ಪ್ರಧಾನಮಂತ್ರಿ ಸಮ್ಮಾನ್ ಯೋಜನೆ: ಪಹಣಿ ಪಡೆಯಲು ತಾಲೂಕು ಕಚೇರಿಗಳಲ್ಲಿ ರೈತರ ನೂಕುನುಗ್ಗಲು !

Update: 2019-02-27 19:03 GMT

ಶಿವಮೊಗ್ಗ, ಫೆ. 27: ಕೇಂದ್ರ ಸರ್ಕಾರವು ಬಜೆಟ್‍ನಲ್ಲಿ ಘೋಷಿಸಿದಂತೆ, 2 ಎಕರೆ ಕೃಷಿ ಜಮೀನು ಹೊಂದಿರುವ ರೈತರ ಬ್ಯಾಂಕ್ ಖಾತೆಗೆ 6 ಸಾವಿರ ರೂ. ಸಂದಾಯ ಮಾಡುವುದಾಗಿ ಘೋಷಿಸಿದೆ. ಈಗಾಗಲೇ ಪ್ರಥಮ ಕಂತಿನ 2 ಸಾವಿರ ರೂ. ಪಾವತಿಸುವ ಪ್ರಕ್ರಿಯೆಗೆ ಚಾಲನೆ ಕೂಡ ದೊರಕಿದೆ. ಮತ್ತೊಂದೆಡೆ ಈ ಸೌಲಭ್ಯ ಪಡೆಯುವುದಕ್ಕಾಗಿ ರೈತರು, ಚಾಲ್ತಿ ಸಾಲಿನ ಪಹಣಿ ಪತ್ರ ಪಡೆಯಲು ತಾಲೂಕು ಕಚೇರಿಗಳಿಗೆ ಮುಗಿ ಬೀಳಲಾರಂಭಿಸಿದ್ದಾರೆ.

ಹೌದು. ಕಳೆದ ಕೆಲ ದಿನಗಳಿಂದ ಶಿವಮೊಗ್ಗ ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕು ಕಚೇರಿ ಆವರಣದಲ್ಲಿ, ಪಹಣಿ ಪತ್ರ ಪಡೆಯಲು ರೈತರ ಮಾರುದ್ದ ಸಾಲು ಕಂಡುಬರುತ್ತಿದೆ. ನೂಕುನುಗ್ಗಲು ಏರ್ಪಡುತ್ತಿದೆ. ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದೆ. ಇದು ತಾಲೂಕು ಕಚೇರಿ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಗ್ರಾ.ಪಂ.ಗಳ ನಿರ್ಲಕ್ಷ್ಯ: ರಾಜ್ಯ ಸರ್ಕಾರವು ಗ್ರಾಮ ಪಂಚಾಯತ್ ಆಡಳಿತಗಳನ್ನು ಮೇಲ್ದರ್ಜೆಗೇರಿಸಿದೆ. ವಿವಿಧ ರೀತಿಯ ಪ್ರಮಾಣ ಪತ್ರ ಪಡೆಯಲು ಗ್ರಾಮಸ್ಥರು ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ, ಗ್ರಾ.ಪಂ. ಹಾಗೂ ನಾಡ ಕಚೇರಿಗಳಲ್ಲಿ ಪಹಣಿ ಪತ್ರ ಸೇರಿದಂತೆ 101 ರೀತಿಯ ದಾಖಲೆ ನೀಡುವ ವ್ಯವಸ್ಥೆ ಜಾರಿಗೊಳಿಸಿದೆ. ಈ ಮೂಲಕ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡಲು ಮುಂದಾಗಿದೆ. ಆದರೆ ಬಹುತೇಕ ಗ್ರಾಪಂ ಗಳು, ರಾಜ್ಯ ಸರ್ಕಾರದ ಆದೇಶ ಪಾಲನೆ ಮಾಡದೆ ಉಲ್ಲಂಘನೆ ಮಾಡುತ್ತಿವೆ. ಪಹಣಿ ಪತ್ರ ಸೇರಿದಂತೆ ಸರ್ಕಾರ ಸೂಚಿಸಿದ ಯಾವೊಂದು ಪ್ರಮಾಣ ಪತ್ರಗಳನ್ನು ನಾಗರಿಕರಿಗೆ ವಿತರಿಸುತ್ತಿಲ್ಲ ತಾಲೂಕು ಕಚೇರಿಗೆ ತೆರಳಿ ಪಡೆಯುವಂತೆ ಸಾಗ ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. 

ಈ ಕಾರಣದಿಂದಲೇ, ಪ್ರಸ್ತುತ ತಾಲೂಕು ಕಚೇರಿಗಳ ಮುಂಭಾಗ ಪಹಣಿ ಪತ್ರ ಪಡೆಯಲು ರೈತರು ಉದ್ದದ ಸಾಲು ಕಂಡುಬರುತ್ತಿದೆ. ಸುಲಭವಾಗಿ ದೊರೆಯುವ ಪಹಣಿ ಪತ್ರಕ್ಕಾಗಿ ರೈತರು ಹಣ, ಸಮಯ ವ್ಯರ್ಥ ಮಾಡಿಕೊಳ್ಳುವಂತಾಗಿದೆ. ತಮ್ಮೆಲ್ಲ ಕೆಲಸ ಕಾರ್ಯಬಿಟ್ಟು ನಗರ-ಪಟ್ಟಣಗಳಿಗೆ ಅಲೆದಾಡುವಂತಾಗಿದೆ. 

'ಪಹಣಿ ಪತ್ರ ಸೇರಿದಂತೆ 101 ದಾಖಲೆಗಳನ್ನು ಗ್ರಾಪಂ ನಲ್ಲಿಯೇ ಪಡೆಯಬಹುದು ಎಂದು ಸರ್ಕಾರ ಹೇಳುತ್ತಿದೆ. ಆದರೆ ಗ್ರಾಪಂ ಗಳಲ್ಲಿನ ವಾಸ್ತವ ಚಿತ್ರಣವೇ ಬೇರೆ ರೀತಿಯಿದೆ. ಪ್ರತಿಯೊಂದಕ್ಕೂ ಸರ್ವರ್ ಡೌನ್ ಸಮಸ್ಯೆಯನ್ನು ಅಲ್ಲಿನ ಅಧಿಕಾರಿ-ಸಿಬ್ಬಂದಿ ಮುಂದಿಡುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೆ ಕಾದು ಕುಳಿತರೂ ಪ್ರಮಾಣ ಪತ್ರ ನೀಡುವುದಿಲ್ಲ. ಈ ಕಾರಣದಿಂದ ಚಾಲ್ತಿ ಸಾಲಿನ ಪ್ರಮಾಣ ಪತ್ರ ಪಡೆಯಲು ತಾಲೂಕು ಕಚೇರಿಗೆ ಆಗಮಿಸಿದ್ದೇನೆ' ಎಂದು ಸಿದ್ದಪ್ಪ ಎಂಬುವ ರೈತ ತಿಳಿಸಿದರು. 

ಸೂಚನೆ ನೀಡಲಿ: ಸರ್ಕಾರದ ಸೂಚನೆಯ ಹೊರತಾಗಿಯೂ ಗ್ರಾ.ಪಂ ಗಳು ನಾಗರಿಕರಿಗೆ ನಿಗದಿಪಡಿಸಿದ ಪ್ರಮಾಣ ಪತ್ರ ನೀಡುತ್ತಿಲ್ಲ. ಕಾರ್ಯಭಾರದ ಒತ್ತಡ ಮುಂದಿಟ್ಟು, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡುತ್ತಿವೆ. ಈ ಕುರಿತಂತೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳು ಗಮನಹರಿಸಿಲ್ಲವೇಕೆ? ಎಂಬುವುದು ಯಕ್ಷಪ್ರಶ್ನೆಯಾಗಿದೆ. 

ಇನ್ನಾದರೂ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಸರ್ಕಾರದ ಸೂಚನೆ ಉಲ್ಲಂಘಿಸುವ ಗ್ರಾ.ಪಂ.ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿ-ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಬೇಕು. ಈ ಮೂಲಕ ಸೂಕ್ತ ಸೌಲಭ್ಯ ದೊರಕಿಸುವ ಕಾರ್ಯ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ. 

ಡಿಸಿ, ಸಿಇಒಗೆ ಪತ್ರ: ಶಿವಮೊಗ್ಗ ತಹಶೀಲ್ದಾರ್ ಬಿ.ಎನ್.ಗಿರೀಶ್

ರಾಜ್ಯ ಸರ್ಕಾರವು ಪಹಣಿ ಪತ್ರ ಸೇರಿದಂತೆ 101 ದಾಖಲೆಗಳನ್ನು ಗ್ರಾಮ ಪಂಚಾಯತ್ ಗಳ ಮೂಲಕ ಪಡೆಯಲು ಅವಕಾಶ ಕಲ್ಪಿಸಿದೆ. ಈ ಕುರಿತಂತೆ ಆದೇಶ ಕೂಡ ಹೊರಡಿಸಿದೆ. ಆದಾಗ್ಯೂ ಕೆಲ ಗ್ರಾಮ ಪಂಚಾಯತ್ ಆಡಳಿತಗಳು ಪಹಣಿ ಪತ್ರ ಸೇರಿದಂತೆ ಕೆಲ ದಾಖಲೆಗಳನ್ನು ಗ್ರಾಮಸ್ಥರಿಗೆ ವಿತರಣೆ ಮಾಡುತ್ತಿಲ್ಲವೆಂಬ ದೂರುಗಳನ್ನು ಸ್ವತಃ ಗ್ರಾಮಸ್ಥರೇ ಹೇಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಪ್ರಧಾನಮಂತ್ರಿ ಸಮ್ಮಾನ್ ಯೋಜನೆಯ ಸೌಲಭ್ಯಕ್ಕಾಗಿ ಚಾಲ್ತಿ ಸಾಲಿನ ಪ್ರಮಾಣ ಪತ್ರ ಪಡೆಯಲು ಕಳೆದ ಕೆಲ ದಿನಗಳಿಂದ ನೂರಾರು ಸಂಖ್ಯೆಯ ರೈತರು ತಾಲೂಕು ಕಚೇರಿಗೆ ಆಗಮಿಸುತ್ತಿದ್ದಾರೆ. ಇದರಿಂದ ಕಚೇರಿ ಆವರಣದಲ್ಲಿ ನೂಕುನುಗ್ಗಲು ಉಂಟಾಗುತ್ತಿದೆ. ಪ್ರತ್ಯೇಕ ಕೌಂಟರ್ ಕೂಡ ತೆರೆಯಲಾಗಿದೆ' ಎಂದು ಶಿವಮೊಗ್ಗ ತಹಶೀಲ್ದಾರ್ ಬಿ.ಎನ್.ಗಿರೀಶ್‍ರವರು ತಿಳಿಸಿದ್ದಾರೆ. 

ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೆಲ ಗ್ರಾ.ಪಂ.ಗಳು ಸರ್ಕಾರದ ಸೂಚನೆಯಂತೆ ಪ್ರಮಾಣ ಪತ್ರ ವಿತರಣೆ ಮಾಡದಿರುವ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅವರು ಪ್ರಶ್ನೆಯೊಂದಕ್ಕೆ ಸ್ಪಷಪಡಿಸಿದ್ದಾರೆ. 

ಪ್ರಧಾನಮಂತ್ರಿ ರೈತ ಸಮ್ಮಾನ್ ಯೋಜನೆಯಡಿ ರೈತ ಸಂಪರ್ಕ ಕೇಂದ್ರಗಳಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಗಳು, ಒಂದು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಪಹಣಿ ವಿವರ ನೀಡಬೇಕಾಗಿದೆ. ಇದರಲ್ಲಿ ಪಹಣಿ ಪತ್ರವನ್ನು ಸ್ಥಳೀಯ ಗ್ರಾಪಂ ಕಚೇರಿಗಳಿಂದಲೇ ರೈತರು ಪಡೆಯಬಹುದಾಗಿದೆ ಎಂದು ಬಿ.ಎನ್.ಗಿರೀಶ್‍ರವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ. 

ಗಮನಹರಿಸುವುದೆ ಜಿಲ್ಲಾ ಪಂಚಾಯತ್ ಆಡಳಿತ?

ಬಹುತೇಕ ಗ್ರಾಮ ಪಂಚಾಯತ್ ಆಡಳಿತಗಳು, ರಾಜ್ಯ ಸರ್ಕಾರದ ಸೂಚನೆಯ ಹೊರತಾಗಿಯೂ ಗ್ರಾಮಸ್ಥರಿಗೆ ಪ್ರಮಾಣಪತ್ರಗಳ ವಿತರಣೆ ಮಾಡುತ್ತಿಲ್ಲ. ಇದರಿಂದ ಗ್ರಾಮಸ್ಥರು ತಾಲೂಕು ಕಚೇರಿ, ನಾಡ ಕಚೇರಿಗಳಿಗೆ ಎಡತಾಕುವುದು ಮುಂದುವರಿದಿದೆ. ಆದರೆ ಈ ಬಗ್ಗೆ ಸಂಬಂಧಿಸಿದ ಇಲಾಖೆಗಳು ಯಾವುದೇ ಕ್ರಮಕೈಗೊಳ್ಳದೆ, ನಿರ್ಲಕ್ಷ್ಯವಹಿಸಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ-ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಜಿಲ್ಲಾ ಪಂಚಾಯತ್ ಆಡಳಿತ ಇತ್ತ ಗಮನಹರಿಸಬೇಕು. ಗ್ರಾ.ಪಂ.ಗಳ ಮೂಲಕ ನಿರ್ದಿಷ್ಟ ಪ್ರಮಾಣಪತ್ರ ವಿತರಣೆಗೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಾರೆ.

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News