ಸಂವಿಧಾನಕ್ಕೆ ವಿರೋಧದ ಅರಿವಿದ್ದ ಅಂಬೇಡ್ಕರ್

Update: 2019-02-26 18:43 GMT

ಈ ದೇಶದ ಕಾನೂನು ಚೌಕಟ್ಟಿಗೆ ಗೌರವ ಕೊಡುವವರಿಗೆ ಇಂತಹ ಸಂವಿಧಾನ ವಿರೋಧಿ ಹೇಳಿಕೆಗಳು ಅಕ್ಷರಶಃ ಆತಂಕವನ್ನುಂಟುಮಾಡುತ್ತವೆ. ವಿಶೇಷವಾಗಿ ಸಂವಿಧಾನ ಶಿಲ್ಪಿಬಾಬಾಸಾಹೇಬ್ ಅಂಬೇಡ್ಕರ್‌ರವರ ಅನುಯಾಯಿಗಳಲ್ಲಿ ಇಂತಹ ಹೇಳಿಕೆಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿವೆ. ಈ ದಿಸೆಯಲ್ಲಿ ಇಂತಹ ಸಂಭವಿಸಬಹುದಾಗಿದ್ದ ಸಂವಿಧಾನ ವಿರೋಧಿ ಹೇಳಿಕೆಗಳಿಗೆ ಅಂಬೇಡ್ಕರ್‌ರವರ ಅಭಿಪ್ರಾಯ ಏನಿತ್ತು? ಖಂಡಿತ, ಅಂಬೇಡ್ಕರ್‌ರಿಗೆ ಇಂತಹ ವಿರೋಧದ ಸ್ಪಷ್ಟ ಸುಳಿವಿತ್ತು!


 ‘‘ಸಂವಿಧಾನದ ಬದಲಾವಣೆ ಆಗಬೇಕಿದೆ’’, ‘‘ಇಂದು ನಡೆಯುತ್ತಿರುವುದು ಅಂಬೇಡ್ಕರ್ ಸ್ಮತಿ’’, ‘‘ಜಾತ್ಯತೀತರು ಎಂದು ಕರೆಸಿಕೊಂಡರೆ ಅವರ ರಕ್ತದ ಬಗ್ಗೆ ಅನುಮಾನ ಬರುತ್ತದೆ...’’, ‘‘ಸಂವಿಧಾನ ಬದಲಾಯಿಸೋಕೆ ನಾವು ಬಂದಿರೋದು...’’ ಹೀಗೆ ಸಂವಿಧಾನದ ವಿರುದ್ಧ ಕೇಂದ್ರ ಸಚಿವ ಅನಂತಕುಮಾರ್‌ಹೆಗಡೆ ಕೆಲ ದಿನಗಳ ಹಿಂದೆ ಆಣಿಮುತ್ತುಗಳನ್ನು ಉದುರಿಸಿದ್ದರು. ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಕಾರಣ ಸಂಸತ್ತಿನಲ್ಲಿ ಕ್ಷಮೆ ಕೂಡ ಕೋರಿದ್ದರು. ಖಂಡಿತ, ಅವರು ಕ್ಷಮೆ ಕೋರಿದಾಕ್ಷಣ ಮುಗಿದುಹೋಗುವ ವಿದ್ಯಮಾನ ಇದಲ್ಲ. ಅನಂತಕುಮಾರ ಹೆಗಡೆಯವರ ಜೊತೆ ರಾಜ್ಯದವರೇ ಆದ ಪೇಜಾವರ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಇತ್ಯಾದಿ ಜನರು ಹೀಗೆ ಸಂವಿಧಾನದ ವಿರುದ್ಧ ಹೇಳಿಕೆ ನೀಡುತ್ತಲೇ ಇರುತ್ತಾರೆ. ಇದೊಂದು ರೀತಿ ಸಾಮಾನ್ಯ ಅನ್ನುವಂತೆ ಅವರ ಇಂತಹ ಹೇಳಿಕೆಗಳಿರುತ್ತವೆ, ಹಾಗೆ ತಮ್ಮ ಆ ಹೇಳಿಕೆಗಳನ್ನು ಅವರು ಸಮರ್ಥಿಸಿಕೊಳ್ಳುತ್ತಲೂ ಇರುತ್ತಾರೆ. ಆದರೆ ಈ ದೇಶದ ಕಾನೂನು ಚೌಕಟ್ಟಿಗೆ ಗೌರವ ಕೊಡುವವರಿಗೆ ಇಂತಹ ಸಂವಿಧಾನ ವಿರೋಧಿ ಹೇಳಿಕೆಗಳು ಅಕ್ಷರಶಃ ಆತಂಕವನ್ನುಂಟುಮಾಡುತ್ತವೆ. ವಿಶೇಷವಾಗಿ ಸಂವಿಧಾನ ಶಿಲ್ಪಿಬಾಬಾಸಾಹೇಬ್ ಅಂಬೇಡ್ಕರ್‌ರವರ ಅನುಯಾಯಿಗಳಲ್ಲಿ ಇಂತಹ ಹೇಳಿಕೆಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿವೆ.

ಈ ದಿಸೆಯಲ್ಲಿ ಇಂತಹ ಸಂಭವಿಸಬಹುದಾಗಿದ್ದ ಸಂವಿಧಾನ ವಿರೋಧಿ ಹೇಳಿಕೆಗಳಿಗೆ ಅಂಬೇಡ್ಕರ್‌ರವರ ಅಭಿಪ್ರಾಯ ಏನಿತ್ತು? ಖಂಡಿತ, ಅಂಬೇಡ್ಕರ್‌ರಿಗೆ ಇಂತಹ ವಿರೋಧದ ಸ್ಪಷ್ಟ ಸುಳಿವಿತ್ತು! ಹಾಗಿದ್ದರೆ ಈ ಸಂಬಂಧದ ಬಾಬಾಸಾಹೇಬರ ಅಭಿಪ್ರಾಯಗಳನ್ನು ನಾವು ಎಲ್ಲಿ ಕಾಣಬಹುದು? ಅವರ ಬರಹಗಳು ಭಾಷಣಗಳ ಸಂಪುಟ 1ರಲ್ಲೇ ಇದರ ಮುನ್ಸೂಚನೆ ಇದೆ! ದಾಖಲೆ ಇದೆ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.1, ಪು358). ಹಾಗಿದ್ದರೆ ಅಂಬೇಡ್ಕರ್‌ರವರು ಯಾವ ಸಂದರ್ಭದಲ್ಲಿ ಈ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ? ಅಥವಾ ಸಂವಿಧಾನ ಶಿಲ್ಪಿಎನಿಸಿಕೊಂಡ ನಂತರ ಹೀಗೆ ಆತಂಕ ವ್ಯಕ್ತಪಡಿಸಿದ್ದರಾ? ಖಂಡಿತ ಇಲ್ಲ. ನಿಜ ಹೇಳಬೇಕೆಂದರೆ ಸಂವಿಧಾನ ರಚನೆಗೆ ಈ ದೇಶ ತೊಡಗಿಸಿಕೊಳ್ಳುವ ಬಹಳ ದಿನಗಳು ಮೊದಲೇ ಬಾಬಾಸಾಹೇಬರು ಈ ಸಂಬಂಧ ತಮ್ಮ ಆತಂಕ ಹೊರಹಾಕಿದ್ದಾರೆ. 1945 ಮೇ 6, ಮುಂಬೈನಲ್ಲಿ ನಡೆದಿದ್ದ ‘ಪರಿಶಿಷ್ಟ ಜಾತಿಗಳ ಒಕ್ಕೂಟ’ದ ಸಮಾವೇಶದಲ್ಲಿ ಅಂಬೇಡ್ಕರ್ ಈ ಸಂಬಂಧ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅಂಬೇಡ್ಕರ್ ಸಂವಿಧಾನ ರಚನೆಗೆ ಪೂರ್ವ ತಯಾರಿ ಎಂಬಂತೆ ಆ ಸಮ್ಮೇಳನ ಕರೆದಿರಲಿಲ್ಲ. ಯಥಾಪ್ರಕಾರ ನಡೆದ ಅವರ ಸಂಘಟನೆ ಪರಿಶಿಷ್ಟ ಜಾತಿಗಳ ಒಕ್ಕೂಟದ ವಾರ್ಷಿಕ ಸಮ್ಮೇಳನವದು. ಸಮ್ಮೇಳನದಲ್ಲಿ ಸಭಿಕರೆಲ್ಲ ಬಾಬಾಸಾಹೇಬರು ತಮ್ಮ ಸಮುದಾಯದ ಸಮಸ್ಯೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದೇ ಕುತೂಹಲಗೊಂಡಿದ್ದರು.

ಆದರೆ ಅಂಬೇಡ್ಕರ್‌ರವರು ಹೇಳಿದ್ದು ‘‘ಸಾಮಾನ್ಯವಾಗಿ ಇಂತಹ ಸಮಾವೇಶದಲ್ಲಿ ನಾನು ಮಾತನಾಡುತ್ತಿದ್ದುದು ಅಥವಾ ನನ್ನ ಜನರು ನಾನು ಮಾತನಾಡುವಂತೆ ಅಪೇಕ್ಷಿಸುತ್ತಿದ್ದುದು ಪರಿಶಿಷ್ಟ ಜಾತಿಗಳ ಯಾವುದಾದರೊಂದು ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಯ ಬಗ್ಗೆ. ಆದರೆ ಈ ದಿನ ನಾನು ಅಂತಹ ವರ್ಗ ಸಂಬಂಧಿ ವಿಷಯದ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ಬದಲಿಗೆ ನಾನು ಇಂದು ಒಂದು ಸಾಮಾನ್ಯ ವಿಷಯ, ಅದರಲ್ಲೂ ಹೆಚ್ಚು ವ್ಯಾಪಕತೆಯನ್ನು ಹೊಂದಿರುವ ಭಾರತದ ಭವಿಷ್ಯದ ಸಂವಿಧಾನ: ಒಂದು ರೂಪ ಮತ್ತು ರಚನೆ ಕುರಿತು ಮಾತನಾಡಲಿದ್ದೇನೆ’’ ಎನ್ನುತ್ತಾ ಭಾರತದ ಭವಿಷ್ಯದ ಸಂವಿಧಾನದ ಸಮಗ್ರ ರೂಪ ಮತ್ತು ರಚನೆ ಕುರಿತು ತಮ್ಮ ಸುದೀರ್ಘ ಭಾಷಣ ಆರಂಭಿಸುತ್ತಾರೆ. ಹಾಗಿದ್ದರೆ ಅಂಬೇಡ್ಕರರೇಕೆ ಸಂವಿಧಾನದಂತಹ ಸಾಮಾನ್ಯ ವಿಷಯದ ಕುರಿತು ಪರಿಶಿಷ್ಟಜಾತಿಗಳ ಒಕ್ಕೂಟದ ಸಮ್ಮೇಳನದಲ್ಲಿ ಮಾತನಾಡಿದ್ದಾರೆ? ಈ ಸಂಬಂಧದ ಅವರ ನುಡಿಗಳನ್ನೇ ಉಲ್ಲೇಖಿಸುವುದಾದರೆ ‘‘ಪರಿಶಿಷ್ಟಜಾತಿಗಳ ಜನರ ಮೇಲೆ ಆಗಾಗ ಹೊರಿಸುವ ಆಪಾದನೆ ಎಂದರೆ ಅವರು ಸ್ವಾರ್ಥಿಗಳು. ಕೇವಲ ತಮ್ಮ ಸಮುದಾಯದ ಹಿತಾಸಕ್ತಿಯನ್ನಷ್ಟೇ ಅವರು ಗಮನಿಸುತ್ತಾರೆ.

ದೇಶದ ರಾಜಕೀಯ ಸಮಸ್ಯೆಗಳನ್ನು ಪರಿಹರಿಸಲು ಅವರ ಬಳಿ ಯಾವುದೇ ರಚನಾತ್ಮಕ ಸಲಹೆಗಳಿಲ್ಲ. ಹೀಗೆ... ಈ ನಿಟ್ಟಿನಲ್ಲಿ ಹೇಳುವುದಾದರೆ ಈ ಆರೋಪ ಸಂಪೂರ್ಣ ಸುಳ್ಳು. ಹಾಗೆಯೇ ಅಕಸ್ಮಾತ್ ಇದು ಸತ್ಯ ಎನ್ನುವುದಾದರೆ ಈ ಸಂಬಂಧ ಕೇವಲ ಅಸ್ಪಶ್ಯರಷ್ಟೇ ಇಂತಹ ತಪ್ಪುಮಾಡುತ್ತಾರೆ ಎಂಬುದಲ್ಲ, ಒಟ್ಟಾರೆ ಭಾರತದ ಬಹುತೇಕ ಜನರು ಹೀಗೆ ರಚನಾತ್ಮಕ ಸಲಹೆ ನೀಡುವುದರಲ್ಲಿ ಹಿಂದೆ ಬಿದ್ದಿದ್ದಾರೆ ಅಥವಾ ನೀಡುವುದಿಲ್ಲ. ಹಾಗಿದ್ದರೆ ಇದಕ್ಕೆ ಕಾರಣ? ಹಾಗೆ ರಚನಾತ್ಮಕವಾಗಿ ಆಲೋಚಿಸುವ ಸಾಮರ್ಥ್ಯ ಇರುವ ಜನರು ಇಲ್ಲ ಎಂಬುದಲ್ಲ! ಬದಲಿಗೆ ಎಲ್ಲಾ ರಚನಾತ್ಮಕ ಆಲೋಚನೆಗಳು ತೆರೆಯದೇ ಮುಚ್ಚಲ್ಪಡುತ್ತವೆ ಎಂಬುದಕ್ಕೆ ಮುಖ್ಯ ಕಾರಣ ಜನತೆಯ ಮನಸ್ಸಿನಲ್ಲಿ ಇರುವ ಒಂದು ನಿರಂತರ ಮತ್ತು ವ್ಯಾಪಕ ತಪ್ಪುಕಲ್ಪನೆ. ಅದೆಂದರೆ ಕಾಂಗ್ರೆಸ್‌ನಿಂದ ಬಾರದ ಹೊರತು ಮತ್ತೇನನ್ನು ಒಪ್ಪಬಾರದು ಮತ್ತು ಗೌರವಿಸಬಾರದು ಎಂಬುದು. ಈ ದಿಸೆಯಲ್ಲಿ ಹೇಳುವುದಾದರೆ ಇಂತಹ ಕಲ್ಪನೆಯೇ ದೇಶದಲ್ಲಿ ರಚನಾತ್ಮಕ ಆಲೋಚನೆಗಳನ್ನು ಕೊಲ್ಲುತ್ತಿರುವುದು. ಹಾಗೆಯೇ ಅದೇ ಸಮಯದಲ್ಲಿ ಪರಿಶಿಷ್ಟರ ಮೇಲಿನ ಇಂತಹ ಆರೋಪವನ್ನು ಅಷ್ಟೇ ವೇಗದಲ್ಲಿ ಧನಾತ್ಮಕವಾಗಿ ಹಿಂದಿರುಗಿಸಬೇಕಿದೆ. ಹೇಗೆಂದರೆ ದೇಶದ ಸಾಮಾನ್ಯ ರಾಜಕೀಯ ಪುರೋಭಿವೃದ್ಧಿಗಾಗಿ ರಚನಾತ್ಮಕ ಸಲಹೆ ನೀಡುವುದಕ್ಕೆ ಪರಿಶಿಷ್ಟರೂ ಸಮರ್ಥರು’’ ಎಂದು. ಹೀಗೆ ದೇಶದ ಹಿತದೃಷ್ಟಿಯಿಂದ ಸಂವಿಧಾನದ ರೂಪುರೇಷೆ ಕುರಿತು ತಾವು ಏಕೆ ಮಾತನಾಡಬೇಕಿದೆ ಎಂಬುದನ್ನು ಅಂಬೇಡ್ಕರ್‌ರವರು ತಮ್ಮ ಆ ಮುನ್ನುಡಿಯಲ್ಲಿ ತಿಳಿಸುತ್ತಾರೆ ಮತ್ತು ಅವರು ಹೇಳುವುದು ಹಾಗೆಯೇ

‘‘ನನ್ನ ಈ ನುಡಿಗಳು ಸರಿ ಎನಿಸಿದರೆ ದೇಶ ನನ್ನ ಈ ಸಲಹೆಗಳನ್ನು ಗಮನಿಸಲಿ’’ ಎಂದು. (ಆಶ್ಚರ್ಯವೆಂದರೆ ಅಂಬೇಡ್ಕರ್‌ರವರು 1945ರಲ್ಲಿ ಹೀಗೆ ತನ್ನ ನುಡಿಗಳನ್ನು ದೇಶ ಗಮನಿಸಲಿ ಎಂದು ಸಂವಿಧಾನ ಕುರಿತು ತಮ್ಮ ಮುನ್ನೋಟ ವಿವರಿಸಿದರು. ಕಾಕತಾಳೀಯ ಎಂದರೆ ಇದರ ತರುವಾಯ 4 ವರ್ಷಗಳ ನಂತರ ಅಂದರೆ 1949 ನವೆಂಬರ್ 26ರಂದು ಅವರೇ ಈ ದೇಶಕ್ಕೆ ಸಂವಿಧಾನ ರಚಿಸಿ ಅರ್ಪಿಸಿ ಸಂವಿಧಾನ ಶಿಲ್ಪಿಎಂಬ ಖ್ಯಾತಿಗೆ ಪಾತ್ರರಾದರಲ್ಲ ಎಂಬುದು!). ಈ ಹಿನ್ನೆಲೆಯಲ್ಲಿ ಅಂಬೇಡ್ಕರರು ಮೊದಲು ಹೇಳುವುದು ಭಾರತಕ್ಕೆ ಸಂವಿಧಾನವನ್ನು ಯಾರು ರಚಿಸಿಕೊಡಬೇಕು? ಎಂದು. ಅವರು ಈ ಪ್ರಶ್ನೆ ಎತ್ತಲು ಕಾರಣ ಆಗ ಕೇಳಿಬರುತ್ತಿದ್ದ ಅಥವಾ ಚರ್ಚೆಯಾಗುತ್ತಿದ್ದ ಮಾತೆಂದರೆ ಈ ಕಗ್ಗಂಟನ್ನು (ಸಂವಿಧಾನ) ಬ್ರಿಟಿಷರೇ ಪರಿಹರಿಸಿಕೊಡಬೇಕು ಮತ್ತು ಅವರೇ ಭಾರತಕ್ಕೆ ಸಂವಿಧಾನ ರಚಿಸಿಕೊಡಬೇಕು ಎಂಬುದಾಗಿತ್ತು. ಇದನ್ನು ಉಲ್ಲೇಖಿಸುತ್ತಾ ಅಂಬೇಡ್ಕರರು ಹೇಳುವುದು ‘‘ಇದರಿಂದ ಉಂಟಾಗಬಹುದಾದ ದೊಡ್ಡ ಅಭಾಸವನ್ನು ಬಯಲಿಗೆಳೆಯಲೇಬೇಕು. ಯಾಕೆಂದರೆ ಬ್ರಿಟಿಷರೇ ಸಂವಿಧಾನ ರಚಿಸಿ ಅದನ್ನು ಭಾರತೀಯರ ಮೇಲೆ ಹೇರಿರುವುದು ಈಗಾಗಲೇ ಸಾಕಷ್ಟಾಗಿದೆ. ಆದ್ದರಿಂದ ಭಾರತದ ಸಂವಿಧಾನ ಹೇಗಿರಬೇಕು? ಈ ನಿಟ್ಟಿನಲ್ಲಿ ಭವಿಷ್ಯದ ಸಂವಿಧಾನಕ್ಕಾಗಿ ಎದ್ದಿರುವ ಕೂಗನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಹೇರಲ್ಪಟ್ಟಿರುವ ಸಂವಿಧಾನ ಭಾರತಕ್ಕೆ ಅದರ ಅಸೆ ಆಕಾಂಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಏನನ್ನೂ ಮಾಡುವುದಿಲ್ಲ.’’ ಅಂದಹಾಗೆ ಅಂಬೇಡ್ಕರರ ಈ ನುಡಿಗಳಲ್ಲಿ ಅವರ ಉತ್ಕಟ ದೇಶಪ್ರೇಮವನ್ನು ಸರ್ವರೂ ಗುರುತಿಸಬಹುದು ಎಂಬುದನ್ನು ಇಲ್ಲಿ ಬಿಡಿಸಿಹೇಳುವ ಅಗತ್ಯವಿಲ್ಲ ಎನಿಸುತ್ತದೆ.

ಈ ನಿಟ್ಟಿನಲ್ಲಿ ಭಾರತದ ಭವಿಷ್ಯದ ಸಂವಿಧಾನ ಹೇಗಿರಬೇಕು? ಅದರಲ್ಲೂ ಅದರ ಒಕ್ಕೂಟ ಸ್ವರೂಪವನ್ನು ಕಾಪಾಡುವ ನಿಟ್ಟಿನಲ್ಲಿರುವ ತೊಡಕುಗಳು, ಉದಾಹರಣೆಗೆ ರಾಜ್ಯಗಳಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾದಾಗ ಏನು ಮಾಡಬೇಕು? ಕೇಂದ್ರ ಮಧ್ಯ ಪ್ರವೇಶಿಸಬೇಕೇ? ಅಥವಾ ರಾಜ್ಯಗಳ ಬಂಡಾಯಕ್ಕೆ ಅವಕಾಶ ಕೊಡಬೇಕೇ? ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಬಾಬಾಸಾಹೇಬರು ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ. ಈ ನಿಟ್ಟಿನಲ್ಲಿ ಅವರು ಹೇಳುವುದು ‘‘ರಾಜ್ಯಗಳಿಗೆ ಬಂಡಾಯಕ್ಕೆ ಹೀಗೆ ಅವಕಾಶ ಕೊಟ್ಟು ಅಥವಾ ಬಂಡಾಯದ ಅಂತಹ ಅವಕಾಶ ಒಳಗೊಂಡ ಅಂಶಗಳನ್ನು ಸೇರಿಸಿ ಸಂವಿಧಾನ ರಚಿಸುವುದು ಸಂಪೂರ್ಣ ಅಸಾಧ್ಯ’’ ಎಂದು. ಇದಕ್ಕೆ ಅಂಬೇಡ್ಕರರು ಕೊಡುವ ಕಾರಣ ‘‘ಸಂವಿಧಾನವನ್ನು ಹೇಗೆ ರಚಿಸಬೇಕೆಂದರೆ ಅದು ಎಲ್ಲರ ವಿಧೇಯತೆಯನ್ನು ಅಪೇಕ್ಷಿಸುವುದಷ್ಟೇ ಅಲ್ಲ, ಎಲ್ಲರ ಗೌರವವನ್ನು ಅದು ಅಪೇಕ್ಷಿಸುವಂತಿರಬೇಕು, ಆಜ್ಞಾಪಿಸುವಂತಿರಬೇಕು.’’ ಬಾಬಾಸಾಹೇಬರ ಈ ನುಡಿಯ ಪ್ರಕಾರ ಭಾರತದ ಪ್ರತಿಯೊಬ್ಬರೂ ಸಂವಿಧಾನಕ್ಕೆ ಗೌರವ ಕೊಡಬೇಕು, ವಿಧೇಯರಾಗಿರಬೇಕು. (ಅಂದಹಾಗೆ ಅನಂತಕುಮಾರ ಹೆಗಡೆಯಂಥವರು ಸಿಕ್ಕಿ ಬೀಳುವುದು ಅಂಬೇಡ್ಕರ್‌ರ ದೇಶದ ಸಂವಿಧಾನ ಕುರಿತ ಇಂತಹ ಹೇಳಿಕೆಯಲ್ಲೇ!) ಮುಂದುವರಿದು ಅಂಬೇಡ್ಕರರು ಹೇಳುವುದು ಭಾರತದ ರಾಷ್ಟ್ರೀಯ ಜೀವನದ ಪ್ರತಿಯೊಂದು ಮುಖ್ಯ ಘಟಕವೂ ಸಂವಿಧಾನವನ್ನು ಎತ್ತಿಹಿಡಿಯಬೇಕು. ಅದನ್ನು ಬೆಂಬಲಿಸಬೇಕು ಮತ್ತು ಇದು ಸಾಧ್ಯವಾಗುವುದು ಸಂವಿಧಾನವನ್ನು ಭಾರತೀಯರೇ ಭಾರತಕ್ಕೋಸ್ಕರ ಭಾರತೀಯರ ಅಪ್ಪಣೆ ಮೇರೆಗೆ ಭಾರತೀಯರೇ ರಚಿಸಿಕೊಂಡಾಗ ಮಾತ್ರ’’ ಎಂದು.

ಅಂದ ಹಾಗೆ ಸಂವಿಧಾನದ ವಿರುದ್ಧ ಎದುರಾಗಬಹುದಾದ ಸಂಭಾವ್ಯ ದಾಳಿಯ ಬಗ್ಗೆ ಅಂಬೇಡ್ಕರರು ಹೇಳುವುದು? ಅದನ್ನು ದಾಖಲಿಸುವುದಾದರೆ ‘‘ಸಂವಿಧಾನವನ್ನು ಬ್ರಿಟಿಷ್ ಸರಕಾರ ರಚಿಸಿ ಭಾರತೀಯರ ಮೇಲೆ ಹೇರಿದರೆ ಅಥವಾ ಸಮಾಜದ ಒಂದು ಪ್ರಬಲ ವರ್ಗ ಅಥವಾ ವರ್ಗಗಳ ಒಂದು ಗುಂಪು ಹಾಗೆ ಸಂವಿಧಾನ ರಚಿಸಿ ಇತರರ ಮೇಲೆ ಹೇರಿದರೆ ಅಂತಹ ಸಂವಿಧಾನವನ್ನು ಸಮಾಜದ ಇತರ ವರ್ಗಗಳು ವಿರೋಧಿಸುತ್ತವೆ. ಸಂವಿಧಾನಕ್ಕೆ ವ್ಯತಿರಿಕ್ತವಾದ ಒಂದು ವರ್ಗವೇ ದೇಶದಲ್ಲಿ ಹುಟ್ಟಿಕೊಳ್ಳುತ್ತದೆ ಮತ್ತು ಆ ವರ್ಗ ತನ್ನ ಶಕ್ತಿಯನ್ನು ಸಂವಿಧಾನವನ್ನು ಜಾರಿಗೊಳಿಸಲು ಬಳಸುವುದಿಲ್ಲ. ಬದಲಿಗೆ ಅದನ್ನು ವಿಫಲಗೊಳಿಸಲು ಬಳಸುತ್ತದೆ. ಸಂವಿಧಾನ ವಿರೋಧಿ ಆ ಪಕ್ಷವು ಸಂವಿಧಾನ ನಾಶಗೊಳಿಸುವುದನ್ನೇ ತನ್ನ ಏಕಮಾತ್ರ ಕರ್ತವ್ಯ ಎಂದು ಪರಿಗಣಿಸುತ್ತದೆ ಮತ್ತು ಸಂವಿಧಾನ ಜಾರಿಗೊಳಿಸಲು ಹೊರಡುವ ಪಕ್ಷಗಳ ವಿರುದ್ಧ ಅಂತಹ ವಿರುದ್ಧ ಶಕ್ತಿಯು ತನ್ನ ನಿರಂತರ ವಾಗ್ದಾಳಿಯನ್ನು ಮುಂದುವರಿಸುತ್ತದೆ.’’

ಖಂಡಿತ, ಅಂಬೇಡ್ಕರ್ ಹೇಳಿರುವ ಅಂತಹ ಸಂವಿಧಾನ ವಿರುದ್ಧದ ಶಕ್ತಿ ಈಗ ಅನಂತಕುಮಾರ್ ಹೆಗಡೆ ಮತ್ತವರ ತಂಡದವರಾಗುತ್ತಾರೆ ಮತ್ತು ಬಾಬಾಸಾಹೇಬರು ಹೇಳಿರುವಂತೆ ‘‘ಅಂತಹವರ ಏಕಮಾತ್ರ ಕರ್ತವ್ಯ ಸಂವಿಧಾನ ನಾಶಗೊಳಿಸುವುದೇ ಆಗಿದೆ.’’ ಹಾಗಿದ್ದರೆ ಈಗ ಯಾಕೆ ಹೀಗೆ ಇವರು ಅಂದು ಅಂಬೇಡ್ಕರ್ ಹೇಳಿರುವಂತೆ ಸಂವಿಧಾನ ವಿರುದ್ಧ ಶಕ್ತಿಯಾಗಿ ವಾಗ್ದಾಳಿ ನಡೆಸುತ್ತಿದ್ದಾರೆ? ಯಾಕೆಂದರೆ ಅಂಬೇಡ್ಕರರೇ ಇಲ್ಲಿ ಹೇಳಿರುವಂತೆ ‘‘ಭಾರತ ಅಂದು ಸಮಾಜದ ಒಂದು ಪ್ರಬಲ ವರ್ಗ ಅಥವಾ ಅಂತಹ ವರ್ಗಗಳ ಗುಂಪಿಗೆ ಸಂವಿಧಾನ ರಚಿಸಿ ಹೇರಲು ಅವಕಾಶ ಕೊಡಲಿಲ್ಲ. ಬದಲಿಗೆ ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ತನಗೆ ತಾನೇ ಒಂದು ಸಂವಿಧಾನ ರಚಿಸಿಕೊಂಡಿತು.’’ ಈ ನಿಟ್ಟಿನಲ್ಲಿ ಅನಂತಕುಮಾರ ಹೆಗಡೆಯಂಥವರಿಗೆ ಸಿಟ್ಟಿರುವುದು ತಮ್ಮ ಪ್ರಬಲ ವರ್ಗವೊಂದರಿಂದ ಈ ದೇಶವು ಸಂವಿಧಾನ ರಚಿಸಿ ಅದನ್ನು ತನ್ನ ಮೇಲೆ ಹೇರಿಕೊಂಡಿಲ್ಲ ಎಂಬುದಷ್ಟೆ!

Similar News