×
Ad

ಲೋಕಸಭಾ ಚುನಾವಣೆ: ಜಾತ್ಯತೀತ ಶಕ್ತಿಗಳ ಬಲವರ್ಧನೆಗೆ ಬೆಂಬಲ ನೀಡಲು ಸೈಯದ್ ತನ್ವೀರ್ ಹಾಶ್ಮಿ ಕರೆ

Update: 2019-02-26 20:16 IST

ಬೆಂಗಳೂರು, ಫೆ.26: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳು ತಲೆ ಎತ್ತಲು ಅವಕಾಶ ನೀಡದಂತೆ, ಜಾತ್ಯತೀತ ಶಕ್ತಿಗಳ ಬಲವರ್ಧನೆಗೆ ಪ್ರತಿಯೊಬ್ಬರೂ ಬೆಂಬಲವಾಗಿ ನಿಲ್ಲಬೇಕು ಎಂದು ಜಮಾತ್-ಎ-ಅಹ್ಲೆ-ಸುನ್ನತ್ ಕರ್ನಾಟಕದ ಅಧ್ಯಕ್ಷ ಮೌಲಾನ ಸೈಯದ್ ತನ್ವೀರ್ ಪೀರಾಂ ಹಾಶ್ಮಿ ಕರೆ ನೀಡಿದರು.

ಮಂಗಳವಾರ ನಗರದಲ್ಲಿರುವ ಜಮಾತ್-ಎ-ಅಹ್ಲೆ-ಸುನ್ನತ್ ಸಂಘಟನೆಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಈಗಿನ ಪರಿಸ್ಥಿತಿ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿದೆ. ಮುಂದಿನ ಚುನಾವಣೆಯು ನಮ್ಮ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ ಎಂದರು.

ಚುನಾವಣೆಯಲ್ಲಿ ರಾಜ್ಯದ ಮುಸ್ಲಿಮರು ಶೇ.100ರಷ್ಟು ಮತದಾನ ಮಾಡಬೇಕು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ, ಇಲ್ಲವೇ ಎಂಬುದನ್ನು ನೋಡಬೇಕು. 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರೆ, ಈ ಕೂಡಲೆ ಹೆಸರು ಸೇರಿಸಬೇಕು ಎಂದು ಅವರು ಮನವಿ ಮಾಡಿದರು.

ಉಲಮಾಗಳ ಮುಂದಾಳತ್ವದಲ್ಲಿ ಪ್ರತಿಯೊಂದು ಗ್ರಾಮದಲ್ಲಿಯೂ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುವುದು. ಜಾತ್ಯತೀತ ಪಕ್ಷಗಳು ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಮರಿಗೆ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು ಅವರು ಒತ್ತಾಯಿಸಿದರು.

ನಮ್ಮ ಸಂಘಟನೆಯು ಕಳೆದ ಸಾಲಿನ ನವೆಂಬರ್ 1ರಂದು ಘೋಷಣೆಯಾಗಿದ್ದು, ಇಂಡಿಯನ್ ಟ್ರಸ್ಟ್ ಕಾಯ್ದೆಯಡಿಯಲ್ಲಿ ನೋಂದಣಿಯಾಗಿದೆ. ಈಗಾಗಲೇ ರಾಜ್ಯದ 17 ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಮಿತಿಗಳನ್ನು ರಚಿಸಲಾಗುವುದು ಎಂದು ಸೈಯದ್ ತನ್ವೀರ್ ಪೀರಾಂ ಹಾಶ್ಮಿ ಹೇಳಿದರು.

ಇಮಾಮ್ ಹಾಗೂ ಮುಅದ್ದೀನ್‌ಗಳಿಗೆ ನೀಡುತ್ತಿರುವ ವೇತನ ಅತ್ಯಂತ ಕನಿಷ್ಠ ಪ್ರಮಾಣದಲ್ಲಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕ ಪಡೆಯುವ ವೇತನಕ್ಕಿಂತ ಇವರ ವೇತನ ಕಡಿಮೆಯಿದೆ. ಆದುದರಿಂದ, ಇಮಾಮ್ ಹಾಗೂ ಮುಅದ್ದೀನ್‌ಗಳಿಗೆ ಕ್ರಮವಾಗಿ 10 ಸಾವಿರ ರೂ. ಹಾಗೂ 8 ಸಾವಿರ ರೂ.ಗಳ ವೇತನ ನೀಡುವಂತೆ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಅವರು ಮನವಿ ಮಾಡಿದರು.

ತೀವ್ರ ಬಡತನದಲ್ಲಿರುವ ಇಮಾಮ್ ಹಾಗೂ ಮುಅದ್ದೀನ್‌ಗಳಿಗಾಗಿ ವಸತಿ ಯೋಜನೆ ಹಾಗೂ ಆರೋಗ್ಯ ಯೋಜನೆ ಜಾರಿಗೆ ತರುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೇಲೆ ಒತ್ತಡ ಹೇರಲಾಗುವುದು. ಅಲ್ಲದೆ, ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಕೊಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದು ಸೈಯದ್ ತನ್ವೀರ್ ಪೀರಾಂ ಹಾಶ್ಮಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಮಾತ್-ಎ-ಅಹ್ಲೆ-ಸುನ್ನತ್ ಕರ್ನಾಟಕದ ಉಪಾಧ್ಯಕ್ಷ ಮೌಲಾನ ಖಾಝಿ ಶಂಶುದ್ದೀನ್, ಪದಾಧಿಕಾರಿಗಳಾದ ಮೌಲಾನ ನಿಯಾಝ್ ಆಲಮ್, ಮೌಲಾನ ಮುಹಮ್ಮದ್ ಅಲಿ ಖಾಝಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News