ಬಿಬಿಎಂಪಿ: ಮೊದಲ ಮಾದರಿ ಶಾಲೆ ಉದ್ಘಾಟನೆಗೆ ಸಜ್ಜು

Update: 2019-02-26 17:12 GMT

ಬೆಂಗಳೂರು, ಫೆ.26: ಮಾದರಿ ಶಾಲೆಗಳ ಮೂಲಕ ವಿದ್ಯಾರ್ಥಿಗಳನ್ನು ಪಾಲಿಕೆಯ ಶಾಲೆಗಳತ್ತ ಆಕರ್ಷಿಸುವ ಮೂಲಕ ಪಾಲಿಕೆಯ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡುವ ಉದ್ದೇಶದಿಂದ ಬಿಬಿಎಂಪಿಯಿಂದ ರೂಪಿಸಿರುವ ‘ರೋಶಿನಿ’ ಯೋಜನೆಯ ಮೊದಲನೆ ಮಾದರಿ ಶಾಲೆ ಶಿವಾಜಿನಗರದ ಕ್ಲೀವ್‌ ಲ್ಯಾಂಡ್ ಟೌನ್‌ನಲ್ಲಿ ಉದ್ಘಾಟನೆಗೆ ಸಿದ್ಧವಾಗಿದೆ.

ರೋಶಿನಿ ಯೋಜನೆಯ ಲೈಟಿಂಗ್ ಸ್ಕೂಲ್ ಯೋಜನೆ ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯ 156 ಶಾಲಾ-ಕಾಲೇಜುಗಳಲ್ಲಿ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆದಿತ್ತು. ಮೊದಲ ಹಂತದಲ್ಲಿ ನಗರದ ಪ್ರಮುಖ 6 ಶಾಲೆಗಳನ್ನು ಮಾದರಿಯಾಗಿ ಪರಿವರ್ತಿಸಿ, ಬಳಿಕ ಉಳಿದ ಶಾಲೆಗಳಿಗೆ ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಎಲ್ಲ ಏಳು ಕಡೆಗಳಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶಿವಾಜಿನಗರದ ಶಾಲೆ ಉದ್ಘಾಟನೆಗೆ ಸಿದ್ಧವಾಗಿದೆ. ಮಾದರಿ ಶಾಲೆಗಳ ಹೊರಭಾಗ ಹಾಗೂ ತರಗತಿ ಕೊಠಡಿಗಳು ಹಳದಿ ಬಣ್ಣದಿಂದ ಕಂಗೊಳಿಸುತ್ತಿದ್ದು, ಪೋಷಕರನ್ನು ಆಕರ್ಷಿಸುವಂತಿವೆ.

ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ದೊರೆಯುವ ರೀತಿಯಲ್ಲಿಯೇ ಗುಣಮಟ್ಟದ ಶಿಕ್ಷಣ ಪಾಲಿಕೆ ಶಾಲೆಯಲ್ಲಿಯೂ ದೊರೆಯುತ್ತದೆ ಎಂಬುದನ್ನು ಮಾದರಿ ಶಾಲೆ ತೋರಿಸುತ್ತಿದೆ. ಅದರ ಜತೆಗೆ ಮಕ್ಕಳು ಶಿಕ್ಷಣದ ಜತೆ ಜತೆಗೆ ಸಾಂಸ್ಕೃತಿಕ, ಕ್ರೀಡೆ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಕಂಪ್ಯೂಟರ್ ಹೀಗೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಅಂಕಣಗಳ ವ್ಯವಸ್ಥೆ ಮಾಡಲಾಗಿದೆ.

ಬಿಬಿಎಂಪಿ ಶಾಲಾ-ಕಾಲೇಜುಗಳನ್ನು ಉನ್ನತೀಕರಿಸಿ ಮಕ್ಕಳಿಗೆ 21ನೇ ಶತಮಾನ ಕಲಿಕಾ ಮಾದರಿಗಳ ಮೂಲಕ ಶಿಕ್ಷಣ ನೀಡುವ ಉದ್ದೇಶದಿಂದ ಮೈಕ್ರೋಸಾಫ್ಟ್ ಹಾಗೂ ಟೆಕ್ ಅವಾಂತ್ ಗಾರ್ಡ್ ಸಂಸ್ಥೆಗಳು ಪಾಲಿಕೆಯ ಸಹಯೋಗದಲ್ಲಿ ರೋಶಿನಿ ಯೋಜನೆ ಜಾರಿಗೊಳಿಸುತ್ತಿದೆ.

ಸ್ಮಾರ್ಟ್ ಕ್ಲಾಸ್ ರೂಂ: ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ತರಗತಿಯಲ್ಲಿ ಎಲ್ಲವನ್ನೂ ಆಧುನಿಕತೆಗೆ ತಕ್ಕಂತೆ ಸಿದ್ಧಪಡಿಸಲಾಗಿದೆ. ಅತ್ಯುನ್ನತ ಬೋರ್ಡ್, ಟಿವಿ, ಕಂಪ್ಯೂಟರ್ ಅಳವಡಿಸಲಾಗಿದೆ. ಅಲ್ಲದೆ, ಹಲವು ಆಕರ್ಷಕ ಉಪಕರಣಗಳನ್ನೊಳಗೊಂಡ ಪ್ರಯೋಗಾಲಯವನ್ನೂ ನಿರ್ಮಿಸಲಾಗಿದೆ. ಜತೆಗೆ, ಉತ್ತಮವಾದ ಕಟ್ಟಡ ಮತ್ತು ಪ್ರತ್ಯೇಕ ಶೌಚಾಲಯಗಳನ್ನೂ ನಿರ್ಮಿಸಲಾಗಿದೆ.

ನಗರದ ಮಾದರಿ ಆಗಲಿರುವ ಶಾಲೆಗಳು

-ಆಸ್ಟಿನ್‌ಟೌನ್ ಬಾಲಕಿಯರ ಪ್ರೌಢಶಾಲೆ

-ಗಾಂಧಿನಗರ ಪ್ರೌಢಶಾಲೆ

-ಜಯನಗರ 1ನೇ ಬ್ಲಾಕ್ ಪ್ರೌಢಶಾಲೆ

-ಮೂಡಲಪಾಳ್ಯ ಪ್ರೌಢಶಾಲೆ

-ಕ್ಲೀವ್ ಲ್ಯಾಂಡ್ ಟೌನ್ ಪ್ರೌಢಶಾಲೆ ಹಾಗೂ ಕಾಲೇಜು

-ಭೈರಸಂದ್ರ ಪ್ರೌಢಶಾಲೆ ಹಾಗೂ ಕಾಲೇಜು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News