ರೈಲಿನಲ್ಲಿ ಕಳವು ಪ್ರಕರಣ: ಆರು ಜನರ ಬಂಧನ, 1 ಕೆಜಿ ಚಿನ್ನಾಭರಣ ಜಪ್ತಿ

Update: 2019-02-27 16:28 GMT

ಬೆಂಗಳೂರು, ಫೆ.27: ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪದಡಿ ಆರು ಜನರನ್ನು ಬಂಧಿಸಿರುವ ರೈಲ್ವೇ ಪೊಲೀಸರು, 1 ಕೆಜಿ ಚಿನ್ನಾಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ದೆಹಲಿಯ ಸುಲ್ತಾನ್ ಪ್ರಿಯಾ, ರಣವೀರ್ ಸಿಂಗ್ (43), ಸತ್ಬೀರ್ (46), ವಿನೋದ್ (31), ಲಲಿತ್ ಕುಮಾರ್ (27) ಹಾಗೂ ಹರಿಯಾಣದ ಇಸ್ಸಾರದ ಶುಭಾಷ್ (44) ಬಂಧಿತ ಆರೋಪಿಗಳೆಂದು ರೈಲ್ವೇ ವಿಭಾಗದ ಎಸ್ಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.

ಬಂಧಿತರು ಗುಂಪು ಕಟ್ಟಿಕೊಂಡು ದೆಹಲಿಯಿಂದ ಬಂದು ರಾಜ್ಯದ ವಿವಿಧೆಡೆ ರೈಲುಗಳಲ್ಲಿ ಪ್ರಯಾಣಿಕರಂತೆ ಸಂಚರಿಸಿ, ಲಗೇಜ್ ಇಳಿಸುವ ವೇಳೆ ಸಹಾಯ ಮಾಡುವ ನೆಪಮಾಡಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ರೈಲುಗಳಲ್ಲಿ ಪ್ರಯಾಣಿಕರ ಚಿನ್ನಾಭರಣಗಳು ಕಳವಾಗುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ, ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿ ಕೆಆರ್‌ಪುರಂ ರೈಲ್ವೆ ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News