ಮಾನನಷ್ಟ ಮೊಕದ್ದಮೆ: ಪತ್ರಕರ್ತೆ ಪ್ರಿಯಾ ರಮಣಿಗೆ ಜಾಮೀನು

Update: 2019-02-25 09:00 GMT

ಹೊಸದಿಲ್ಲಿ, ಫೆ.25: ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಪತ್ರಕರ್ತೆ ಪ್ರಿಯಾ ರಮಣಿಗೆ ದಿಲ್ಲಿ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದ್ದು, 10,000 ರೂ. ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ಆದೇಶಿಸಿದೆ.

ಸುಮಾರು 23 ವರ್ಷಗಳ ಹಿಂದೆ ಜೈಪುರ ಹೊಟೇಲ್‌ನಲ್ಲಿ ಅಕ್ಬರ್ ತನ್ನೊಂದಿಗೆ ಲೈಂಗಿಕ ದುರ್ವರ್ತನೆ ತೋರಿದ್ದರು ಎಂಬ ಪ್ರಿಯಾ ರಮಣಿ ಆರೋಪಕ್ಕೆ ಪ್ರತಿಯಾಗಿ ಅಕ್ಬರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ತಪ್ಪು, ಹುರುಳಿಲ್ಲದ ಆರೋಪ ಮಾಡಿ ಅಕ್ಬರ್‌ರ ಘನತೆಗೆ ಕುಂದು ತರಲಾಗಿದೆ ಎಂದು ಮಾಜಿ ಕೇಂದ್ರ ಸಚಿವರ ಕಾನೂನು ತಂಡ ನ್ಯಾಯಾಲಯಕ್ಕೆ ತಿಳಿಸಿದೆ.

ಅಕ್ಬರ್ ಸಲ್ಲಿಸಿದ ಮನವಿಯ ಮೇರೆಗೆ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಜ.29 ರಂದು ನಿರ್ದೇಶನ ನೀಡಿದ್ದರು. ಅಮೆರಿಕದಲ್ಲಿ ನೆಲೆಸಿರುವ ಪ್ರಿಯಾ ರಮಣಿ ಸೋಮವಾರ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರಾದರು. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಎ.10ಕ್ಕೆ ಮುಂದೂಡಿದೆ.

‘‘ತನ್ನ ವಿರುದ್ಧ ಮಾನನಷ್ಟ ಮೊಕದ್ದಮೆಯ ಮುಂದಿನ ವಿಚಾರಣೆ ಎ.10ಕ್ಕೆ ನಿಗದಿಯಾಗಿದೆ. ಆ ಬಳಿಕ ನಾನು ನನ್ನ ಕತೆಯನ್ನು ಹೇಳುವೆ. ಸತ್ಯವೇ ನನ್ನ ರಕ್ಷಣೆಯಾಗಿದೆ’’ ಎಂದು ರಮಣಿ ಪ್ರತಿಕ್ರಿಯೆ ನೀಡಿದ್ದಾರೆ.

ಅಕ್ಬರ್ ಪತ್ರಿಕೆಯೊಂದರ ಸಂಪಾದಕರಾಗಿದ್ದ ವೇಳೆ ತಮ್ಮಿಂದಿಗೆ ಕೆಟ್ಟದಾಗಿ ವರ್ತಿಸಿದ್ದರು ಎಂದು ರಮಣಿ ಸಹಿತ ಹಲವು ಮಹಿಳೆಯರು ಆರೋಪಿಸಿದ್ದರು. ಸತತ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕ ಪ್ರವಾಸದಿಂದ ವಾಪಸಾದ ಅಕ್ಬರ್ 2018ರ ಅಕ್ಟೋಬರ್ 17ರಂದು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News