ಭೂ ಸ್ವಾಧೀನ ತಿದ್ದುಪಡಿ ಮಸೂದೆ ವಾಪಸ್ಸಿಗೆ ರೈತ ಹಿತರಕ್ಷಣಾ ವೇದಿಕೆ ಆಗ್ರಹ
ಬೆಂಗಳೂರು, ಫೆ.26: ಕರ್ನಾಟಕ ಭೂಸ್ವಾಧೀನ ತಿದ್ದುಪಡಿ ಮಸೂದೆ-2019ನ್ನು ವಾಪಸ್ಸು ಪಡೆಯಬೇಕು, ರೈತರಿಗೆ ಯುಪಿಎ ಸರಕಾರದ ಮಸೂದೆಯ ಪ್ರಕಾರ ಪರಿಹಾರ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಜಾಗೃತಿ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಪಿ.ಎನ್.ಪ್ರಸನ್ನ ಕುಮಾರ್, ಭೂಸ್ವಾಧೀನ ತಿದ್ದುಪಡಿ ಮಸೂದೆ 2019 ಕ್ಕೆ ರಾಜ್ಯ ಸರಕಾರ ಅನುಮೋದನೆ ಪಡೆದಿದ್ದು, ರಾಜ್ಯಪಾಲರ ಅಂಗೀಕಾರ ಬಾಕಿ ಇದೆ. ಅಂಕಿತ ಬಿದ್ದ ತಕ್ಷಣ ಜಾರಿಗೆ ಬರುತ್ತದೆ. ಈ ಕಾಯ್ದೆಯಿಂದಾಗಿ ಸರಕಾರದ ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರ ಬದುಕು ಬೀದಿಗೆ ಬೀಳುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರದ ಯೋಜನೆಗಳಿಗೆ ಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ಪುನರ್ ವಸತಿ ಸಿಗುತ್ತದೆ. ಆದರೆ ಈ ಕಾಯ್ದೆಯಿಂದ ರೈತನ ಬದುಕು ಕಷ್ಟಕರವಾಗುತ್ತದೆ. ಈ ಮಸೂದೆಗೆ 15(ಎ)ಯನ್ನು ಸೇರಿಸಲಾಗಿದ್ದು, ಇದರಿಂದ ಕೇವಲ ರಿಯಲ್ ಎಸ್ಟೇಟ್ ಕುಳಗಳಿಗೆ ಅನುಕೂಲವಾಗುತ್ತದೆ ಹಾಗೂ ರೈತರಿಗೆ ನೀಡುವ ಪರಿಹಾರದಲ್ಲಿ ಕಾಲಂ 23(ಎ) ಯನ್ನು ಸೇರಿಸಿ ರೈತರಿಗೆ ಬಾರಿ ಅನ್ಯಾಯವನ್ನು ಎಸಗಿದ್ದಾರೆ ಎಂದು ವಿಷಾದಿಸಿದರು.
ರೈತನಿಗೆ ವ್ಯವಸಾಯದ ಹೊರತು ಬೇರೆ ಕೆಲಸ ಗೊತ್ತಿಲ್ಲದೆ ಇರುವುದರಿಂದ ಅವನು ಮತ್ತೆ ಭೂಮಿಯನ್ನು ಕೊಳ್ಳಬೇಕಾಗುತ್ತದೆ. ಆದರೆ, ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ ಸರಕಾರ ಘೋಷಣೆ ಮಾಡಲಿರುವ ಪರಿಹಾರದಲ್ಲಿ ಭೂಮಿ ಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲದೆ, ರೈತರಿಗೆ 2014ರ ಯುಪಿಎ ಸರಕಾರದ ಮಸೂದೆಯ ಪ್ರಕಾರ ಪರಿಹಾರ ನೀಡಬೇಕು. ಆನೇಕಲ್ ತಾಲೂಕಿನ ಸೂರ್ಯನಗರದ 4 ನೇ ಹಂತಕ್ಕೆ 2013 ರಲ್ಲಿ ಸ್ವಾದೀನಪಡಿಸಿಕೊಂಡು ಇಲ್ಲಿಯವರೆಗೂ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ತ್ವರಿತಗತಿಯಲ್ಲಿ ಚಾಲನೆ ಕೊಟ್ಟು ಈಗಿನ ಮಾರುಕಟ್ಟೆ ದರದಲ್ಲಿ ನಾಲ್ಕು ಪಟ್ಟು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಜಂಟಿ ಅಭಿವೃದ್ಧಿ ಭೂಮಿ ನೀಡುವ ರೈತರುಗಳಿಗೆ ಶೇ.50 ದರದಲ್ಲಿ ಅಭಿವದ್ಧಿ ಪಡಿಸಿದ ನಿವೇಶನಗಳನ್ನು ನೀಡುವುದಲ್ಲದೆ ಯೋಜನೆಯನ್ನು ನಿಗದಿತ ಸಮಯದಲ್ಲಿ ಮುಗಿಸುವಂತಹ ಒಂದು ಆಶ್ವಾಸನೆಯನ್ನು ನೀಡುವಂತೆ ಕ್ರಮವಹಿಸಬೇಕು. ತಪ್ಪಿದಲ್ಲಿ ಅದಕ್ಕೆ ನಷ್ಟ ಪರಿಹಾರಕೊಡಬೇಕು ಎಂದು ಒತ್ತಾಯಿಸಿದರು.