ಫೆ.28: ಸಮ್ಮರ್ ಗೇಮ್ಸ್‌ಗೆ ಆಯ್ಕೆಯಾದ ವಿಕಲಚೇತನ ಕ್ರೀಡಾಪಟುಗಳಿಗೆ ಬೀಳ್ಕೊಡುಗೆ
ಬೆಂಗಳೂರು, ಫೆ.26: ಅಬುದಾಬಿಯಲ್ಲಿ ಮಾ.14ರಿಂದ ಎಂಟು ದಿನಗಳ ವರೆಗೆ ನಡೆಯಲಿರುವ ಸ್ಪೆಷಲ್ ಒಲಿಂಪಿಕ್ಸ್ ಭಾರತ ವರ್ಲ್ಡ್ ಸಮ್ಮರ್ ಗೇಮ್ಸ್‌ಗೆ ಆಯ್ಕೆಯಾಗಿರುವ ವಿಕಲಚೇತನ ಕ್ರೀಡಾಪಟುಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಫೆ.28ರಂದು ರಾಜಾಜಿನಗರದ ರಾಮ ಮಂದಿರ ಮೈದಾನದಲ್ಲಿ ಒಲಿಂಪಿಕ್ಸ್ ಭಾರತ್ ಕರ್ನಾಟಕ ಸಂಸ್ಥೆ ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕಿ ಟಿ.ಎ. ಕುಮುದಾ, ವಿಕಲ ಚೇತನರಲ್ಲಿ ಅಗಾಧವಾದ ಪ್ರತಿಭೆ ಇದ್ದರೂ, ಅವರಿಗೆ ಪ್ರೋತ್ಸಾಹ ನೀಡುವಲ್ಲಿ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಅವರಲ್ಲಿ ಇರುವ ಕ್ರೀಡಾ ಸ್ಫೂರ್ತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಳೆದ ಎರಡು ದಶಕಗಳಿಂದ ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ಸಂಸ್ಥೆ ಒತ್ತಾಸೆಯಾಗಿ ನಿಂತಿದೆ. ಈ ಸಂಬಂಧ ಕರ್ನಾಟಕದಿಂದ 16 ಕ್ರೀಡಾಪಟುಗಳು ಮತ್ತು 9 ತರಬೇತುದಾರರು ಅಬುದಾಬಿಯಲ್ಲಿ ನಡೆಯಲಿರುವ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಜಗತ್ತಿನಾದ್ಯಂತ 192 ದೇಶಗಳ 7ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಭಾರತದಿಂದ 380 ವಿಶೇಷ ಚೇತನ ಮಕ್ಕಳು ಆಯ್ಕೆಯಾಗಿದ್ದು, ಈ ಪೈಕಿ 16 ಕ್ರೀಡಾಪಟುಗಳು ಕರ್ನಾಟಕದವರಾಗಿದ್ದಾರೆ. ಅಲ್ಲದೆ, ಫೆ.28 ರಂದು ಆಯೋಜಿಸಿರುವ ಬೀಳ್ಕೊಡುಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ್ರೀಡಾ ಸಚಿವ ರಹಿಂ ಖಾನ್, ನಟ ಪ್ರಕಾಶ್‌ರಾಜ್, ಶಾಸಕ ಸುರೇಶ್ ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.