ಖುದ್ದು ಹಾಜರಾಗಲು ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿಗೆ ಹೈಕೋರ್ಟ್ ತಾಕೀತು
ಬೆಂಗಳೂರು, ಫೆ.27: ಪಶು ಆಸ್ಪತ್ರೆ ಮತ್ತು ಕರ್ನಾಟಕ ವಿದ್ಯುತ್ ಮಂಡಳಿಗಾಗಿ 1980ರಲ್ಲಿ ಸರ್ಜಾಪುರ ಗ್ರಾಮದಲ್ಲಿ ಎಸ್.ವಿ.ನಾರಾಯಣಮೂರ್ತಿ ಎಂಬುವರಿಂದ ಸ್ವಾಧೀನಪಡಿಸಿಕೊಂಡಿದ್ದ 23 ಗುಂಟೆ ಜಮೀನಿಗೆ ಪರಿಹಾರ ಕಲ್ಪಿಸುವುದಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡಲು ಮಾ.13ರಂದು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿಗೆ ಹೈಕೋರ್ಟ್ ತಾಕೀತು ಮಾಡಿದೆ.
ರಾಜ್ಯ ಸರಕಾರವು ತಮ್ಮ ಜಮೀನು ಸ್ವಾಧೀನಪಡಿಸಿಕೊಂಡು 38 ವರ್ಷ ಕಳೆದರೂ ಪರಿಹಾರ ಮಾತ್ರ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ ಎಸ್.ವಿ.ನಾರಾಯಣ ಮೂರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿತು.
ಪಶು ಆಸ್ಪತ್ರೆ ಮತ್ತು ಕರ್ನಾಟಕ ವಿದ್ಯುತ್ ಮಂಡಳಿಯ ಟ್ರಾನ್ಸ್‌ಮಿಷನ್ ಸ್ಥಾಪನೆಗೆ 1980ರಲ್ಲಿ ಸರ್ಜಾಪುರ ಗ್ರಾಮದಲ್ಲಿ ಅರ್ಜಿದಾರರಿಗೆ ಸೇರಿದ್ದ 23 ಗುಂಟೆ ಜಮೀನನ್ನು ಸರಕಾರ ವಶಪಡಿಸಿಕೊಂಡಿತ್ತು. ಆದರೆ, ವಶಪಡಿಸಿಕೊಂಡ ಜಮೀನಿಗೆ ಈವರೆಗೂ ಪರ್ಯಾಯ ಜಮೀನು ಕಲ್ಪಿಸಿಲ್ಲ ಹಾಗೂ ಪರಿಹಾರ ಹಣ ಸಹ ಒದಗಿಸಿಲ್ಲ. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರ, ತಮಗೆ ಪರಿಹಾರ ಕಲ್ಪಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿಗಳು, 1980ರಲ್ಲಿಯೇ ಅರ್ಜಿದಾರನ ಜಮೀನು ಸ್ವಾಧೀನಪಡಿಸಿಕೊಂಡರೂ ಈವರೆಗೂ ಪರಿಹಾರ ಕಲ್ಪಿಸುವ ಕಾರ್ಯ ಪ್ರಗತಿ ಕಂಡಿಲ್ಲ. ಹೀಗಾಗಿ, ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿಯು ಮಾರ್ಚ್ 13ರಂದು ವಿಚಾರಣೆಗೆ ಖುದ್ದು ಹಾಜರಾಗಿ, ಅರ್ಜಿದಾರಿರಗೆ ಪರಿಹಾರ ಕಲ್ಪಿಸಲು ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದರು.