ವಿದ್ಯುತ್ ಚಾಲಿತ ವಾಹನ ಬಳಕೆಯಲ್ಲಿ ಇತರೆ ರಾಜ್ಯಗಳಿಗೆ ಕರ್ನಾಟಕ ಮಾದರಿ: ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು, ಫೆ.26: ವಿದ್ಯುತ್ ಚಾಲಿತ ಮತ್ತು ಸುಸ್ಥಿರ ಸಂಚಾರ, ಚಾರ್ಜಿಂಗ್ ಮೂಲಸೌಕರ್ಯ ಹಾಗೂ ಬ್ಯಾಟರಿ ತಂತ್ರಜ್ಞಾನದಲ್ಲಿ ಕರ್ನಾಟಕ ಕ್ರಾಂತಿಕಾರಕ ಬದಲಾವಣೆಗಳನ್ನು ತಂದು ಇತರೆ ರಾಜ್ಯಗಳಿಗೆ ಮಾದರಿಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಮಂಗಳವಾರ ನಗರದಲ್ಲಿ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್(ಸಿಐಐ) ಆಯೋಜಿಸಿದ್ದ ಭವಿಷ್ಯದ ಸಂಚಾರ ಪ್ರದರ್ಶನ(ಎಫ್‌ಎಂಎಸ್) ಸಮ್ಮೇಳನ-2019ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಹಂತಹಂತವಾಗಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕಾರ್ಯತಂತ್ರವನ್ನು ಹಾಕಿಕೊಂಡಿದೆ. ಇದು ಸ್ಥಳೀಯ ಉತ್ಪಾದನೆಯ ನೆಲೆ ಬಲಗೊಳ್ಳಲು ಮತ್ತು ಎಲೆಕ್ಟ್ರಿಕ್ ವಾಹನಗಳ ಸ್ಥಳೀಯ ಪೂರೈಕೆ ಸರಣಿಯನ್ನು ಬಲಗೊಳಿಸಲು ಪೂರಕವಾಗಿದ್ದು, ಎಲೆಕ್ಟ್ರಿಕ್ ಚಾಲಿತ ತಂತ್ರಜ್ಞಾನಗಳಿಗೆ ಇದು ಒತ್ತು ನೀಡುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಘೋಷಿಸಿದ ಮೊಟ್ಟಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯಗೊಳಿಸಲು ಮತ್ತು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಥಳವನ್ನು ವೈವಿಧ್ಯಮಯಗೊಳಿಸಲು ಮತ್ತು ಆಕರ್ಷಕ ಲೋಗೊ ಮೂಲಕ ಅದನ್ನು ಜನಪ್ರಿಯಗೊಳಿಸಲು ಕ್ರಿಯಾಯೋಜನೆ ಸಿದ್ಧವಾಗುತ್ತಿದೆ. ಇದು ಎಲೆಕ್ಟ್ರಿಕ್ ವಾಹನಗಳಿಗೆ ನಗರದಲ್ಲಿ ಆದ್ಯತೆಯ ಪಾರ್ಕಿಂಗ್ ಸ್ಥಳಾವಕಾಶ ಒದಗಿಸುವ ಮತ್ತು ನಗರಾದ್ಯಂತ ಇದರ ಇರುವಿಕೆಯನ್ನು ಆಕರ್ಷಕವಾಗಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಬೆಂಗಳೂರು ನಗರದಾದ್ಯಂತ 108 ಸ್ಥಳಗಳಲ್ಲಿ (ಸರಕಾರಿ ಜಾಗದಲ್ಲಿ) ಇ-ಚಾರ್ಜಿಂಗ್ ಸ್ಟೇಷನ್‌ಗಳನ್ನು ಆರಂಭಿಸುವ ಸಲುವಾಗಿ ಗುರುತಿಸಲಾಗಿದ್ದು, ಬೆಸ್ಕಾಂ ಇದಕ್ಕೆ ಬಿಡ್‌ಗಳನ್ನು ಆಹ್ವಾನಿಸಲಿದೆ. ರಾಜ್ಯ ಸರಕಾರದ ಸಿಬ್ಬಂದಿ ಬಳಸುವ ಶೇ.50ರಷ್ಟು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳಾಗಿ 2019ರ ಅಂತ್ಯದ ಒಳಗಾಗಿ ಪರಿವರ್ತಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕರ್ನಾಟಕದ ನಗರಾಭಿವೃದ್ಧಿ ಇಲಾಖೆಯು, ಕಟ್ಟಡ ಬೈಲಾಗಳಿಗೆ ತಿದ್ದುಪಡಿ ತಂದು, ಶೇ.10-20ರಷ್ಟು ಪಾರ್ಕಿಂಗ್ ಸ್ಥಳವನ್ನು ಎಲೆಕ್ಟ್ರಿಕ್ ವಾಹನಗಳಿಗೆ ಮೀಸಲಿಡುವುದನ್ನು ಕಡ್ಡಾಯಪಡಿಸಲಿದೆ. ಎಲೆಕ್ಟ್ರಿಕ್ ವಾಹನಗಳ ಮಾಲಕರಿಗಾಗಿ ಹೊಸ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಲ್ಲಿ ಎಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯದ ಲಭ್ಯತೆಯನ್ನು ಗುರುತಿಸಲು ಮತ್ತು ಸ್ಥಳ ಗುರುತಿಸಲು ನೆರವು ನೀಡಲಾಗುತ್ತದೆ ಎಂದು ಅವರು ಹೇಳಿದರು.