ಬೇಬಿ: ಒಂದು ಅವಲೋಕನ

Update: 2019-02-24 05:46 GMT

ಘಾಶೀ ರಾಂ ಕೊತ್ವಾಲ್, ಸಖಾರಾಮ್ ಬೈಂಡರ್, ಶಾಂತತಾ ಕೋರ್ಟ್ ಚಾಲೂ ಅಹೆ ಮುಂತಾದ ಮಹತ್ವದ ನಾಟಕಗಳನ್ನು ಮರಾಠಿ ರಂಗಭೂಮಿಗೆ ಕೊಟ್ಟ ವಿಜಯ್ ತೆಂಡುಲ್ಕರ್ ಅವರ ಕುರಿತು ಗಿರೀಶ್ ಕಾರ್ನಾಡ್‌ಮಾತನಾಡುತ್ತ, ‘ನನಗಿಂತ ಮೊದಲೇ ವಿಜಯ್ ತೆಂಡಲ್ಕೂರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಬೇಕಿತ್ತು’ ಎಂದು ನುಡಿದದ್ದು, ವಿಜಯ್ ತೆಂಡಲ್ಕೂರ್ ಅವರ ನಾಟಕಗಳ ಮಹತ್ವವನ್ನು ಮತ್ತು ಭಾರತೀಯ ರಂಗ ಭೂಮಿಗೆ ಅವರ ಕೊಡುಗೆಯನ್ನು ಸಾರುತ್ತದೆ. ಇಂತಹ ವಿಜಯ್ ತೆಂಡುಲ್ಕರ್ ಅವರ ನಾಟಕವೊಂದನ್ನು ಕನ್ನಡಕ್ಕೆ ತರುವುದರ ಮೂಲಕ ಜಯಲಕ್ಷ್ಮೀ ಪಾಟೀಲ್ ಕನ್ನಡ ರಂಗಭೂಮಿಯ ಕಣಜವನ್ನು ವಿಸ್ತರಿಸಿದ್ದಾರೆ. ಮುಂಬೈಯಲ್ಲಿ ಕನ್ನಡ ರಂಗಭೂಮಿಗೆ ಒಡ್ಡಿಕೊಂಡ ಜಯಲಕ್ಷ್ಮೀ ಯವರು ಮರಾಠಿ ರಂಗಭೂಮಿಗೂ ತಮ್ಮನ್ನು ತೆರದುಕೊಂಡರು. ಅವರೊಮ್ಮೆ ತೆಂಡುಲ್ಕರ್ ಅವರ ಬೇಬಿ ನಾಟಕವನ್ನು ನೋಡಿದಾಗ ಅದು ಅವರ ಮೇಲೆ ಗಾಢವಾಗಿ ಬೀರಿದ ಪರಿಣಾಮದ ಫಲವೇ ಈ ನಾಟಕ. ಇದನ್ನು ಅನುವಾದಿಸಬೇಕೆಂದು ಅವರಿಗೆ ಪ್ರೇರಣೆ ಇತ್ತವರು ಮುಂಬಯಿಯ ಇನ್ನೊಬ್ಬ ರಂಗಕಲಾವಿದ ಅವಿನಾಶ್ ಕಾಮತ್. ಸ್ತ್ರೀವಾದಿಯಾದ ತಾನು ನಾಟಕದ ಕೊನೆಯನ್ನು ಬದಲಾಯಿಸಬಯಸಿದರೂ ಲೇಖಕರ ಸ್ವಾಯತ್ತೆಯನ್ನು ಗೌರವಿಸುವ ವಸ್ತುನಿಷ್ಠ ದೃಷ್ಟಿಕೋನದ ಸಲುವಾಗಿ ನಾನು ಬದಲಾಯಿಸಲಿಲ್ಲ ಎಂದು ಹೇಳಿಕೊಂಡಿದ್ದಾರೆ. ನಾಟಕದಲ್ಲಿ ಹೆಸರುಗಳನ್ನು ಬಿಟ್ಟರೆ (ಕರ್ವೆ ಎನ್ನುವ ಪಾತ್ರವನ್ನು ಬಿಟ್ಟು) ಮೂಲದ್ರವ್ಯವನ್ನು ಅದರಂತೆಯೇ ಉಳಿಸಿಕೊಂಡಿರುವುದು ಕನ್ನಡ ರಂಗ ಪರಂಪರೆಗೆ ಸಹಜವಾಗಿಯೆ ಇದೆ. ವಿಷಮ ಸನ್ನಿವೇಶವೊಂದರಲ್ಲಿ ಸಿಕ್ಕಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣೊಬ್ಬಳ ಬದುಕಿನ ಸುತ್ತ ಈ ನಾಟಕವನ್ನು ನೇಯಲಾಗಿದೆ. ತನಗೆ ಕೇಡು ಬಗೆದವನೊಂದಿಗೇ ಅನಿವಾರ್ಯವಾಗಿ ರಾಜಿ ಮಾಡಿಕೊಂಡು ಬದುಕಬೇಕಾದಂತಹ ಸ್ಥಿತಿಯಲ್ಲಿಯೇ ಹತಾಶೆಗೊಳಗಾಗದೇ ಸಾಹಿತ್ಯ ಕೃತಿಗಳ ವಾಚನದ ಮೂಲಕ ಸಹಾನುಭೂತಿಯನ್ನು ತೋರುವ ಸಹೋದ್ಯೋಗಿಯ ನೆರವಿನಿಂದ ತನ್ನ ಅಂತರಂಗವನ್ನು ಕಾಪಿಟ್ಟುಕೊಳ್ಳುವ ಅವಳು ಜೀವನೋತ್ಸಾಹದ ಪ್ರತೀಕವಾಗಿದ್ದಾಳೆ. ನಾಯಕಿ ಬೇಬಿ ಅಣ್ಣನಾದ ರಾಘವ ಹುಚಾಸ್ಪತ್ರೆಯಿಂದ ಬಿಡುಗಡೆಗೊಂಡು ಅಸಹಾಯಕತೆಯಿಂದ ತನ್ನ ತಂಗಿಯನ್ನು ಹುಡುಕಿಕೊಂಡು ಬರುವುದರೊಂದಿಗೆ ನಾಟಕ ಆರಂಭವಾಗುತ್ತದೆ. ಅವನಿಗೆ ಅವಳು ಆಸರೆಯಾಗಿ ನಿಲ್ಲುತ್ತಾಳೆ. ಹಸಿದು ಬಂದ ಅವನಿಗೆ ಊಟ ಬಡಿಸುವುದರೊಂದಿಗೆ ಅವನಿಗೆ ಅವಳು ಆಶ್ರಯದಾತಳಾಗುತ್ತಾಳೆ. ನಾಟಕದ ಕೊನೆಯಲ್ಲಿ ಅವನೇ ಅವಳಿಗೆ ನೀರನ್ನು ಹನಿಸುವುದರ ಮೂಲಕ ಆಸರೆಯಾಗುವುದು ಅವರಿಬ್ಬರ ನಡುವಣ ಬಾಂಧವ್ಯವನ್ನು ಬೆಸೆಯುವ ಸಾಧನವಾಗಿದೆ.

ಇಲ್ಲಿ ಬರುವ ಶಿವಪ್ಪ ಕೆಡುಕಿನ ಪ್ರತೀಕವಾಗಿದ್ದಾನೆ. ಅವನು ಬೇಬಿಯ ಮೇಲೆ ಅತ್ಯಾಚಾರವೆಸಗುವುದಲ್ಲದೇ ರಕ್ಷಿಸಬಂದ ಅವಳಣ್ಣನನ್ನೂ ಹುಚ್ಚಾಸ್ಪತ್ರೆಗೆ ಸೇರಿಸುವುದಕ್ಕೂ ಹಿಂಜರಿಯುವುದಿಲ್ಲ. ಅಲ್ಲದೇ ಅವಳನ್ನು ಇಟ್ಟುಕೊಳ್ಳುವುದರ ಮೂಲಕ ಅವಳ ಮೇಲೆ ನಿರಂತರವಾಗಿ ಕ್ರೌರ್ಯವನ್ನು ಎಸಗುವುದಲ್ಲದೇ ದುಡಿದು ತಂದ ಅವಳ ಹಣವನ್ನು ತನ್ನ ಕಾಯಿಲೆ ಹಿಡಿದ ಹೆಂಡತಿಗಾಗಿ ಬಳಸಿಕೊಳ್ಳುವುದು ಅವಳನ್ನು ಆರ್ಥಿಕವಾಗಿಯೂ ಶೋಷಿಸುವುದಕ್ಕೆ ಸಾಕ್ಷಿಯಾಗಿದೆ. ಮರಳಿ ಬಂದ ಅವಳ ಅಣ್ಣನ ಮೇಲೆ ಎಸಗುವ ದೌರ್ಜನ್ಯ ಕ್ರೌರ್ಯದ ಪರಮಾವಧಿಯಾಗಿದೆ. ಅವಳು ತನ್ನ ಇನಿಯನನ್ನು ಮನೆಗೆ ಕರೆದಾಗ ಅದನ್ನು ಕಂಡು ಕಿಡಿ ಕಿಡಿಯಾಗುವ ಅವನು ಅವಳ ಹೊಟ್ಟೆಯ ಮೇಲೆ ಒದೆಯುವುದರ ಮೂಲಕ ಹಿಂಸಾಚಾರವನ್ನು ಎಸಗುತ್ತಾನೆ. ಸತ್ತ ತನ್ನ ಹೆಂಡತಿಯನ್ನು ಸತಿ ಎಂದು ಹೊಗಳುವ ಅವನು ಇವಳನ್ನು ಮೋಸಗಾತಿ ಎಂದು ದೂಷಿಸುವುದು ಒಂದು ವಿಪರ್ಯಾಸವಾಗಿದೆ. ಬೇಬಿ; ಈ ನಾಟಕದ ಕೇಂದ್ರ ಪಾತ್ರ. ಅವಳು ತನ್ನನ್ನು ತಾನುವಿಷಮ ಸನ್ನಿವೇಶದಲ್ಲಿ ಸಂಭಾಳಿಸಿಕೊಳ್ಳುವುದಲ್ಲದೇ ತನ್ನ ಆಸರೆಯನ್ನು ಬಯಸಿಬಂದ ಅಣ್ಣನನ್ನು ಪೋಷಿಸುವುದು ಅವಳ ತಾಯ್ತನದ ದ್ಯೋತಕವಾಗಿದೆ. ತನ್ನ ಸಹೋದ್ಯೋಗಿಯ ಸಹಾನುಭೂತಿಯಿಂದ ಅವನೆಡೆಗೆ ಅವಳು ಅಕರ್ಷಿತಳಾಗಿ ಹೊಸ ಜೀವನದ ಕನಸು ಕಾಣುವುದು ಅವಳ ಅದಮ್ಯ ಚೇತನಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಅವಳು ಸ್ಫೂರ್ತಿಯನ್ನು ಪಡೆಯುವುದು ಸಂವೇದನಾಶೀಲ ಸಾಹಿತಿ ಜಯಂತರ ಕತೆಗಳಿಂದ. ಬೇಬಿ ಎನ್ನುವ ಶೀರ್ಷಿಕೆಯ ಬದಲಿಗೆ ಮಗು ಎನ್ನುವ ಕನ್ನಡದ ಹೆಸರನ್ನು ಬಳಸಿದ್ದರೆ ಅದು ಅವಳ ಮುಗ್ಧತೆಯನ್ನು ಅಸಹಾಯಕತೆಯನ್ನು ಹಾಗೂಪುಟಿಯುವ ಜೀವನೋತ್ಸಾಹವನ್ನು ಏಕಕಾಲಕ್ಕೆ ಧ್ವನಿಸಲು ಸಾಧ್ಯವಾಗುತ್ತಿತ್ತು. ಕ್ರೌರ್ಯ ಮತ್ತು ಹಿಂಸೆಗಳ ಎದುರು ತಾಯ್ತನ ಮತ್ತು ಹೆಣ್ತನಗಳನ್ನು ಎತ್ತಿಹಿಡಿಯುವುದು ಈ ನಾಟಕದ ವೈಶಿಷ್ಟ್ಯವಾಗಿದೆ. ಇದನ್ನು ರಂಗದ ಮೇಲೆ ತರುವುದರ ಮೂಲಕ ಕನ್ನಡ ರಂಗಭೂಮಿಗೆ ಹೊಸ ಸೇರ್ಪಡೆಯಾಗುವಂತೆ ಮಾಡಲಿ ಎಂದು ಹಾರೈಸುತ್ತೇನೆ.

Writer - ಕೆ.ರಘುನಾಥ್, ಮುಂಬೈ

contributor

Editor - ಕೆ.ರಘುನಾಥ್, ಮುಂಬೈ

contributor

Similar News