×
Ad

ಶಾಸಕ ಮಹೇಶ್ ಕುಮಟಳ್ಳಿ ನಾಪತ್ತೆ ಪ್ರಕರಣ: ವಿಚಾರ ತಿಳಿಯದೆ ಅರ್ಜಿ ಸಲ್ಲಿಸುವುದು ಸೂಕ್ತವಲ್ಲ- ಹೈಕೋರ್ಟ್

Update: 2019-02-27 22:23 IST

ಬೆಂಗಳೂರು, ಫೆ.27: ಅಥಣಿ ಶಾಸಕ ಮಹೇಶ್ ಕುಮಟಳ್ಳಿ ನಾಪತ್ತೆಯಾಗಿದ್ದಾರೆ ಅವರನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿ ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದ ಪ್ರಕರಣವನ್ನು ಬುಧವಾರ ಹೈಕೋರ್ಟ್ ಮುಕ್ತಾಯಗೊಳಿಸಿದೆ.

ಅಲ್ಲದೇ ಅರ್ಜಿದಾರ ಪ್ರಮೋದ್ ದಯಾನಂದ ಹಿರೇಮನಿ ಅವರಿಗೆ ದಂಡ ವಿಧಿಸುವುದರಿಂದ ವಿನಾಯಿತಿ ನೀಡಿದ ಹೈಕೋರ್ಟ್, ‘ವಿಚಾರ ಏನೆಂದು ಖಚಿತಪಡಿಸಿಕೊಳ್ಳದೇ ಅತ್ಯುತ್ಸಾಹ, ಧಾವಂತ ಹಾಗೂ ಭಾವನಾತ್ಮಕತೆಗೆ ಒಳಗಾಗಿ ಅರ್ಜಿ ಸಲ್ಲಿಸಿ ಹೈಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಬಯಸುವುದು ಸೂಕ್ತವಲ್ಲ’ ಎಂದು ಅರ್ಜಿದಾರರಿಗೆ ಕಿವಿಮಾತು ಹೇಳಿ ನ್ಯಾ. ಕೆ.ಎನ್. ಫಣೀಂದ್ರ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಅರ್ಜಿಯನ್ನು ವಿಲೇವಾರಿಗೊಳಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಹೇಶ್ ಕುಮಟಳ್ಳಿ ಫೆ.20ರಂದು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿ ‘ತಮ್ಮನ್ನು ಯಾರೂ ಅಪಹರಿಸಿಲ್ಲ, ಯಾರೊಬ್ಬರೂ ನನ್ನನ್ನು ಅಕ್ರಮ ಬಂಧನದಲ್ಲಿ ಇರಿಸಿಕೊಂಡಿಲ್ಲ’ ಎಂದು ಪ್ರಮಾಣಪತ್ರ ಸಲ್ಲಿಸಿದ್ದರು. ಈ ನಡುವೆ ಕ್ಷುಲ್ಲಕ ವಿಚಾರ ಇಟ್ಟುಕೊಂಡು ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕೆ ಅರ್ಜಿದಾರರಿಗೆ ದೊಡ್ಡ ಮೊತ್ತದ ದಂಡ ವಿಧಿಸಬೇಕು ಎಂದು ಸರಕಾರದ ಪರ ವಕೀಲರು ಮನವಿ ಮಾಡಿದ್ದರು.

ಆಗ ಶಾಸಕರ ಪ್ರಮಾಣಪತ್ರ ದಾಖಲಿಸಿಕೊಂಡಿದ್ದ ನ್ಯಾಯಪೀಠ, ಮಹೇಶ್ ಕುಮಟಳ್ಳಿ ಹಾಗೂ ರಮೇಶ್ ಜಾರಕಿಹೊಳಿ ಇವರಿಬ್ಬರಿಗೆ ಸೀಮಿತವಾಗಿ ಅನ್ವಯವಾಗುವಂತೆ ಅರ್ಜಿ ವಜಾಗೊಳಿಸಿ, ದಂಡ ವಿಧಿಸುವ ಕುರಿತ ವಿಚಾರಣೆಗೆ ಅರ್ಜಿಯನ್ನು ಬಾಕಿ ಇರಿಸಿಕೊಂಡಿತ್ತು. ಅದರಂತೆ ಬುಧವಾರ (ಫೆ.27) ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಶಾಸಕರು ನಿಮ್ಮ (ಅರ್ಜಿದಾರರ) ಸಂಬಂಧಿಯೂ ಅಲ್ಲ. ಹೀಗಿರುವಾಗ ಅವರು ಕಾಣೆಯಾಗಿದ್ದಾರೋ, ಅಕ್ರಮ ಬಂಧನದಲ್ಲಿ ಇರಿಸಿಕೊಳ್ಳಲಾಗಿದೆಯೋ ಎಂಬುದು ಖಾತರಿಪಡಿಸಿಕೊಳ್ಳದೇ ಹೇಬಿಯಸ್ ಅರ್ಜಿ ಸಲ್ಲಿಸಿದ್ದು, ಸರಿಯಲ್ಲ ಎಂದಷ್ಟೇ ಹೇಳಿ, ದಂಡ ವಿಧಿಸುವುದರಿಂದ ವಿನಾಯಿತಿ ನೀಡಿತು. ಈ ಮೂಲಕ ಅರ್ಜಿಯನ್ನು ಅಂತಿಮ ವಿಲೇವಾರಿಗೊಳಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿ ನ್ಯಾಯಪೀಠ ಆದೇಶಿಸಿತು.

ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಅಕ್ರಮ ಬಂಧನಲ್ಲಿ ಇಟ್ಟುಕೊಂಡಿದ್ದು, ಅವರನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಬೆಳಗಾವಿ ಜಿಲ್ಲೆ ಅಥಣಿಯ ವಕೀಲ ಪ್ರಮೋದ ದಯಾನಂದ ಹಿರೇಮನಿ ಫೆ.8ರಂದು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News