×
Ad

ಬಂಡೀಪುರ ಅರಣ್ಯದ ಬೆಂಕಿ ನಂದಿಸಲು ಅಗತ್ಯ ಕ್ರಮ: ಸಿಎಂ ಕುಮಾರಸ್ವಾಮಿ

Update: 2019-02-25 21:35 IST

ಬೆಂಗಳೂರು, ಫೆ.25: ರಕ್ಷಣಾ ಇಲಾಖೆಯ ನಾಲ್ಕು ಹೆಲಿಕ್ಯಾಪ್ಟರ್‌ಗಳನ್ನು ಬಳಸಿಕೊಂಡು ಬಂಡೀಪುರ ಅರಣ್ಯಕ್ಕೆ ತಗುಲಿರುವ ಬೆಂಕಿ ನಂದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.

ಸೋಮವಾರ ನಗರದ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ‘ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶ’ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡೀಪುರ ಅರಣ್ಯ ಪ್ರದೇಶದ ಸುಮಾರು 8 ರಿಂದ 10 ಸಾವಿರ ಎಕರೆ ಬೆಂಕಿಗೆ ಆಹುತಿಯಾಗಿದೆ ಎಂದರು.

ಸಂಪೂರ್ಣವಾಗಿ ಬೆಂಕಿಯನ್ನು ನಂದಿಸುವ ಸಲುವಾಗಿ ಕೇಂದ್ರದ ಜೊತೆ ಮಾತುಕತೆ ನಡೆಸಲಾಗಿದೆ. ರಕ್ಷಣಾ ಇಲಾಖೆಯ ನಾಲ್ಕು ಹೆಲಿಕ್ಯಾಪ್ಟರ್‌ಗಳನ್ನು ಕಳುಹಿಸಿಕೊಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಹೆಲಿಕ್ಯಾಪ್ಟರ್‌ಗಳ ಮೂಲಕ ‘ನುಗು ಅಣೆಕಟ್ಟು’ ನೀರನ್ನು ತಂದು ಬಂಡೀಪುರ ಅರಣ್ಯಕ್ಕೆ ತಗುಲಿರುವ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಅರಣ್ಯ ಇಲಾಖೆಯು ಅಗ್ನಿ ಅವಘಡವವನ್ನು ತಡೆಯಲು ಸಾಕಷ್ಟು ಮುಂಜಾಗ್ರತೆ ಕೈಗೊಳ್ಳಲಾಗಿತ್ತು. ಗಾಳಿ ಮತ್ತು ಬಿಸಿಲಿನ ತಾಪದಿಂದ ದುರಂತ ಸಂಭವಿಸಿದೆ. ಕಾಡನ್ನು ಹೊರತುಪಡಿಸಿದರೆ, ಸುತ್ತಮುತ್ತಲಿನ ಗ್ರಾಮಗಳಿಗೆ ಹಾಗೂ ಜನರಿಗೆ ಯಾವುದೇ ಹಾನಿಯಾಗಿಲ್ಲ. ಅರಣ್ಯ ಸಚಿವರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ರವಿ ಪೂಜಾರಿ ಕರೆತರುವ ಬಗ್ಗೆ ಕ್ರಮ

ಭೂಗತ ಪಾತಕಿ ರವಿ ಪೂಜಾರಿಯನ್ನು ಸೆನಗಲ್‌ನಿಂದ ಕರೆತರಲು ಕಾನೂನು ತೊಡಕುಗಳಿವೆ. ಇದನ್ನು ನಿವಾರಿಸಿ ರಾಜ್ಯಕ್ಕೆ ಕರೆತರುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News