ಅರಣ್ಯ ಹಕ್ಕು ಕಾಯ್ದೆ: ಸುಪ್ರೀಂ ಆದೇಶಕ್ಕೆ ತಡೆ ನೀಡಲು ಅರಣ್ಯ ವಾಸಿಗಳ ಒತ್ತಾಯ
ಬೆಂಗಳೂರು, ಫೆ.27: ಅರಣ್ಯ ಹಕ್ಕು ಕಾಯ್ದೆ ಸಂಬಂಧ ಇತ್ತೀಚಿಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಗ್ರೀವಾಜ್ಞೆ ಮೂಲಕ ತಡೆ ಹಿಡಿಯಬೇಕೆಂದು ಅರಣ್ಯವಾಸಿಗಳು ಒತ್ತಾಯ ಮಾಡಿದರು.
ಬುಧವಾರ ನಗರದ ಸಿಟಿ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಅರಣ್ಯವಾಸಿಗಳು, ಸರಕಾರ ತಮ್ಮ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ರಾಜ್ಯಸಭಾ ಸದಸ್ಯ ವಿಜಯ ರಾಘವನ್, ಪಾರಂಪರಿಕ ಅರಣ್ಯ ಭೂಮಿ ಸಾಗುವಳಿದಾರರು ಸಹ ಅರಣ್ಯ ನಾಶ ಮಾಡುವುದಿಲ್ಲ. ಅವರು ಅರಣ್ಯ ಅಂಚಿನಲ್ಲಿರುವ ಮರಗಳು ಇಲ್ಲದ, ಅರಣ್ಯ ವ್ಯಾಪ್ತಿಗೆ ಸೇರುವ ಪಡುಭೂಮಿಯನ್ನು ಸಾಗುವಳಿ ಮಾಡುತ್ತ ಬಂದಿದ್ದಾರೆ ಎಂದು ನುಡಿದರು.
ಅರಣ್ಯದಲ್ಲಿ ನೆಲೆಸಿರುವ ಆದಿವಾಸಿಗಳು ಅರಣ್ಯ ನಾಶ ಮಾಡುವುದಿಲ್ಲ. ಅವರು ಅರಣ್ಯವನ್ನು ಪೂಜಿಸಿ, ಅಲ್ಲಿನ ವಾತಾವರಣ, ವನ್ಯಜೀವಿ ಸಂಪತ್ತು ಉಳಿಸುತ್ತಾರೆ. ಆದರೆ, ಒಂದು ವೇಳೆ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿದರೆ, ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಕುಟುಂಬಗಳು ಬೀದಿಪಾಲು ಆಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ನಿತ್ಯಾನಂದ ಸ್ವಾಮಿ ಮಾತನಾಡಿ, ಕೇರಳ ರಾಜ್ಯದಲ್ಲಿ ಕೃಷಿ ಕಾರ್ಮಿಕರನ್ನು 60ನೆ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿ, ಮಾಸಿಕ ನಿವೃತ್ತಿ ವೇತನ ನೀಡಲಾಗುತ್ತದೆ. ಜೊತೆಗೆ, ಕೃಷಿ ಕಾರ್ಮಿಕರಿಗಾಗಿ ಸಮಗ್ರವಾದ ಕಲ್ಯಾಣ ಕಾಯ್ದೆ ಮತ್ತು ಕಲ್ಯಾಣ ಮಂಡಳಿ ನಿರ್ವಹಿಸುತ್ತಿರುವ ಕಲ್ಯಾಣ ನಿಧಿ ಸ್ಥಾಪಿಸಲಾಗಿದೆ. ಇದೇ ರೀತಿ ಕರ್ನಾಟಕದಲ್ಲೂ ಕೃಷಿ ಕಾರ್ಮಿಕರಿಗೆ ಸೌಲಭ್ಯ ದೊರೆಯಬೇಕೆಂದರು.