸರೋವರವನ್ನು ಕರೆಯುವ ದಿನಗಳೂ ಇದ್ದವು. ಆದರೆ ಅವೆರಡೂ ಇತ್ತೀಚಿನ ದಿನಗಳಲ್ಲಿ ಅರ್ಥ ಕಳೆದುಕೊಳ್ಳುತ್ತಿವೆೆ. ಕಾಶ್ಮೀರಕ್ಕೆ ಏನು ಸಂಭವಿಸುತ್ತಿದೆಯೋ ಅದು ದಾಲ್ ಸರೋವರಕ್ಕೂ ಸಂಭವಿಸುತ್ತಿದೆ. ಹೌದು, ಮೊಗಲರ ಕಾಲದ ವೈಭವೋಪೇತ ದಾಲ್ ಸರೋವರ ಕಾಶ್ಮೀರದ ಜೊತೆ ಜೊತೆಗೇ ಸಾಯುತ್ತಿದೆ ಎನ್ನುವ ದುಃಖ ಅಲ್ಲಿಯ ಜನರದು. ದಾಲ್ ಸರೋವರವಿಲ್ಲದೆ ಕಾಶ್ಮೀರವಿಲ್ಲ. ಅದು ಕಾಶ್ಮೀರದ ಅಸ್ಮಿತೆ. ಸುಮಾರು 15 ಕಿ.ಮೀ.ನಷ್ಟು ವಿಸ್ತರಿಸಿಕೊಂಡಿರುವ ಈ ಸರೋವರದ ಜೊತೆ ಜೊತೆಗೆ ಮೊಗಲ್ ಉದ್ಯಾನವನಗಳಿವೆ. ಪ್ರವಾಸೋದ್ಯಮದಲ್ಲಿ ಇದರ ಪಾತ್ರ ದೊಡ್ಡದು. ವಿಹಾರದ ದೋಣಿಗಳು ಮಾತ್ರವಲ್ಲ, ಇದೇ ಸರೋವರ ದಲ್ಲಿ ತೇಲುವ ತೋಟಗಳನ್ನೂ ಸ್ಥಳೀಯರು ಮಾಡಿ ಬದುಕುತ್ತಿದ್ದರು. ಸಾಮಾಜಿಕವಾಗಿ, ಆರ್ಥಿಕವಾಗಿ ಕಾಶ್ಮೀರಕ್ಕೆ ಇದು ಅಪಾರ ನೆರವನ್ನು ನೀಡಿತ್ತು.ಆದರೆ ಇಂದು ದಾಲ್ ಸರೋವರ ಸ್ವಚ್ಛಗೊಳಿಸುವವರಿಲ್ಲದೆ ಒಳಗೊಳಗೆ ಕೊಳೆಯ ತೊಡಗಿದೆ. ಸರೋವರದ ಕುರಿತಂತೆ ಸರಕಾರದ ಗಾಢ ನಿರ್ಲಕ್ಷ ತೀವ್ರ ಟೀಕೆಗೆ ಕಾರಣವಾಗಿದೆ. 1978ರಲ್ಲಿ ನ್ಯೂಝಿಲ್ಯಾಂಡ್‌ನ ಎನೆಕ್ಸ್ ಸಂಸ್ಥೆಯನ್ನು ದಾಲ್ ಸರೋವರ ದ ಮಾಲಿನ್ಯದ ಅಧ್ಯಯನ ನಡೆಸಲು ರಾಜ್ಯ ಸರಕಾರ ಗೊತ್ತು ಮಾಡುವ ಮೂಲಕ ದಾಲ್ ಸಂರಕ್ಷಣೆಯ ಪ್ರಯತ್ನಗಳು ಆರಂಭವಾದವು. ಎನೆಕ್ಸ್‌ನವರದಿಯ ಆಧಾರದಲ್ಲಿ 70ರ ದಶಕದ ಕೊನೆಯಲ್ಲಿ ನಗರ ಪರಿಸರ ಇಂಜಿನಿಯರ್ ವಿಭಾಗ ಸಂರಕ್ಷಣಾ ಕಾರ್ಯವನ್ನು ಕೈಗೆತ್ತಿಕೊಂಡಿತು. 1997ರ ವರೆಗೆ ವಿವಿಧ ಸಂರಕ್ಷಣಾ ಯೋಜನೆಗಳಡಿ ಒಟ್ಟಾರೆ 71.60 ಕೋಟಿ ರೂ.ಯನ್ನು ದಾಲ್ ಸ್ವಚ್ಛತೆಗೆ ವೆಚ್ಚ ಮಾಡಲಾಯಿತು. ಆದರೆ ಪ್ರತಿಫಲ ಮಾತ್ರ ನಗಣ್ಯ. ಸರೋವರ ಸಂರಕ್ಷಣೆ ಯೋಜನೆಯ ಭಾಗವಾಗಿದ್ದ ನಿವೃತ್ತ ಹೈಡ್ರಾಲಿಕ್ ಇಂಜಿನಿಯರ್ ಎಜಾಝ ರಸೂಲ್ ಪ್ರಕಾರ, ದಾಲ್‌ನ್ನು ಅದರ ಹಿಂದಿನ ವೈಭವಕ್ಕೆ ತರಲು ರಾಜ್ಯದ ಬಳಿ ಸಂಪನ್ಮೂಲಗಳ ಕೊರತೆಯಿತ್ತು. ಹಾಗಾಗಿ ಸಂರಕ್ಷಣಾ ತಂಡ ಕೇಂದ್ರ ಸರಕಾರದ ಬಳಿ ಸಹಾಯವನ್ನು ಯಾಚಿಸಿತು ಮತ್ತು ರಾಷ್ಟ್ರೀಯ ಸರೋವರ ಸಂರಕ್ಷಣಾ ಯೋಜನೆ ಸೂಚಿಸಿದ್ದ ಮಾದರಿಯಂತೆ ಸಂರಕ್ಷಣಾ ಯೋಜನೆಯನ್ನು ರೂಪಿಸಲಾಯಿತು.

ಎನ್‌ಎಲ್‌ಸಿಪಿಯಡಿ ಸಂರಕ್ಷಣೆಗೆ ಆರಿಸಲ್ಪಟ್ಟ ಮೊದಲ ಸರೋವರ ದಾಲ್ ಆಗಿತ್ತು. ಇದಕ್ಕಾಗಿ 298 ಕೋಟಿ ರೂ. ಅನುದಾನವನ್ನೂ ಮಂಜೂರು ಮಾಡಲಾಯಿತು. ವಿದೇಶಗಳಿಂದಲೂ ಸಾಲ ಪಡೆಯಲಾಗಿದ್ದ ಕಾರಣ ದಾಲ್ ಸಂರಕ್ಷಣೆ ಮತ್ತು ಉಳಿಸುವಿಕೆ ಬಗ್ಗೆ ಸ್ಪಷ್ಟ ಉದ್ದೇಶವನ್ನು ಹೊಂದಿರುವ ಸ್ವಾಯತ್ತ ಸಮಿತಿಯನ್ನು ರಚಿಸುವ ಅಗತ್ಯ ತಲೆದೋರಿತು. 1997ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸ್ವಾಯತ್ತ ಸಂಸ್ಥೆಗೆ ಜಮ್ಮು ಮತ್ತು ಕಾಶ್ಮೀರ ಸರೋವರಗಳು ಮತ್ತು ಜಲಮೂಲಗಳ ಅಭಿವೃದ್ಧಿ ಮಂಡಳಿ ಎಂದು ಹೆಸರಿಡಲಾಯಿತು. ಆರಂಭದಿಂದಲೂ ಎರಡು ಸಮಸ್ಯೆಗಳು ಸಂರಕ್ಷಣಾ ಕಾರ್ಯಗಳಿಗೆ ತೊಡಕುಂಟು ಮಾಡುತ್ತಿದ್ದವು. ಒಂದು ಸರೋವರಕ್ಕೆ ಹರಿಯುತ್ತಿದ್ದ ಚರಂಡಿ ನೀರು, ಇನ್ನೊಂದು ತಲೆಮಾರುಗಳಿಂದ ದಾಲ್ ಸಮೀಪ ನೆಲೆಸಿರುವ ಜನರಿಗೆ ಪುನರ್ವಸತಿ ಕಲ್ಪಿಸುವಲ್ಲಿ ವೈಫಲ್ಯ. ಎನೆಕ್ಸ್ ವರದಿಯಲ್ಲೂ ದಾಲ್ ಸರೋವರದಲ್ಲಿರುವ ವಿಹಾರದೋಣಿ ಗಳಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದು ಸೂಚಿಸಲಾಗಿತ್ತು. ಆದರೆ ಸರೋವರ ದ ಸಮೀಪದ ಜನರ ನೈರ್ಮಲ್ಯದ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಅದನ್ನು ಸ್ಥಳೀಯಾಡಳಿತ ನೋಡಿಕೊಳ್ಳುತ್ತದೆ ಎಂದು ಕಂಪೆನಿ ಭಾವಿಸಿತ್ತು. ಆದರೆ ಇಡೀ ಭಾರತದಲ್ಲಿ ಶ್ರೀನಗರದಲ್ಲಿ ಮಾತ್ರ ಈಗಲೂ ಸರಿಯಾದ ಕೊಳಚೆನೀರು ಸಂಸ್ಕರಣಾ ಘಟಕವಿಲ್ಲ ಎನ್ನುವುದು ನಿಜ. 2017ರ ಅಧ್ಯಯನದ ಪ್ರಕಾರ, ಶ್ರೀನಗರದ ಪ್ರಮುಖ ಹದಿನೈದು ಚರಂಡಿ ಗಳ ಕೊಳಚೆನೀರು ಸರೋವರಕ್ಕೆ ಬಂದು ಸೇರುತ್ತದೆ. ಇದರ ಜೊತೆ 18.2 ಟನ್ ರಂಜಕ ಮತ್ತು 25 ಟನ್ ಸಾರಜನಕ ಸರೋವರದ ಮಡಿಲು ಸೇರುತ್ತಿದೆ. ಸರೋವರದಲ್ಲಿ ಯಾವುದೇ ರೀತಿಯ ನಿರ್ಮಾಣ ಕಾರ್ಯವನ್ನು ನಡೆಸುವುದರ ಮೇಲೆ 1986ರ ಜೂನ್‌ನಲ್ಲಿ ಸರಕಾರ ನಿಷೇಧ ಹೇರಿತು. ಈ ನಿಷೇಧವು ದಾಲ್‌ನತ್ತ ಸಾಗುವ ರಸ್ತೆಯ 200 ಮೀಟರ್ ವ್ಯಾಪ್ತಿಗೂ ಅನ್ವಯಿಸಬೇಕು ಎಂದು 2002ರಲ್ಲಿ ಉಚ್ಚ ನ್ಯಾಯಾಲಯ ತಿಳಿಸಿತ್ತು. ಇಂದು ದಾಲ್ ಸರೋವರ 58 ಸಣ್ಣ ಹಳ್ಳಿಗಳಲ್ಲಿ ಜೀವಿಸುವ 60,000 ಜನರಿಗೆ ನೆಲೆ ಒದಗಿಸಿದೆ. ಸಂರಕ್ಷಣೆಯ ಹೆಸರಲ್ಲಿ ಇಲ್ಲಿಂದ ನೂರಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಆದರೆ ಕಳಪೆ ಗೃಹ ಯೋಜನೆಗಳು ಮತ್ತು ಜೀವನೋಪಾಯಕ್ಕಾಗಿ ದಾಲ್ ಸರೋವರವನ್ನೇ ನಂಬಿದ್ದ ಜನರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವಲ್ಲಿ ವೈಫಲ್ಯ ಇತ್ಯಾದಿಗಳು ಪುನರ್ವಸತಿ ಯೋಜನೆಗಳ ಮೇಲೆ ಪರಿಣಾಮ ಬೀರಿದೆ. 2007ರಲ್ಲಿ ಶ್ರೀನಗರದ ಹೊರವಲಯದ ಬೆಮಿನಾದ ರಾಖಿ ಅರ್ಥ್ ಜೌಗುಭೂಮಿ ಕಾಲನಿಯಲ್ಲಿ ವಸತಿಗಳನ್ನು ಒದಗಿಸುವ ಯೋಜನೆಯನ್ನು ಸರೋವರ ಮತ್ತು ಜಲಮೂಲಗಳ ಅಭಿವೃದ್ಧಿ ಪ್ರಾಧಿಕಾರ ಘೋಷಿಸಿತು. 416.72 ಕೋಟಿ ವೆಚ್ಚದ ಈ ಯೋಜನೆ ಮೂರು ವರ್ಷಗಳಲ್ಲಿ ಸಂಪೂರ್ಣ ಗೊಳ್ಳಬೇಕಾಗಿತ್ತು. 2014ರಲ್ಲಿ ಶ್ರೀನಗರದಲ್ಲಿ ಸಂಭವಿಸಿದ ನೆರೆಯಲ್ಲಿ ಇಡೀ ಕಾಲನಿ ಮುಳುಗಿತು. 2018ರ ವೇಳೆಗೆ ಪ್ರಸ್ತಾವಿತ 10,500 ನಿವೇಶನಗಳ ಪೈಕಿ ಕೇವಲ 2,600 ನಿವೇಶನಗಳನ್ನು ಮಾತ್ರ ನೀಡಲು ಪ್ರಾಧಿಕಾರಕ್ಕೆ ಸಾಧ್ಯ ವಾಯಿತು. ‘‘ತಲೆಮಾರುಗಳಿಂದಲೂ ನಾವು ದಾಲ್ ಸರೋವರವನ್ನೇ ನೆಚ್ಚಿಕೊಂಡಿ ದ್ದೇವೆ. ಅದರಲ್ಲಿ ಬೆಳೆಯುವ ಕಳೆಗಳನ್ನು ನಾವೇ ಕೀಳುತ್ತಿದ್ದೆವು. ಅದೇ ಕಳೆಗಳು ನಾವು ಆಹಾರಬೆಳೆಯನ್ನು ಬೆಳೆಯಲೂ ಸಹಕಾರಿಯಾಗಿದ್ದವು. ನಾವು ನೀರಿನ ಮೇಲೆಯೇ ಬೆಳೆ ಬೆಳೆಯುತ್ತಿದ್ದೆವು. ನನಗೆ ಬೇರೆ ಉದ್ಯೋಗ ತಿಳಿದಿಲ್ಲ. ಈಗ ಇಲ್ಲಿ ನಾನು ಏನು ಮಾಡುವುದೆಂದೇ ತೋಚುತ್ತಿಲ್ಲ’’ ಎಂದು ಹೇಳುತ್ತಾರೆ ಹೊಸ ಕಾಲನಿಗೆ ಸ್ಥಳಾಂತರಗೊಂಡಿರುವ ಎರಡು ಮಕ್ಕಳ ತಂದೆ. ಸ್ಥಳಾಂತರಗೊಂಡಿರುವ ಹೆಚ್ಚಿನ ಕುಟುಂಬಗಳು ತಮಗೆ ಸಿಕ್ಕ ಮನೆಗಳನ್ನು, ನಿವೇಶನಗಳನ್ನು ಮಾರಿ ಅಥವಾ ತೊರೆದು ದಾಲ್‌ಗೆ ಮರಳುತ್ತಿದ್ದಾರೆ. 65ರ ಹರೆಯದ ಗುಲಾಮ ಹುಸೈನ್ ಪ್ರಕಾರ, ದಾಲ್ ಎನ್ನುವುದು ಪ್ರಾಧಿಕಾರದ ಪಾಲಿಗೆ ಚಿನ್ನದ ಗಣಿ ಮತ್ತು ರಾಜಕಾರಣಿಗಳ ಪಾಲಿಗೆ ಮತ ಬ್ಯಾಂಕ್. ಶ್ರೀನಗರದ ಜನರು ಮತ ಹಾಕುವುದಿಲ್ಲ ಎಂದು ರಾಜಕಾರಣಿಗಳಿಗೆ ತಿಳಿದಿದೆ. ಹಾಗಾಗಿ ಚುನಾವಣೆಯ ಸಮಯದಲ್ಲಿ ಅವರು ಇಲ್ಲಿಗೆ ಭೇಟಿ ನೀಡಿ ರಸ್ತೆ, ಚರಂಡಿ, ಆಸ್ಪತ್ರೆಗಳನ್ನು ನಿರ್ಮಿಸುವ ಭರವಸೆ ನೀಡುತ್ತಾರೆ.

ಚುನಾವಣೆ ಮುಗಿದ ನಂತರ ಎಲ್ಲವೂ ಮೊದಲಿನಂತೆಯೇ ಇರುತ್ತದೆ. ದಾಲ್‌ನ ವಿಸ್ತಾರ ವನ್ನು ಪರಿಗಣಿಸಿದಾಗ ಶ್ರೀನಗರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರ ವ್ಯಾಪ್ತಿಗೆ ಅದರ ಸಂರಕ್ಷಣೆ ಮತ್ತು ಪುನರ್ವಸತಿ ಕಾರ್ಯ ಬರುತ್ತದೆ. ದಾಲ್ ಸಮೀಪ ಜೀವಿಸುವ ಬಹುತೇಕ ಜನರು ಶಿಯಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು ಇವರ ಸ್ಥಳಾಂತರವನ್ನು ಜನಾಂಗೀಯ ವಾದದ ಆಯಾಮದಿಂದ ನೋಡುವ ಅಪಾಯವೂ ಇದೆ. ಹಾಗಾಗಿ ಇಲ್ಲಿ ಪುನರ್ವಸತಿ ಕಾರ್ಯವೂ ಅಷ್ಟು ಸುಲಭವಿಲ್ಲ ಎಂದು ಹೇಳುತ್ತಾರೆ ಪ್ರಾಧಿಕಾರದ ಅಧಿಕಾರಿಗಳು. ಭ್ರಷ್ಟಾಚಾರವೂ ಪುನರ್ವಸತಿ ಕಾರ್ಯದ ಹಿನ್ನಡೆಗೆ ಪ್ರಮುಖ ಕಾರಣ ವಾಗಿದೆ. ಪ್ರಾಧಿಕಾರದ ಕೆಲವು ಅಧಿಕಾರಿಗಳು ಬ್ರೋಕರ್‌ಗಳ ಜೊತೆಕೈಜೋಡಿಸಿ ಲಂಚ ನೀಡುವವರಿಗೆ ವಸತಿ ನಿವೇಶನ/ಮನೆ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕ ವೆಂಬಂತೆ ಪ್ರಾಧಿಕಾರದ ಕೆಲವು ಅಧಿಕಾರಿಗಳು ಭ್ರಷ್ಟಾಚಾರ ಆರೋಪವನ್ನೂ ಎದುರಿಸುತ್ತಿದ್ದಾರೆ. 2002ರಿಂದ ದಾಲ್ ಸಂರಕ್ಷಣೆಗೆ ಒದಗಿಸಲಾಗಿದ್ದ 759 ಕೋಟಿ ರೂ. ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ದೊಡ್ಡ ಆರೋಪ ಪ್ರಾಧಿಕಾರದ ಮೇಲಿದೆ. ಸರೋವರ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ ದಾಲ್‌ನ ಗಾತ್ರ ಕುರಿತ ಅತ್ಯಂತ ಹಳೆಯ ವಿಶ್ವಾಸಾರ್ಹ ಅಂದಾಜು 19ನೇ ಶತಮಾನದ ಬ್ರಿಟಿಶ್ ಕಮಿಷನರ್ ವಾಲ್ಟರ್ ಲಾರೆನ್ಸ್ ಬರೆದ ವ್ಯಾಲಿ ಆಫ್ ಕಾಶ್ಮೀರ್‌ನಲ್ಲಿ ಸಿಗುತ್ತದೆ.ಈ ಪುಸ್ತಕದಲ್ಲಿ ಲಾರೆನ್ಸ್ ದಾಲ್ ಸರೋವರದ ವಿಸ್ತೀರ್ಣ 25.86 ಚದರ ಕಿ.ಮೀ. ಎಂದು ಬರೆದಿದ್ದಾರೆ. ಅದರಲ್ಲಿ 18.21 ಚದರ ಕಿ.ಮೀ. ನೀರಿನಿಂದ ಕೂಡಿದ್ದರೆ ಉಳಿದ 7.65 ಚದರ ಕಿ.ಮೀ ಭೂಭಾಗ, ಜನಜೀವನ ಮತ್ತು ಸಸ್ಯಸಂಕುಲವನ್ನು ಹೊಂದಿದೆ. ಸರೋವರದ ಗಾತ್ರವನ್ನು ಅಳೆಯಲು ಉಚ್ಚ ನ್ಯಾಯಾಲಯ 2009 ಮತ್ತು 2012ರಲ್ಲಿ ನೇಮಿಸಿದ್ದ ಸರಕಾರಿ ಸಂಸ್ಥೆಗಳು ಲಾರೆನ್ಸ್‌ರ ಹೇಳಿಕೆಯನ್ನು ಬೆಂಬಲಿಸಿವೆ. ದಾಲ್ ಸಂಕುಚಿತಗೊಳ್ಳುತ್ತಿದೆ ಎಂಬುದು ಕೇವಲ ಕಲ್ಪನೆ. ಸರೋವರ 50ರಿಂದ 75 ಚದರ ಕಿ.ಮೀ. ವಿಸ್ತೀರ್ಣವಿತ್ತು ಎಂದು ಸಾಬೀತುಪಡಿಸುವ ಸಾಕ್ಷಾಧಾರವನ್ನು ಒದಗಿಸುವಂತೆ ನಾವು ಸಾರ್ವಜನಿಕರಿಗೆ ಸೂಚನೆಯನ್ನು ನೀಡಿದ್ದೆವು. ಆದರೆ ಇಲ್ಲಿಯವರೆಗೆ ಅಂಥ ಯಾವ ಸಾಕ್ಷಿಯನ್ನೂ ನಮಗೆ ಯಾರೂ ತಂದು ಕೊಟ್ಟಿಲ್ಲ ಎಂದು ಹೇಳುತ್ತಾರೆ ಮಲಿಕ್ ತಾರಿಕ್. ದಾಲ್ ಸರೋವರವನ್ನು ಅಳೆಯುವ ಯಾವುದೇ ಪ್ರಯತ್ನ ವಿಫಲವಾಗು ತ್ತದೆ ಎಂದು ರಸೂಲ್ ತಿಳಿಸುತ್ತಾರೆ. ಎನೆಕ್ಸ್ ವರದಿಯ ಪ್ರಕಾರ, ಸರಕಾರ ದಾಲ್‌ನ ಉತ್ತರ ಮತ್ತು ಪಶ್ಚಿಮ ದಂಡೆಗಳನ್ನು ಗುರುತಿಸಬೇಕು. ಸದ್ಯ ಉತ್ತರದ ದಂಡೆಯನ್ನು ಗುರುತಿಸಲಾಗಿದ್ದರೂ ಪಶ್ಚಿಮ ದಂಡೆಯ ಬಗ್ಗೆ ಈಗಲೂ ಸ್ಪಷ್ಟತೆಯಿಲ್ಲ. ಒಂದು ವೇಳೆ ದಂಡೆಯನ್ನು ಗುರುತಿಸಲಾಗಿದ್ದರೆ ಸರೋವರದ ಅತಿಕ್ರಮಣವನ್ನು ತಡೆಯಬಹುದಿತ್ತು ಮತ್ತು ಜನರಿಗೂ ನಿರ್ದಿಷ್ಟ ರೇಖೆಯಿಂದ ಆಚೆ ಹೋಗಬಾರದು ಎಂಬ ಕಲ್ಪನೆ ಬರುತ್ತಿತ್ತು ಎಂದು ರಸೂಲ್ ವಾದಿಸುತ್ತಾರೆ.

Writer - ಶಬರಿ

contributor

Editor - ಶಬರಿ

contributor

Similar News