ಮಂಗಳೂರು ಕೋಮುಸೂಕ್ಷ್ಮ ಪ್ರದೇಶ ಎನ್ನುವುದು ಸುಳ್ಳು: ನಿರ್ಗಮಿತ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್

Update: 2019-02-26 09:34 GMT

ಮಂಗಳೂರು, ಫೆ.26: ಲೋಕಸಭಾ ಚುನಾವಣೆಗೂ ಮೊದಲು ರಾಜ್ಯಾದ್ಯಂತ 30 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಫೆಬ್ರವರಿ 21ರಂದು ಆದೇಶ ಹೊರಡಿಸಿದೆ. ಈ ಮೂವತ್ತು ಅಧಿಕಾರಿಗಳಲ್ಲಿ ಮಂಗಳೂರಿನ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಕೂಡಾ ಇದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರಾಗಿ ಕೆಲ ವರ್ಷ ಸೇವೆ ಸಲ್ಲಿಸಿರುವ ಟಿ.ಆರ್. ಸುರೇಶ್ ಓರ್ವ ದಕ್ಷ, ಶಿಸ್ತಿನ ಮತ್ತು ಬದ್ಧತೆಯುಳ್ಳ ಅಧಿಕಾರಿ ಎಂದು ಹೆಸರು ಗಳಿಸಿದ್ದಾರೆ. ಅವರ ನಿರ್ಗಮನದ ಹಿನ್ನೆಲೆಯಲ್ಲಿ ಫೆಬ್ರವರಿ 24ರಂದು ‘ವಾರ್ತಾ ಭಾರತಿ’ ಪತ್ರಿಕೆಯ ಉಪಸಂಪಾದಕ ಇಸ್ಮಾಯಿಲ್ ಝವೊರೆಝ್ ಟಿ.ಆರ್. ಸುರೇಶ್ ರ ಸಂದರ್ಶನ ನಡೆಸಿದರು. ಆ ಸಂದರ್ಶನದ ಆಯ್ದ ಭಾಗ ಇಲ್ಲಿ ನೀಡಲಾಗಿದೆ;

ಕಾನೂನು ಪಾಲಕರಾಗಿ ಮಂಗಳೂರು ನಗರದಲ್ಲಿ ನಿಮಗೆ ಎದುರಾದ ಸವಾಲುಗಳೇನು?

►ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುವುದೇ ಸವಾಲಿನ ವಿಷಯ. ಇಲ್ಲಿ ವಿವಿಧ ಸಮುದಾಯಗಳ, ಮೂಲದ ಮತ್ತು ರಾಜ್ಯಗಳ ಜನರು ವಾಸಿಸುತ್ತಾರೆ. ಇದು ಒಳ್ಳೆಯದು ಮತ್ತು ದೇಶದ ವೈವಿಧ್ಯತೆಯನ್ನು ಬಿಂಬಿಸುತ್ತದೆ. ಆದರೆ ಕೆಲವೊಂದು ಸೂಕ್ಷ್ಮ ವಿಷಯಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವುದು ಸವಾಲಾಗಿಬಿಡುತ್ತದೆ. ಆದರೆ ಇಲ್ಲಿ ಒಂದು ವಿಷಯ ನಾನು ಸ್ಪಷ್ಟಪಡಿಸಲೇಬೇಕು, ಮಂಗಳೂರು ಕೋಮುಸೂಕ್ಷ್ಮ ಪ್ರದೇಶ ಎನ್ನುವುದು ಕಟ್ಟುಕತೆ, ಇದರಲ್ಲಿ ಯಾವುದೇ ಸತ್ಯಾಂಶವೂ ಇಲ್ಲ.

ಮಂಗಳೂರು ಕೋಮುಸೂಕ್ಷ್ಮವಲ್ಲದಿದ್ದರೆ ನಿಮ್ಮ ಅನಿಸಿಕೆ ಪ್ರಕಾರ ಅದಕ್ಕೆ ಆ ಕುಖ್ಯಾತಿ ಬಂದಿರುವುದಾದರೂ ಯಾಕೆ?

►ಇದಕ್ಕೆ ನಾನು ಸಾಮಾಜಿಕ ಮಾಧ್ಯಮಗಳನ್ನು ದೂರುತ್ತೇನೆ. ಇಲ್ಲಿ ಸಮಸ್ಯೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ನೀಡಲಾಗುತ್ತದೆ ಮತ್ತು ನಂತರ ಅದಕ್ಕೆ ಕೋಮುಬಣ್ಣ ಬಳಿಯಲಾಗುತ್ತದೆ. ಸಾಮಾಜಿಕ ಮಾಧ್ಯಮ ಇಲ್ಲಿ ಅಪಾಯಕಾರಿ ಪಾತ್ರವನ್ನು ನಿಭಾಯಿಸುತ್ತಿದ್ದು ಶಾಂತಿ ಕದಡುವಿಕೆಯಿಂದ ವೈಯಕ್ತಿಕ ಮತ್ತು ಸಾಂಸ್ಥಿಕ ಲಾಭವನ್ನು ಹೊಂದಿರುವ ಜನರು ಇದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ಅದರ ಹೊರತಾಗಿ ಮಂಗಳೂರು ನಗರ ಇತರ ನಗರಗಳಿಗಿಂತ ಭಿನ್ನವಾಗೇನೂ ಇಲ್ಲ.

ಇಲ್ಲಿ ನೀವು ಎದುರಿಸಿದ ಅತ್ಯಂತ ಸವಾಲಿನ ಪ್ರಕರಣಗಳು ಯಾವುವು?

►2018ರ ದೀಪಕ್ ರಾವ್ ಮತ್ತು ಅಬ್ದುಲ್ ಬಶೀರ್ ಹತ್ಯೆ ಪ್ರಕರಣ, 2017ರ ಅಶ್ರಫ್ ಹತ್ಯೆ ಪ್ರಕರಣ ಮತ್ತು ಶರತ್ ಮಡಿವಾಳ ಹತ್ಯೆ ಪ್ರಕರಣ. ಈ ಎಲ್ಲ ಪ್ರಕರಣಗಳು ಸವಾಲಿನಿಂದ ಕೂಡಿದ್ದವು ಮತ್ತು ಸೂಕ್ಷ್ಮವಾಗಿದ್ದವು. ಈ ಪ್ರಕರಣಗಳಲ್ಲಿ ನಾವು ಅತ್ಯಂತ ಎಚ್ಚರಿಕೆಯಿಂದ ಎಲ್ಲವನ್ನೂ ಸಮತೋಲನ ಮಾಡಿಕೊಂಡು ತನಿಖೆ ನಡೆಸಬೇಕಿತ್ತು.

ಇಬ್ಬರು ಕ್ರಿಯಾಶೀಲ ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ ಅವರೊಂದಿಗೆ ನೀವು ಡ್ರಗ್ಸ್ ಮಾಫಿಯಾವನ್ನು ನಿಗ್ರಹಿಸಿರುವ ನಿಮ್ಮ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. ಈ ಬಗ್ಗೆ ತಿಳಿಸಿ

►ಡ್ರಗ್ಸ್ ಮಾಫಿಯಾವನ್ನು ನಿಗ್ರಹಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಸಾಕಷ್ಟು ಶ್ರಮಪಡಲಾಗಿತ್ತು. ಇಲ್ಲಿ ಮುಖ್ಯ ವಿಷಯವೆಂದರೆ, ನಾನು ಕೇವಲ ಡ್ರಗ್ಸ್ ಮಾರಾಟಗಾರರು ಮತ್ತು ಕಿಂಗ್‌ ಪಿನ್ ಗಳನ್ನು ಬಂಧಿಸಿದ್ದು ಮಾತ್ರವಲ್ಲ, ಅದನ್ನು ಸೇವಿಸುವವರನ್ನು ಗುರುತಿಸಿ ಅವರ ಪುನರ್ವಸತಿಗೂ ವ್ಯವಸ್ಥೆ ಮಾಡಿದ್ದೆವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವು.

ಈಗ ನಿಮ್ಮ ಮೂವರ ತಂಡ ಪ್ರತ್ಯೇಕಗೊಂಡಿದ್ದು, ಹೊಸ ತಂಡ ಯಾವ ರೀತಿ ಕಾರ್ಯಾಚರಿಸಬೇಕೆಂದು ಬಯಸುತ್ತೀರಿ?

►ನೂತನ ಪೊಲೀಸ್ ಆಯುಕ್ತ ಸಂದೀಪ್ ಪಾಟಿಲ್ ಸಮರ್ಥ ಅಧಿಕಾರಿಯಾಗಿದ್ದಾರೆ. ಅವರ ತಂಡವೂ ಯಶಸ್ವಿಯಾಗುತ್ತದೆ ಎನ್ನುವ ಬಗ್ಗೆ ನನಗೆ ಭರವಸೆಯಿದೆ. ನಮ್ಮ ಕಾರ್ಯಗಳನ್ನು ಅವರು ಮುಂದುವರಿಸಿಕೊಂಡು ಹೋಗುವ ಭರವಸೆಯನ್ನೂ ನೀಡಿದ್ದಾರೆ.

ಮಂಗಳೂರಿನ ಜನರಿಗೆ ನಿಮ್ಮ ಸಂದೇಶವೇನು?

►ನಾನು ಹೇಳುವುದಿಷ್ಟೇ ಮಂಗಳೂರು ಕೋಮುಸೂಕ್ಷ್ಮವಲ್ಲ. ಅದು ಬರೀ ಸುಳ್ಳು. ಈ ಹಣೆಪಟ್ಟಿಯನ್ನು ಜನರು ತೆಗೆಯಲು ಬಯಸುವುದಾದರೆ ಸಾಮಾಜಿಕ ಮಾಧ್ಯಮವನ್ನು ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ಬಳಸಬೇಕು. ಮಂಗಳೂರು ಅತ್ಯಂತ ಸುರಕ್ಷಿತ ನಗರಗಳಲ್ಲಿ ಒಂದು ಎನ್ನುವುದು ಅನೇಕ ಸಮೀಕ್ಷೆಗಳಿಂದ ತಿಳಿದುಬಂದಿದೆ.

ಪೊಲೀಸ್ ಇಲಾಖೆಯಲ್ಲಿ ಇಷ್ಟು ವರ್ಷಗಳನ್ನು ಕಳೆದಿದ್ದು ಹಲವು ರ್ಯಾಂಕ್ ‌ಗಳಿಗೆ ಏರಿರುವ ನೀವು ನಿವೃತ್ತಿಯ ಮೊದಲು ಯಾವ ನಿರೀಕ್ಷೆಯನ್ನು ಹೊಂದಿದ್ದೀರಿ?

►ಐಪಿಎಸ್ ಸೇರಿ ನಾನು 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಪ್ರಾಮಾಣಿಕವಾಗಿ ಹೇಳುವುದಾದರೆ ನಾನು ಮಾಡಿರುವ ಕೆಲಸ ಮತ್ತು ಅದಕ್ಕೆ ಸಿಕ್ಕಿರುವ ಪ್ರತಿಫಲದ ಬಗ್ಗೆ ನನಗೆ ತೃಪ್ತಿಯಿದೆ. ನಿವೃತ್ತಿಗೆ ಇನ್ನೆರಡು ವರ್ಷಗಳಷ್ಟೇ ಬಾಕಿಯಿದ್ದು, ವೃತ್ತಿಜೀವನ ಸಮಾಧಾನ ನೀಡಿದೆ. ರಾಷ್ಟ್ರಪತಿಗಳ ಎರಡು ಪದಕಗಳು ನನಗೆ ಲಭಿಸಿದ್ದು ಕಳಂಕರಹಿತ ವೃತ್ತಿ ಜೀವನದಿಂದ ನಾನು ಸಂತುಷ್ಟನಾಗಿದ್ದೇನೆ.

Writer - ಸಂದರ್ಶನ: ಇಸ್ಮಾಯೀಲ್

contributor

Editor - ಸಂದರ್ಶನ: ಇಸ್ಮಾಯೀಲ್

contributor

Similar News