×
Ad

ನಿಗದಿತ ಗುರಿ ಸಾಧಿಸಿ, ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಿ: ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಎಚ್ಚರಿಕೆ

Update: 2019-02-26 20:03 IST

ಬೆಂಗಳೂರು, ಫೆ.26: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಲಾಖೆ ನಿಗದಿಪಡಿಸಿರುವ ಗುರಿ ಮುಟ್ಟುವಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಸೂಚಿಸಿದರು.

ಮಂಗಳವಾರ ನಗರದ ಬಹುಮಹಡಿ ಕಟ್ಟಡ(ಎಂ.ಎಸ್.ಬಿಲ್ಡಿಂಗ್)ದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಎಲ್ಲ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಅವರು ಪ್ರಗತಿ ಪರಿಶೀಲನೆ ನಡೆಸಿದರು.

ನಿಗದಿತ ಗುರಿ ಮುಟ್ಟುವಲ್ಲಿ ಹಿನ್ನಡೆಯಾದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಯ ಮೇಲೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಲ್ಲಿ ತಕ್ಕ ಫಲ ಅನುಭವಿಸಬೇಕಾಗುತ್ತದೆ ಎಂದು ಕೃಷ್ಣಭೈರೇಗೌಡ ಎಚ್ಚರಿಕೆ ನೀಡಿದರು.

ಬಹಳ ಮುಖ್ಯವಾಗಿ ರಾಜ್ಯ ಬರದ ಪರಿಸ್ಥಿತಿ ಎದುರಿಸುತ್ತಿರುವಾಗ ಕುಡಿಯುವ ನೀರು ಮತ್ತು ಮೇವು ಪೂರೈಕೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಹೆಚ್ಚು ಹೆಚ್ಚಾಗಿ ಚೆಕ್ ಡ್ಯಾಮ್‌ಗಳ ನಿರ್ಮಾಣ ಮತ್ತು ಜಾನುವಾರು ಕೊಟ್ಟಿಗೆ ಹಾಗೂ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಅವರು ಸೂಚಿಸಿದರು.

ಗ್ರಾಮೀಣ ರಸ್ತೆ: ಗ್ರಾಮೀಣ ರಸ್ತೆಗಳ ನಿರ್ಮಾಣದ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಉದ್ದೇಶಕ್ಕಾಗಿ ಈಗಾಗಲೇ 860 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ. ಇದರ ಬಳಕೆಯಲ್ಲಿ ಹಿನ್ನಡೆಯಾದರೆ ಅದಕ್ಕೆ ನೇರವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನೆ ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಘನತ್ಯಾಜ್ಯ: ರಾಜ್ಯದ 6022 ಗ್ರಾಮ ಪಂಚಾಯತ್ ಗಳಲ್ಲಿ 1200 ಗ್ರಾಮ ಪಂಚಾಯತ್ ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೊಳ್ಳಲಾಗುತ್ತಿದೆ. ಕಸ ಸಂಗ್ರಹಣೆ ಮತ್ತು ವಿಂಗಡಣೆಗಾಗಿ ಇಲ್ಲಿ ಸಂಸ್ಥೆ ಮತ್ತು ಗ್ರಾಮಸ್ಥರ ಜಾಗೃತಿ ಬಹಳ ಮುಖ್ಯವಾದದ್ದು. ಇದನ್ನು ದೊಡ್ಡ ಆಂದೋಲನದ ರೀತಿಯಲ್ಲಿ ಮಾಡಬೇಕಾಗಿದೆ ಎಂದು ತಿಳಿಸಿದರು.

ನರೇಗಾ: ರಾಜ್ಯದ ಪ್ರಸ್ತುತ ಬರ ಪರಿಸ್ಥಿತಿಯಲ್ಲಿ ನರೇಗಾ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ನಮ್ಮ ಇಲಾಖೆ ಈ ವರ್ಷ 12 ಕೋಟಿ ಮಾನವ ದಿನಗಳಿಗೆ ಕೇಂದ್ರದಿಂದ ಅನುಮತಿ ಪಡೆದಿದೆ. ಇದನ್ನು ಸಮರ್ಥವಾಗಿ ಬಳಸಿದರೆ ಗುಳೆ ಹೋಗುವ ಜನರ ಪ್ರವೃತ್ತಿಯನ್ನು ತಡೆಯಬಹುದು. ಹಾಗೂ ಬರಪೀಡಿತ ಪ್ರದೇಶಗಳ ಜನರ ಅನುಕೂಲಕ್ಕೆ ಬಳಸಬಹುದು. ಈ ದಿಸೆಯಲ್ಲಿ ಸಿಇಓಗಳು ಗಮನಹರಿಸಿ ಎಂದು ಕೃಷ್ಣಭೈರೇಗೌಡ ಸೂಚಿಸಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಸಂಪನ್ಮೂಲ ಸೃಜಿಸುವ ದಿಸೆಯಲ್ಲಿ ಕರ ವಸೂಲಿಗಾಗಿ, ಬಿಲ್ ಕಲೆಕ್ಟರುಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಇದರಲ್ಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಹೊಣೆ ಮಾಡಿ, ಕಡಿವೆು ಕರ ಸಂಗ್ರಹ ಮಾಡಿದರೆ ಅದಕ್ಕೆ ಅವರನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಬೇಕು ಎಂದು ಅವರು ಹೇಳಿದರು.

ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಖ್, ಕಾರ್ಯದರ್ಶಿ ಎಂ.ಕೆ.ಅಯ್ಯಪ್ಪ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ಕೆ.ವಿಶಾಲ್, ನರೇಗಾ ಆಯುಕ್ತೆ ಕನಗವಲ್ಲಿ, ನಿರ್ದೇಶಕರಾದ ಭುವನಹಳ್ಳಿ ನಾಗರಾಜ್ ಹಾಗೂ ಕೆಂಪೇಗೌಡ ಸೇರಿದಂತೆ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News