ಸ್ವಾಭಿಮಾನದ ಬದುಕಿಗಾಗಿ ಸ್ವಯಂ ಉದ್ಯೋಗಕ್ಕೆ ಆದ್ಯತೆ ಅಗತ್ಯ: ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ.ಜಾಫೆಟ್

Update: 2019-02-27 16:15 GMT

ಬೆಂಗಳೂರು, ಫೆ.26: ಆರ್ಥಿಕವಾಗಿ ಬೆಳೆಯುತ್ತಿರುವ ಭಾರತದಲ್ಲಿ ವಿವಿಧ ರೀತಿಯ ಉದ್ಯೋಗಾವಕಾಶಗಳು ವಿಸ್ತಾರಗೊಳ್ಳುತ್ತಿದ್ದು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಸ್ವಯಂ ಉದ್ಯೋಗಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಾಫೆಟ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಆರ್‌ಬಿಎಎನ್‌ಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಉನ್ನತ ಶಿಕ್ಷಣದಲ್ಲಿ ಕೌಶಲ, ಸ್ಪರ್ಧೆ, ಉದ್ಯಮಶೀಲತೆ ವೃದ್ಧಿಸುವ ಮೂಲಕ ಉದ್ಯೋಗಾವಕಾಶ ಹೆಚ್ಚಳ’ ಕುರಿತ ಅಂತರ್‌ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕಾದರೆ ಶಿಕ್ಷಣದಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಾದ ಅಗತ್ಯವಿದೆ. ಉನ್ನತ ಶಿಕ್ಷಣದಲ್ಲಿ ಕೌಶಲ್ಯದ ಜತೆಗೆ ಉದ್ಯಮಗಳ ಸ್ಥಾಪನೆ ಕುರಿತು ಪ್ರಾಥಮಿಕ ಶಿಕ್ಷಣ ಸಿಗಬೇಕಿದೆ. ಶಿಕ್ಷಣವನ್ನು ಕೇವಲ ಸರಕಾರಿ ಉದ್ಯೋಗ ಪಡೆಯುವ ದೃಷ್ಟಿಕೋನದಿಂದ ನೋಡುವ ಬದಲಿಗೆ, ಕೌಶಲ್ಯ ತರಬೇತಿಗಳನ್ನು ಪಡೆದುಕೊಂಡು ಖಾಸಗಿ ರಂಗದಲ್ಲಿ ಉದ್ಯೋಗವನ್ನು ಪಡೆಯುವ ಕಡೆಗೂ ಯೋಚಿಸಬೇಕು ಎಂದು ನುಡಿದರು.

ಸ್ವಯಂ ಉದ್ಯೋಗಗಳನ್ನು ಮಾಡುವುದರ ಮೂಲಕ ಸ್ವಾವಲಂಬಿಗಳಾಗಬೇಕು. ಭಾರತದಲ್ಲಿ ವಾರ್ಷಿಕವಾಗಿ ಕೋಟ್ಯಂತರ ಸಂಖ್ಯೆಯ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿಕೊಂಡು ಹೊರ ಬರುತ್ತಿದ್ದಾರೆ. ಆದರೆ, ಎಲ್ಲರಿಗೂ ಉದ್ಯೋಗಾವಕಾಶಗಳು ಲಭ್ಯವಾಗುತ್ತಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಇದರಿಂದ ನಿರಾಸೆಗೆ ಒಳಗಾಗದೇ ಸ್ವಯಂ ಉದ್ಯೋಗದ ಕಡೆಗೆ ಗಮನ ಹರಿಸಬೇಕು. ಈ ಮೂಲಕ ಔದ್ಯೋಗಿಕ ಕ್ಷೇತ್ರವನ್ನು ಬೆಳೆಸಬೇಕಿದೆ ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಗತ್ಯವಾದ ಎಲ್ಲ ವಸ್ತುಗಳನ್ನೂ ತಮ್ಮ ಕೌಶಲ್ಯದ ಮೂಲಕ ಅವರೇ ತಯಾರಿಸಿ, ಬಳಸುತ್ತಿದ್ದರು. ಕೃಷಿಯಿಂದ ಆರಂಭವಾಗಿ ಗೃಹ ಬಳಕೆ ವಸ್ತುಗಳವರೆಗೂ ಎಲ್ಲವನ್ನೂ ತಯಾರಿಸುತ್ತಿದ್ದ ಕಾಲವಿತ್ತು. ಆದರೆ, ಆಧುನೀಕತೆಯಿಂದಾಗಿ ಎಲ್ಲವೂ ಬದಲಾಗಿದೆ. ಆದರೆ, ಈಗಲೂ ಕಾಲ ಮಿಂಚಿಲ್ಲ, ಆಧುನಿಕತೆಗೆ ತಕ್ಕಂತೆ ಯುವಜನತೆ ತಮ್ಮ ಕೌಶಲ್ಯದ ಮೂಲಕ ಹೊಸ ಬದುಕು ಕಟ್ಟಿಕೊಳ್ಳಲು ವ್ಯಾಪಕ ಅವಕಾಶಗಳಿವೆ ಎಂದ ಅವರು, ಆಧುನಿಕತೆಗೆ ತಕ್ಕಂತೆ ಕೌಶಲ್ಯಾಭಿವೃದ್ದಿ ನೀಡುವ ಸಂಬಂಧ ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ ಎಂದರು.

ವಿಚಾರ ಸಂಕಿರಣದಲ್ಲಿ ಸುರೇಶ್ ರಾಘವೇಂದ್ರ ಮಾತನಾಡಿ, ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಗತ್ಯವಾದ ಎಲ್ಲ ವಸ್ತುಗಳನ್ನೂ ತಮ್ಮ ಕೌಶಲ್ಯದ ಮೂಲಕ ಅವರೇ ತಯಾರಿಸಿ, ಬಳಸುತ್ತಿದ್ದರು. ಕೃಷಿಯಿಂದ ಆರಂಭವಾಗಿ ಗೃಹ ಬಳಕೆ ವಸ್ತುಗಳವರೆಗೂ ಎಲ್ಲವನ್ನೂ ತಯಾರಿಸುತ್ತಿದ್ದ ಕಾಲವಿತ್ತು. ಆದರೆ, ಆಧುನಿಕತೆಯಿಂದಾಗಿ ಎಲ್ಲವೂ ಬದಲಾಗಿದೆ. ಆದರೆ, ಈಗಲೂ ಕಾಲ ಮಿಂಚಿಲ್ಲ, ಆಧುನಿಕತೆಗೆ ತಕ್ಕಂತೆ ಯುವಜನತೆ ತಮ್ಮ ಕೌಶಲ್ಯದ ಮೂಲಕ ಹೊಸ ಬದುಕು ಕಟ್ಟಿಕೊಳ್ಳಲು ವ್ಯಾಪಕ ಅವಕಾಶಗಳಿವೆ ಎಂದ ಅವರು, ಆಧುನಿಕತೆಗೆ ತಕ್ಕಂತೆ ಕೌಶಲ್ಯಾಭಿವೃದ್ದಿ ನೀಡುವ ಸಂಬಂಧ ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ ಎಂದರು.

ಇತ್ತೀಚಿನ ಯುವ ಸಮುದಾಯ ಎಲ್ಲರೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ತೇಲಾಡುತ್ತಿದ್ದಾರೆ. ಆದರೆ, ಎಲ್ಲರಿಗೂ ಉದ್ಯೋಗ ಸಿಗಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರ್ಯಾಯವಾಗಿ ಸರಕಾರಗಳು ಶಿಕ್ಷಣದಲ್ಲಿ ಮುಂದೆ ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಜತೆಗೆ ಸ್ವಯಂ ಉದ್ಯೋಗಗಳನ್ನು ರೂಪಿಸಿಕೊಳ್ಳಲು ಅಗತ್ಯವಾದ ಶಿಕ್ಷಣ ನೀಡಬೇಕಾದ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿ ಎಂದರು. ಕಾರ್ಯಕ್ರಮದಲ್ಲಿ ಡಾ.ಎಂ.ಜಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News