ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ ಸಿಐಡಿ: ಮುಹಮ್ಮದ್ ಉಬೇದುಲ್ಲಾ ಶರೀಫ್

Update: 2019-02-27 16:25 GMT

ಬೆಂಗಳೂರು, ಫೆ.27: ಬೆಳ್ಳಳ್ಳಿ ಗ್ರಾಮದಲ್ಲಿನ ಸರ್ವೆ ನಂ.55ರಲ್ಲಿನ 205 ಎಕರೆ ವಕ್ಫ್ ಭೂಮಿಯನ್ನು ದುರುಪಯೋಗಪಡಿಸಿಕೊಂಡಿದ್ದು, ಹಲವರಿಗೆ ಎನ್‌ಓಡಿ ನೀಡಿದಲ್ಲದೆ, ವಕ್ಫ್ ಭೂಮಿಯನ್ನು ಮಾರಾಟ ಮಾಡಿರುವುದಾಗಿ ನನ್ನ ಹಾಗೂ ಇನ್ನಿಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸಿಐಡಿ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಕೆ ಮಾಡಿದೆ ಎಂದು ಹಝ್ರತ್ ಮಾಣಿಕ್ ಶಾ ದರ್ಗಾ ಅಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್ ತಿಳಿಸಿದರು.

ಬುಧವಾರ ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ಕಾಂಪ್ಲೆಕ್ಸ್‌ನಲ್ಲಿರುವ ಹಝ್ರತ್ ಮಾಣಿಕ್ ಶಾ ದರ್ಗಾ ಸಮಿತಿಯ ಕಚೇರಿಯಲ್ಲಿ ಸುದ್ದಿಗೊಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಆಂಗ್ಲ ದಿನಪತ್ರಿಕೆಯೊಂದರಲ್ಲಿ ಕಳೆದ ಸಾಲಿನ ನ.9ರಂದು ನನ್ನ ವಿರುದ್ಧ ಬಂದಿದ್ದ ವರದಿಯಲ್ಲಿ, ನಾನು 205 ಎಕರೆ ವಕ್ಫ್ ಭೂಮಿಯನ್ನು ದುರುಪಯೋಗ ಪಡಿಸಿಕೊಂಡಿದ್ದು, ಹಲವಾರು ಮಂದಿಗೆ ಎನ್‌ಓಸಿ ನೀಡಿದಲ್ಲದೆ, ವಕ್ಫ್ ಭೂಮಿಯನ್ನು ಮಾರಾಟ ಮಾಡಿರುವುದಾಗಿ ಆರೋಪಿಸಲಾಗಿತ್ತು. ಜೊತೆಗೆ ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ 2014ರಲ್ಲಿ ಎಫ್‌ಐಆರ್ ದಾಖಲಿಸಿ, ಸಿಐಡಿ ತನಿಖೆ ನಡೆಯುತ್ತಿರುವುದಾಗಿ ತಿಳಿಸಲಾಗಿತ್ತು ಎಂದು ಅವರು ಹೇಳಿದರು.

ಖಾಸಗಿ ವ್ಯಕ್ತಿ ಎಂ.ಜೆ.ಅಲಿ ಎಂಬವರು ಈ ಸಂಬಂಧ ನೀಡಿದ್ದ ದೂರನ್ನು ಆಧರಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿ, ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್‌ ರಿಯಾಝ್ ಖಾನ್ ಹಾಗೂ ವಕ್ಫ್ ಬೋರ್ಡ್ ಸಿಇಓ ವಿರುದ್ಧ ದೂರು ದಾಖಲಿಸಿ, ಎಫ್‌ಐಆರ್ ದಾಖಲಿಸಿ, ಪ್ರಕರಣವನ್ನು ಸಿಐಡಿ ತನಿಖೆಗೆ ಶಿಫಾರಸ್ಸು ಮಾಡಿದ್ದರು ಎಂದು ಉಬೇದುಲ್ಲಾ ಶರೀಫ್ ತಿಳಿಸಿದರು.

ಅದರ ಆಧಾರದಲ್ಲಿ ಆಂಗ್ಲ ಪತ್ರಿಕೆಯಲ್ಲಿ ನನ್ನ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿ ವರದಿ ಪ್ರಕಟಿಸಲಾಗಿತ್ತು. ನಾಲ್ಕೂವರೆ ವರ್ಷಗಳು ವಿಚಾರಣೆ ಬಳಿಕ 2018ರ ಅಕ್ಟೋಬರ್ 1ರಂದು ಸಿಐಡಿ, ನನ್ನ ಹಾಗೂ ಇತರರ ವಿರುದ್ಧ ಮಾಡಲಾಗಿದ್ದ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ನ್ಯಾಯಾಲಯದಲ್ಲಿ ‘ಬಿ’ ರಿಪೋರ್ಟ್ ದಾಖಲು ಮಾಡಿದೆ ಎಂದು ಅವರು ಹೇಳಿದರು.

ನಾವು ವಕ್ಫ್ ಮಂಡಳಿಯ ಆಸ್ತಿಯ ಹಿತರಕ್ಷಣೆಗಾಗಿಯೇ ಕಾನೂನು ವ್ಯಾಪ್ತಿಯಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸುವ ಮೂಲಕ ಪ್ರಾಮಾಣಿಕ ಪ್ರಯತ್ನ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಸಿಐಡಿ ತನಿಖಾಧಿಕಾರಿಗಳು ‘ಬಿ’ ರಿಪೋರ್ಟ್‌ನಲ್ಲಿ ನಮೂದಿಸಿದ್ದಾರೆ ಎಂದು ಅವರು ತಿಳಿಸಿದರು.

ನಾವು ಸರಕಾರದಿಂದ ದೊರೆತಿದ್ದ ಅಧಿಕಾರವನ್ನು ಬಳಸಿಕೊಂಡು ಕಾನೂನಿನ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸಿದ್ದು, ವಕ್ಫ್ ಮಂಡಳಿ ಅಥವಾ ಸರಕಾರದ ಹಿತಾಸಕ್ತಿಗೆ ಧಕ್ಕೆಯಾಗುವಂತೆ ಅಥವಾ ಸರಕಾರದ ಆಸ್ತಿ, ಬೊಕ್ಕಸಕ್ಕೆ ನಷ್ಟವಾಗುವಂತ ಕೆಲಸಗಳನ್ನು ಮಾಡಿಲ್ಲ ಎಂದು ತನಿಖಾಧಿಕಾರಿಗಳು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ ಎಂದು ಉಬೇದುಲ್ಲಾ ಶರೀಫ್ ಹೇಳಿದರು.

ಸಿಐಡಿ ತನಿಖಾಧಿಕಾರಿಗಳು ಅಕ್ಟೋಬರ್ 1ರಂದೇ ನ್ಯಾಯಾಲಯಕ್ಕೆ ನಮ್ಮ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಬಿ ರಿಪೋರ್ಟ್ ಸಲ್ಲಿಸಿದ್ದರೂ, ನಮ್ಮ ತೇಜೋವಧೆ ಮಾಡಲು ಪತ್ರಿಕೆಯಲ್ಲಿ ಸುಳ್ಳು ವರದಿ ಪ್ರಕಟಿಸಲಾಗಿತ್ತು ಎಂದು ಅವರು ಹೇಳಿದರು.

ಒಂದೇ ಅವಧಿಗೆ ಎರಡು ವಕ್ಫ್ ಸಂಸ್ಥೆಗಳ ಅಧ್ಯಕ್ಷರಾಗಿ ಮುಂದುವರೆಯುವಂತಿಲ್ಲ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ಎಂ.ಝೆಡ್.ಅಲಿ ನೀಡಿದ್ದ ದೂರನ್ನು ಈಗಾಗಲೇ ಲೋಕಾಯುಕ್ತ ವಜಾಗೊಳಿಸಿದೆ. ನನ್ನ ವಿರುದ್ಧ ಆಧಾರ ರಹಿತ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಆಂಗ್ಲ ಪತ್ರಿಕೆ ಹಾಗೂ ಎಂ.ಝೆಡ್.ಅಲಿ ವಿರುದ್ಧ ಈಗಾಗಲೇ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ ಎಂದು ಅವರು ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿಗೆ ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದ ಎಂ.ಜೆ.ಅಲಿ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ನಮ್ಮ ವಕೀಲರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಉಬೇದುಲ್ಲಾ ಶರೀಫ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News